


ಗದಗ, 10 ಮಾರ್ಚ್ (ಹಿ.ಸ.)
ಆ್ಯಂಕರ್:- ಗದಗ ತಾಲೂಕಿನ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿಯ ಕಾಲಘಟ್ಟದ ಬಗ್ಗೆ ಇಷ್ಟುದಿನ ಇದ್ದ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಕಳೆದ ಜನವರಿ 10 ರಂದು ಪತ್ತೆಯಾದ ಚಿನ್ನದ ಆಭರಣಗಳ ಬಗ್ಗೆ ಸರ್ಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿದ್ದು, ಈ ಆಭರಣಗಳು ಸುಮಾರು 500 ರಿಂದ 600 ವರ್ಷಗಳ ಹಳೆಯ ಕಾಲದವು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಮುಚ್ಚುವ ವೇಳೆ ನೆಲದಡಿ ಸುಮಾರು 456 ಗ್ರಾಂ ಚಿನ್ನದ ಆಭರಣಗಳು ಪತ್ತೆಯಾಗಿದ್ದವು. ಈ ಸುದ್ದಿ ರಾಜ್ಯದಷ್ಟೇ ಅಲ್ಲದೆ ದೇಶ–ವಿದೇಶದಲ್ಲೂ ಭಾರಿ ಕುತೂಹಲ ಮೂಡಿಸಿತ್ತು. ಆದರೆ ಈ ಆಭರಣಗಳು ಯಾವ ಕಾಲಘಟ್ಟಕ್ಕೆ ಸೇರಿವೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪುರಾತತ್ವ ತಜ್ಞರು ಹಾಗೂ ಇತಿಹಾಸಕಾರರನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಿ ಪರಿಶೀಲನೆ ನಡೆಸಲು ಮುಂದಾಗಿತ್ತು.
ಈ ಸಮಿತಿಯಲ್ಲಿ ಪುರಾತತ್ವ ಶಾಸ್ತ್ರಜ್ಞರು ಹಾಗೂ ಸಮಿತಿ ಅಧ್ಯಕ್ಷರಾದ ಎಂ.ಎಸ್. ಕೃಷ್ಣಮೂರ್ತಿ, ಕಲಾ ಇತಿಹಾಸಗಾರರಾದ ರಾಘವೇಂದ್ರ ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಶಾಸನ ತಜ್ಞ ಹಾಗೂ ಇತಿಹಾಸಗಾರ ಹನುಮಾಪಕ್ಷಿ ಗೋಗಿ, ಗೋಲ್ಡ್ ಸ್ಮಿತ್ ಹಾಗೂ ರತ್ನಶಾಸ್ತ್ರಜ್ಞ ಪ್ರಭು ಕಮ್ಮಾರ ಹಾಗೂ ಪುರಾತತ್ವ ಇಲಾಖೆ ಅಧಿಕಾರಿ ಡಾ. ಶೇಜೇಶ್ವರ ಸೇರಿದ್ದರು.
ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ನೇತೃತ್ವದಲ್ಲಿ ಈ ತಂಡವು ಗದಗ ಜಿಲ್ಲಾಡಳಿತ ಭವನದಲ್ಲಿ ಖಜಾನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದ ಆಭರಣಗಳನ್ನು ಹೊರತೆಗೆದು ಪರಿಶೀಲನೆ ನಡೆಸಿತು.
ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆದ ಪರಿಶೀಲನೆಯಲ್ಲಿ ತಜ್ಞರು ಪ್ರತಿಯೊಂದು ಆಭರಣವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಆಭರಣಗಳ ವಿನ್ಯಾಸ, ಗಾತ್ರ, ತಯಾರಿಕೆಯ ವಿಧಾನ ಮತ್ತು ಅದರಲ್ಲಿ ಬಳಕೆ ಮಾಡಿರುವ ರತ್ನಗಳನ್ನು ಪರಿಶೀಲಿಸಿ ಅವುಗಳ ಫೋಟೋಗ್ರಫಿ ಕೂಡಾ ನಡೆಸಲಾಯಿತು. ಈ ಪರಿಶೀಲನೆಯ ಬಳಿಕ ತಜ್ಞರ ತಂಡ ಒಟ್ಟಾಗಿ ನೀಡಿದ ಅಭಿಪ್ರಾಯದಂತೆ ಈ ಚಿನ್ನದ ಆಭರಣಗಳು ಸುಮಾರು ಐದು ರಿಂದ ಆರು ಶತಮಾನಗಳ ಹಿಂದಿನವು ಎಂದು ತಿಳಿದುಬಂದಿದೆ.
ತಜ್ಞರ ಪ್ರಕಾರ, ಈ ಆಭರಣಗಳು ಸಾಮಾನ್ಯ ಬಳಕೆಗೆ ಮಾಡಿದವುಗಳಲ್ಲ. ಅವುಗಳನ್ನು ಗಮನಿಸಿದಾಗ ಅವು ಹೆಣ್ಣು ದೇವರಿಗೆ ಅಲಂಕಾರ ಮಾಡುವ ಆಭರಣಗಳು ಎಂಬುದು ಸ್ಪಷ್ಟವಾಗುತ್ತದೆ. ದೇವಾಲಯಗಳಲ್ಲಿ ದೇವಿಯ ಮೂರ್ತಿ ಅಥವಾ ಉತ್ಸವ ಮೂರ್ತಿಗಳಿಗೆ ಹಾಕುವ ಮಾಲೆ, ಕಿರೀಟ, ಕಿವಿಯೋಲೆ, ನಾಭಿ ಆಭರಣ ಸೇರಿದಂತೆ ಹಲವು ರೀತಿಯ ಅಲಂಕಾರಿಕ ವಸ್ತುಗಳ ವಿನ್ಯಾಸದಲ್ಲಿ ಅವು ನಿರ್ಮಾಣಗೊಂಡಿರುವುದನ್ನು ತಜ್ಞರು ಗುರುತಿಸಿದ್ದಾರೆ.
ಇನ್ನೂ ಈ ಆಭರಣಗಳಲ್ಲಿ ಅಪರೂಪದ ನೀಲಮಣಿ, ಸ್ಪಟಿಕ, ಹವಳ ಸೇರಿದಂತೆ ಹಲವು ಮೌಲ್ಯವಾದ ರತ್ನಗಳನ್ನು ಬಳಸಿರುವುದು ಕಂಡುಬಂದಿದೆ. ಕೆಲ ರತ್ನಗಳು ವಿದೇಶಗಳಲ್ಲಿ ಸಿಗುವ ಪ್ರಭೇದಗಳಾಗಿರಬಹುದು ಎನ್ನುವ ಅಭಿಪ್ರಾಯವೂ ತಜ್ಞರಿಂದ ವ್ಯಕ್ತವಾಗಿದೆ. ಆಭರಣಗಳ ತಯಾರಿಕೆ ಸಂಪೂರ್ಣವಾಗಿ ಕೈಚಲಕದಿಂದ ಮಾಡಲ್ಪಟ್ಟಿದ್ದು, ಅತ್ಯಂತ ಸೂಕ್ಷ್ಮ ಹಾಗೂ ಕಲಾತ್ಮಕ ಕೆಲಸವಿದೆ ಎಂದು ಗೋಲ್ಡ್ ಸ್ಮಿತ್ ಹಾಗೂ ರತ್ನಶಾಸ್ತ್ರಜ್ಞ ಪ್ರಭು ಕಮ್ಮಾರ ತಿಳಿಸಿದ್ದಾರೆ.
ಇದರ ನಿಖರ ಮೌಲ್ಯವನ್ನು ಹೇಳುವುದು ಕಷ್ಟವಾದರೂ, ಅತ್ಯಂತ ಅಪರೂಪದ ಹಾಗೂ ದುಬಾರಿ ಆಭರಣಗಳು ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.
ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಈ ನಿಧಿಯ ಸಮೀಪದಲ್ಲೇ ಲಕ್ಷ್ಮೀ ದೇವಸ್ಥಾನ ಇರುವುದರಿಂದ ಈ ಆಭರಣಗಳು ಆ ದೇವಾಲಯಕ್ಕೆ ಸೇರಿರುವ ಸಾಧ್ಯತೆಯನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ. ದೇವಾಲಯದ ದೇವಿಗೆ ಭಕ್ತರು ದಾನವಾಗಿ ನೀಡಿದ ಆಭರಣಗಳನ್ನು ಯುದ್ಧದ ಭೀತಿ ಅಥವಾ ದಾಳಿಗಳ ಸಮಯದಲ್ಲಿ ಸುರಕ್ಷತೆಗಾಗಿ ಮಣ್ಣಿನಲ್ಲಿ ಹೂತು ಇಡಲಾಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇತಿಹಾಸದ ದಾಖಲೆಗಳ ಪ್ರಕಾರ ಲಕ್ಕುಂಡಿ ಗ್ರಾಮವು ಹೊಯ್ಸಳ ಹಾಗೂ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅತ್ಯಂತ ಶ್ರೀಮಂತ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಿದ ಪ್ರದೇಶವಾಗಿತ್ತು. ಆ ಕಾಲದಲ್ಲಿ ದೇವಾಲಯಗಳಿಗೆ ಭಕ್ತರು ಮತ್ತು ರಾಜರು ಅಪಾರ ದಾನಗಳನ್ನು ನೀಡುವ ಪದ್ಧತಿ ಇದ್ದು, ಈ ಚಿನ್ನದ ಆಭರಣಗಳೂ ಆ ಕಾಲದ ದಾನ ಸಂಪ್ರದಾಯದ ಭಾಗವಾಗಿರಬಹುದು ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಲಕ್ಕುಂಡಿಯಲ್ಲಿ ಪತ್ತೆಯಾದ ಈ ಚಿನ್ನದ ನಿಧಿ ಹಲವು ದಿನಗಳಿಂದ ಜನರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ತಜ್ಞರ ಪರಿಶೀಲನೆಯ ಬಳಿಕ ಅದರ ಕಾಲಘಟ್ಟ ಹಾಗೂ ಉದ್ದೇಶದ ಬಗ್ಗೆ ಪ್ರಮುಖ ಮಾಹಿತಿ ಬಹಿರಂಗವಾಗಿದ್ದು, ಲಕ್ಕುಂಡಿಯ ಐತಿಹಾಸಿಕ ಮಹತ್ವಕ್ಕೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP