ವಾಣಿಜ್ಯ ಎಲ್ಪಿಜಿ ಕೊರತೆ: ಕೇಂದ್ರ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ
ಬೆಂಗಳೂರು, 10 ಮಾರ್ಚ್ (ಹಿ.ಸ.): ಆ್ಯಂಕರ್: ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ತುರ್ತು ಮಧ್ಯಪ್ರವೇಶ ಮಾ
Letter


ಬೆಂಗಳೂರು, 10 ಮಾರ್ಚ್ (ಹಿ.ಸ.):

ಆ್ಯಂಕರ್:

ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ತುರ್ತು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಾರ್ಚ್ 9ರಂದು ಹೊರಡಿಸಿದ ಆದೇಶದ ಪ್ರಕಾರ ಎಲ್‌ಪಿಜಿ ಉತ್ಪಾದನೆಗೆ ಆದ್ಯತೆ ನೀಡಲಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುವ ಎಲ್‌ಪಿಜಿಯನ್ನು ದೇಶೀಯ ಗ್ರಾಹಕರಿಗೆ ಮಾತ್ರ ಮಾರಾಟ ಮಾಡಬೇಕೆಂದು ನಿರ್ದೇಶಿಸಲಾಗಿದೆ. ಮನೆಗಳಿಗೆ ನಿರಂತರ ಎಲ್‌ಪಿಜಿ ಪೂರೈಕೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದ್ದರೂ, ಅದರ ಅನುಷ್ಠಾನದಿಂದ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಕೊರತೆ ಉಂಟಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ನಗರದ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ ಸಂಘಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದು, ಸರಬರಾಜು ಶೀಘ್ರದಲ್ಲೇ ಪುನಃಸ್ಥಾಪಿಸದಿದ್ದರೆ ಕೆಲವು ಸಂಸ್ಥೆಗಳು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತಪಡಿಸಿವೆ.

ಬೆಂಗಳೂರು ನಗರದಲ್ಲಿ ಪ್ರತಿದಿನ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುವ ಸಣ್ಣ ಹೋಟೆಲ್‌ಗಳು, ಮೆಸ್‌ಗಳು ಮತ್ತು ಅಡುಗೆ ಘಟಕಗಳ ದೊಡ್ಡ ಜಾಲವಿದೆ. ತೈಲ ಮಾರುಕಟ್ಟೆ ಕಂಪನಿಗಳ ಮಾಹಿತಿಯ ಪ್ರಕಾರ, ರಾಜ್ಯದ ವಾಣಿಜ್ಯ ಎಲ್‌ಪಿಜಿ ಬೇಡಿಕೆಯನ್ನು ಸಾಂಪ್ರದಾಯಿಕವಾಗಿ ಮೂರು ಕಂಪನಿಗಳಾದ ಐಒಸಿಎಲ್ ದಿನಕ್ಕೆ ಸುಮಾರು 500–550 ಮೆಟ್ರಿಕ್ ಟನ್, ಎಚ್‌ಪಿಸಿಎಲ್ ದಿನಕ್ಕೆ ಸುಮಾರು 300 ಮೆಟ್ರಿಕ್ ಟನ್ ಮತ್ತು ಬಿಪಿಸಿಎಲ್ ದಿನಕ್ಕೆ ಸುಮಾರು 230 ಮೆಟ್ರಿಕ್ ಟನ್ ಪೂರೈಕೆಯ ಮೂಲಕ ನೆರವೇರಿಸಲಾಗುತ್ತಿದೆ. ಈ ಪೂರೈಕೆಯಲ್ಲಿ ಹಠಾತ್ ಅಡಚಣೆ ಉಂಟಾಗಿರುವುದು ಹೋಟೆಲ್‌ಗಳು, ಅಡುಗೆ ಸಂಸ್ಥೆಗಳು ಹಾಗೂ ಇತರ ವಾಣಿಜ್ಯ ಬಳಕೆದಾರರ ಮೇಲೆ ತೀವ್ರ ಪರಿಣಾಮ ಬೀರಿದೆ.

ಇದರಿಂದ ಮನೆಗಳಿಂದ ದೂರ ವಾಸಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು, ದಿನನಿತ್ಯದ ಊಟಕ್ಕಾಗಿ ಹೋಟೆಲ್‌ಗಳು ಮತ್ತು ಮೆಸ್‌ಗಳನ್ನು ಅವಲಂಬಿಸಿರುವವರು ಕೂಡ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಜೊತೆಗೆ ಮದುವೆ ಸಭಾಂಗಣಗಳು, ಹಾಸ್ಟೆಲ್‌ಗಳು ಹಾಗೂ ವಿವಿಧ ಕಾರ್ಯಕ್ರಮ ಸ್ಥಳಗಳು ಆಹಾರ ತಯಾರಿಕೆಗೆ ವಾಣಿಜ್ಯ ಎಲ್‌ಪಿಜಿಯನ್ನು ಅವಲಂಬಿಸಿರುವುದರಿಂದ ಅನಿಶ್ಚಿತತೆ ಎದುರಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಛತ್ರಗಳು, ಸಮುದಾಯ ಭವನಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಸಾಕಷ್ಟು ಎಲ್‌ಪಿಜಿ ಪೂರೈಕೆ ಲಭ್ಯವಾಗುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಸಮಸ್ಯೆಗೆ ತ್ವರಿತ ಪರಿಹಾರ ದೊರೆತರೆ ವ್ಯವಹಾರಗಳು ಸುಗಮವಾಗಿ ಮುಂದುವರಿಯಲು ಹಾಗೂ ನಾಗರಿಕರಿಗೆ ಉಂಟಾಗುವ ಅನಾನುಕೂಲತೆ ತಪ್ಪಿಸಲು ಸಹಕಾರಿಯಾಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande