
ಕೋಲಾರ, ಮಾರ್ಚ್ ೧೧, (ಹಿ.ಸ):
ಆಂಕರ್ : ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಅಗಲಕೋಟೆ ಗ್ರಾಮದ ಜಮೀನುಗಳಿಗೆ ಸಂಬ0ಧಿಸಿದ ವಿವಾದ ಹಾಗೂ ಪ್ರಸಕ್ತ ಸ್ಥಿತಿಗತಿಯ ವಿವರಗಳ ಕುರಿತಂತೆ ಕಂದಾಯ ಸಚಿವರಾದ ಕೃಷ್ಣಬೈರೇ ಗೌಡ ಅವರು ಸದನದಲ್ಲಿ ಸ್ಪಷ್ಟವಾದ ಮಾಹಿತಿಯನ್ನು ನೀಡಿದರು.
ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಕೇಶವ ಪ್ರಸಾದ್ ಎಸ್. ಅವರು ನಿಯಮ ೩೩೦ರ ಅಡಿಯಲ್ಲಿ ಮಂಡಿಸಿರುವ ಸೂಚನೆಗೆ ಸಂಬ0ಧಿಸಿದ0ತೆ ಉತ್ತರಿಸಿದ ಕಂದಾಯ ಸಚಿವರು, ಮಾಲೂರು ತಾಲೂಕಿನ ಅಗಲಕೋಟೆ ಗ್ರಾಮದಲ್ಲಿ ಶಿಕ್ಷಣ ಇಲಾಖೆಗೆ ದಾನವಾಗಿ ನೀಡಲಾದ ಸುಮಾರು ೫೦ ಎಕರೆ ೨೬ ಗುಂಟೆ ಜಮೀನನ್ನು ಅತಿಕ್ರಮಣ ಮಾಡಲಾಗಿದ್ದು, ಖಾತೆ ಬದಲಾವಣೆ ಮತ್ತು ಸರ್ಕಾರಿ ದಾಖಲೆಗಳಲ್ಲಿ ವಂಚನೆ ಮಾಡಲಾಗಿದೆ ಎಂದು ಮಾನ್ಯ ಸದಸ್ಯರು ಸರ್ಕಾರದ ಗಮನ ಸೆಳೆದಿದ್ದರು.
೧೯೫೫ರ ದಾನದ ಮೂಲ ಉದ್ದೇಶವನ್ನು ಉಲ್ಲಂಘಿಸಿ, ಸಾರ್ವಜನಿಕ ಶಿಕ್ಷಣಕ್ಕಾಗಿ ಮೀಸಲಿಟ್ಟ ಆಸ್ತಿಗೆ ಹಾನಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪದ ಮೇಲೆ ತುರ್ತು ವಿಚಾರಣೆಗೆ ಒತ್ತಾಯಿಸಲಾಗಿತ್ತು.
ಸರ್ಕಾರದ ವತಿಯಿಂದ ನಡೆಸಲಾದ ತನಿಖೆಯ ಪ್ರಕಾರ, ಈ ಜಮೀನಿನ ಇತಿಹಾಸವನ್ನು ನೋಡಿದರೆ ಅಗಲಕೋಟೆ ಗ್ರಾಮವು ಮೂಲತಃ 'ಜೋಡಿ ಇನಾಂ' ಗ್ರಾಮವಾಗಿದ್ದು, ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ (ಸಂಖ್ಯೆ: ಐ.ಎನ್.ಎ/೨೨೯೨/೧೯೫೯-೬೦, ದಿನಾಂಕ: ೩೧/೦೮/೬೨) ಶ್ರೀ ಟಿ.ಜೆ. ಶ್ರೀನಿವಾಸಲು ಬಿನ್ ಟಿ.ಹೆಚ್. ಗಂಗಪ್ಪ ರವರಿಗೆ ಸುಮಾರು ೨೫೧ ಎಕರೆ ಜಮೀನು ಮಂಜೂರಾಗಿತ್ತು. ನಂತರದ ದಿನಗಳಲ್ಲಿ, ಈ ಜಮೀನು ವಿವಿಧ ವಾರಸುದಾರರಾದ ಎ.ಎಸ್. ನಂದಗೋಪಾಲ, ಎ.ಎಸ್. ಸುರೇಶ್, ಎ.ಎಸ್. ಭೀಮ ಕುಮಾರ್ ಸೇರಿದಂತೆ ಇತರ ಎಂಟು ಜನರ ಹೆಸರಿಗೆ ವಿಭಾಗವಾಗಿ ಖಾತೆಯಾಗಿರುವುದು ಪಹಣಿ ದಾಖಲೆಗಳಿಂದ ತಿಳಿದುಬಂದಿದೆ.
ಕಾಲಕ್ರಮೇಣ ಈ ಜಮೀನುಗಳು ಹಲವು ಕೈ ಬದಲಾಗಿವೆ. ಕೆ. ಗಜೇಂದ್ರ, ಜಿ.ಕೆ. ಕೃಷ್ಣಪ್ಪ, ಕೆ. ಗಂಗಾಧರ ಮತ್ತು ಕೆ. ಗಾಯತ್ರಿ ಎಂಬುವವರಿAದ ಜಮೀನನ್ನು ಖರೀದಿಸಲಾಗಿತ್ತು. ಅಂತಿಮವಾಗಿ, ಮೆ. ಯುನೈಟೆಡ್ ಗ್ರೀನ್ ಹುಡ್ಸ್ ಸಂಸ್ಥೆಯ ಪರವಾಗಿ ಅದರ ವ್ಯವಸ್ಥಾಪಕ ಪಾಲುದಾರರಾದ ಎಂ. ಪಂಚಾಕ್ಷರಯ್ಯ ಹಿರೇಮಠ್ ಮತ್ತು ಆರ್. ಗಂಗಾಧರಯ್ಯ ರವರ ಹೆಸರಿಗೆ ಕ್ರಯದ ಮೂಲಕ ಖಾತೆ ವರ್ಗಾವಣೆಯಾಗಿದೆ.
ಪ್ರಸಕ್ತವಾಗಿ, ಈ ಜಮೀನಿನ ಮಾಲೀಕರು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದರು. ದಿನಾಂಕ: ೨೮/೦೫/೨೦೨೫ ರಂದು ಅಫಿಡವಿಟ್ ಆಧಾರದ ಮೇಲೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಮಾಲೂರು ತಹಶೀಲ್ದಾರ್, ಕೋಲಾರ ಸಹಾಯಕ ಕಮಿಷನರ್ ಮತ್ತು ನಗರ ಹಾಗೂ ಗ್ರಾಮಾಂತರ ಯೋಜನಾ ಇಲಾಖೆಯ ತಾಂತ್ರಿಕ ಅಭಿಪ್ರಾಯಗಳನ್ನು ಪಡೆಯಲಾಗಿದೆ.
ಈ ಎಲ್ಲಾ ವರದಿಗಳನ್ನು ಆಧರಿಸಿ, ಜಿಲ್ಲಾಧಿಕಾರಿಗಳು ಕೆಲವು ಷರತ್ತುಗಳನ್ನು ವಿಧಿಸಿ ದಿನಾಂಕ: ೦೮/೦೭/೨೦೨೫ ರಂದು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಆದೇಶವನ್ನು ಹೊರಡಿಸಿರುತ್ತಾರೆ ಎಂದು ತಿಳಿಸಿದರು. ಶಿಕ್ಷಣ ಇಲಾಖೆಯ ಜಮೀನು ಅತಿಕ್ರಮಣದ ಬಗ್ಗೆ ಎದ್ದಿರುವ ದೂರುಗಳು ಮತ್ತು ಈಗಿನ ಭೂ ಪರಿವರ್ತನೆ ಪ್ರಕ್ರಿಯೆಗಳ ನಡುವಿನ ವ್ಯತ್ಯಾಸಗಳನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಸಾರ್ವಜನಿಕ ಆಸ್ತಿಗೆ ಧಕ್ಕೆಯಾಗದಂತೆ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್