
ದಾವಣಗೆರೆ, 11 ಮಾರ್ಚ್ (ಹಿ.ಸ.):
ಆ್ಯಂಕರ್:
ಕಾನೂನು ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಹಾಗೂ ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಮಾ.14ರಂದು ದಾವಣಗೆರೆ ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ. ವೇಲಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ವ್ಯವಹಾರಗಳು, ಚೆಕ್ ಬೌನ್ಸ್, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ವಿಮಾ, ಭೂಸ್ವಾಧೀನ, ಕೌಟುಂಬಿಕ ಕಲಹ ಹಾಗೂ ಆಸ್ತಿ ವಿಭಜನೆ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಚನ್ನಗಿರಿ ನ್ಯಾಯಾಲಯದ ಎಂ.ವಿ.ಸಿ ಪ್ರಕರಣವೊಂದನ್ನು ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ರೂ.7.50 ಲಕ್ಷ ಪರಿಹಾರ ಮೊತ್ತದೊಂದಿಗೆ ಇತ್ಯರ್ಥಪಡಿಸಿರುವುದು ಜಿಲ್ಲೆಯ ಮೊದಲ ತಂತ್ರಜ್ಞಾನ ಆಧಾರಿತ ಸಂಧಾನ ಪ್ರಕರಣವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ಸುಮಾರು 5,000 ರಾಜಿಯಾಗಬಹುದಾದ ಪ್ರಕರಣಗಳನ್ನು ಗುರುತಿಸಿದ್ದು, ಅಗತ್ಯ ನೋಟಿಸ್ ಜಾರಿಗೊಳಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲದವರು ಆನ್‌ಲೈನ್ ಮೂಲಕವೂ ಭಾಗವಹಿಸುವ ಅವಕಾಶ ಇದೆ.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ವಿವಿಧ ನ್ಯಾಯಾಲಯಗಳಲ್ಲಿದ್ದ 4,000 ಪ್ರಕರಣಗಳನ್ನು 90 ದಿನಗಳಲ್ಲಿ 1,000ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಅಧೀಕ್ಷಕ ಡಾ. ಶೇಖರ್ ಹೆಚ್.ಟಿ. ರಾಜಿಯಾಗಬಲ್ಲ 770 ಪ್ರಕರಣಗಳಲ್ಲಿ 407 ಈಗಾಗಲೇ ಇತ್ಯರ್ಥಗೊಂಡಿದ್ದು, ಉಳಿದವುಗಳನ್ನು ಲೋಕ್ ಅದಾಲತ್‌ನಲ್ಲಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ 42,000 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ಸುಮಾರು 21,000ಕ್ಕೂ ಹೆಚ್ಚು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa