ಬಯಲುಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಭರವಸೆ
ಬಯಲುಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಭರವಸೆ
ಸಚಿವ ಪ್ರಿಯಾಂಕ ಖರ್ಗೆ


ಕೋಲಾರ, ಮಾರ್ಚ್ ೧೧, (ಹಿ.ಸ):

ಆಂಕರ್ : ರಾಜ್ಯದ ಬಯಲುಸೀಮೆ ಜಿಲ್ಲೆಗಳಾದ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಸರ್ಕಾರವು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಗೋವಿಂದ ರಾಜು, ರವಿಕುಮಾರ್, ಸೂರಜ್ ರೇವಣ್ಣ, ನಿರಾಣಿ ಹಣಮಂತ ರುದ್ರಪ್ಪ ಸೇರಿದಂತೆ ಹಲವು ಸದಸ್ಯರು ನಿಯಮ ೩೩೦ರ ಅಡಿಯಲ್ಲಿ ಮಂಡಿಸಿದ ಗಮನಸೆಳೆಯುವ ಸೂಚನೆಗೆ ಸಚಿವರು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಜಲ ಜೀವನ್ ಮಿಷನ್ (ಎಎಒ) ಅಡಿಯಲ್ಲಿ ಕೊಳವೆಬಾವಿ ಹಾಗೂ ಭೂ ಮೇಲ್ಮೈ ಸುಸ್ಥಿರ ಜಲಮೂಲಗಳನ್ನು ಆಧರಿಸಿ ಏಕ ಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳು ಪ್ರಸ್ತುತ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಜನವಸತಿಗಳಿಗೆ ನೀರು ಪೂರೈಸಲಾಗುತ್ತಿದೆ.

ಬಯಲುಸೀಮೆ ಜಿಲ್ಲೆಗಳ ಜೊತೆಗೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಎತ್ತಿನಹೊಳೆ ಯೋಜನೆಯ ಮೂಲಕ ಒಟ್ಟು ೨೪.೦೧ ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ, ಗ್ರಾಮೀಣ ಜನವಸತಿಗಳ ಕುಡಿಯುವ ನೀರಿಗಾಗಿ ೮.೩೯೩ ಟಿ.ಎಂ.ಸಿ ನೀರನ್ನು ಮೀಸಲಿಡಲಾಗಿದೆ. ಈ ಯೋಜನೆಯನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಸದ್ಯಕ್ಕೆ ಲಭ್ಯವಿರುವ ನೀರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂಲಕ ಕೆರೆಗಳಿಗೆ ತುಂಬಿಸಿ, ಅಲ್ಲಿಂದ ಶುದ್ಧೀಕರಿಸಿ ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ವಿಶ್ವೇಶ್ವರಯ್ಯ ಜಲ ನಿಗಮದ ವರದಿಯಂತೆ ಕಾಮಗಾರಿಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ಜೂನ್ ೨೦೨೬ ರ ಒಳಗಾಗಿ ತುಮಕೂರು ಜಿಲ್ಲಾ ವ್ಯಾಪ್ತಿಯ ಕಾಲುವೆ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳಲಿವೆ (ಅರಣ್ಯ ಇಲಾಖೆಯ ತೀರುವಳಿ ದೊರೆತಲ್ಲಿ).ಅಕ್ಟೋಬರ್ ೨೦೨೭ರ ಒಳಗಾಗಿ ಈ ಯೋಜನೆಯ ಎಲ್ಲಾ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿದೆ.

ತಾಲ್ಲೂಕುವಾರು ನೀರಿನ ಅಗತ್ಯಕ್ಕೆ ಅನುಗುಣವಾಗಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಾಥಮಿಕ ಯೋಜನಾ ವರದಿ ಸಿದ್ಧಪಡಿಸಲು ಅನುಮೋದನೆ ನೀಡಲಾಗಿದೆ. ಅನುದಾನದ ಲಭ್ಯತೆ ಆಧರಿಸಿ ಹಂತ ಹಂತವಾಗಿ ಈ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande