
ಬಳ್ಳಾರಿ, 28 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು ಮಂಡನೆ ಮಾಡುತ್ತಿರುವ 2026-27ನೇ ಆರ್ಥಿಕ ಸಾಲಿನ ದಾಖಲಾರ್ಹ ಬಜೆಟ್ನಲ್ಲಿ `ಬಳ್ಳಾರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ'ಗೆ ಆದ್ಯತೆ ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ಕೋರಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಳ್ಳಾರಿ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ನಾಗರೀಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಖ್ಯಮಂತ್ರಿಗಳು ವಿಶೇಷ ಆದ್ಯತೆ ನೀಡಬೇಕು. ಅಲ್ಲದೇ, ರಿಯಾಯಿತಿಗಳನ್ನೂ ಘೋಷಣೆ ಮಾಡಬೇಕು. ಈ ಮೂಲಕ ಜಿಲ್ಲೆಯ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಮಧ್ಯೆ ವಾಣಿಜ್ಯೋದ್ಯಮದ ಕೊಂಡಿಯಾಗಿರುವ ಬಳ್ಳಾರಿಯು ಕೈಗಾರಿಕಾ ಹಬ್ ಆಗಿದೆ. ಬಳ್ಳಾರಿ ಜಿಲ್ಲೆಯು ಬೃಹತ್ ಕೈಗಾರಿಕೆಗಳ ತಾಣವಾಗಿದೆ. ಕಬ್ಬಿಣ ಮತ್ತು ಮ್ಯಾಂಗನೀಸ್ ಉದ್ಯಮಗಳು ಸಾಕಷ್ಟಿವೆ. ಭತ್ತ, ಒಣಮೆಣಸಿನಕಾಯಿ, ಹತ್ತಿ ಮತ್ತು ಕಬ್ಬು ಬೆಳೆಯುವಲ್ಲಿ, ಬಾಳೆಹಣ್ಣು, ನಿಂಬೆಹಣ್ಣು, ಅಂಜೂರ, ಕರಿಬೇವು, ನುಗ್ಗೇಕಾಯಿ ಸೇರಿ ಔಷಧೀಯ ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಜೀನ್ಸ್ ಮತ್ತು ಗಾರ್ಮೆಂಟ್ಸ್ ಉದ್ಯಮಕ್ಕೆ ಬಳ್ಳಾರಿಯಲ್ಲಿ ದೊಡ್ಡ ಇತಿಹಾಸವೇ ಇದೆ. ವಿಶ್ವದ ಗಮನ ಸೆಳೆಯುತ್ತಿರುವ ಕೈಗಾರಿಕಾ ಮತ್ತು ಶ್ರಮಿಕರು ಹೆಚ್ಚಿರುವ ಸ್ಥಳವಾಗಿ ಗುರುತಿಸಿಕೊಳ್ಳುತ್ತಿರುವ ಬಳ್ಳಾರಿಗೆ ವೈಮಾನಿಕ ಸಾರಿಗೆ ಸಂಪರ್ಕ ಅಗತ್ಯವಿದೆ. ಜಿಲ್ಲೆಯಲ್ಲಿ ಪ್ರತ್ಯೇಕ ಎಂಎಸ್ಎಂಇ ವಲಯವನ್ನು ಪ್ರಾರಂಭಿಸಬೇಕು.
ಈ ನಿಟ್ಟಿನಲ್ಲಿ ಸಿರಿವಾರ - ಚಾಗನೂರು ವ್ಯಾಪ್ತಿಯಲ್ಲಿ 800 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಂಡಿದ್ದು, ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿ ಸ್ಥಗಿತಗೊಂಡಿದೆ. ಜಿಲ್ಲೆಯ ಪ್ರವಾಸೋದ್ಯಮ, ವೈದ್ಯಕೀಯ, ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ವಾಯು ಸಾರಿಗೆ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಬಳ್ಳಾರಿಯಲ್ಲಿ ಅತ್ಯಾಧುನಿಕ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಮುಂದಾಗಿದ್ದ ಸರ್ಕಾರ ಯೋಜನೆ ಸ್ವರೂಪವನ್ನು ಬದಲಾವಣೇ ಮಾಡಿದ್ದು, ಈ ಹಿಂದಿನಂತೆಯೇ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಬಳ್ಳಾರಿಯ ರೇಡಿಯೋಪಾರ್ಕ್ ರೈಲ್ವೆಗೇಟ್ ಮತ್ತು ಕಲ್ಯಾಣದುರ್ಗ-ತುಮಕೂರು ನಡುವಣ ರೈಲ್ವೇ ಮಾರ್ಗ ಪೂರ್ಣಗೊಳಿಸಲು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಮಾಡಬೇಕು. ರಾಯದುರ್ಗ - ಸ್ವಾಮಿಹಳ್ಳಿ ರೈಲ್ವೆ ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬಳ್ಳಾರಿ ನಗರಕ್ಕೆ ಅಗತ್ಯವಿರುವ ವರ್ತುಲ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಬಳ್ಳಾರಿಗೆ ಎಂಟು ಕಿ.ಮಿ ದೂರದಲ್ಲಿರುವ ಹಗರಿಯಲ್ಲಿ ಕೃಷಿ ಸಂಶೋಧನಾ ಕೇಂದ್ರವಿದೆ. ಉಪನ್ಯಾಸಕರು ಮತ್ತು ವಿಜ್ಞಾನಿಗಳಿದ್ದಾರೆ. ಪ್ರಸ್ತುತ ಕೃಷಿ ಡಿಪ್ಲೋಮಾ ಕೋರ್ಸ್ಗಳಿದ್ದು, ಪೂರ್ಣ ಪ್ರಮಾಣದ ಕೃಷಿ ಕಾಲೇಜು ಸ್ಥಾಪನೆ ಮಾಡಲು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್