ದ್ವಿತೀಯ ಪಿಯುಸಿ ಮೊದಲ ದಿನ ಕನ್ನಡ ಪರೀಕ್ಷೆಗೆ ೧೦೮೨೦ ಮಂದಿ ಪರೀಕ್ಷೆಗೆ ಹಾಜರು
ದ್ವಿತೀಯ ಪಿಯುಸಿ ಮೊದಲ ದಿನ ಕನ್ನಡ ಪರೀಕ್ಷೆಗೆ ೧೦೮೨೦ ಮಂದಿ ಪರೀಕ್ಷೆಗೆ ಹಾಜರು
ಚಿತ್ರ : ಕೋಲಾರ ನಗರ ವ್ಯಾಪ್ತಿಯ ಬಾಲಕಿಯರ, ಬಾಲಕರ ಪಿಯು ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಪರೀಕ್ಷಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು.


ಕೋಲಾರ, ೨೮ ಫೆಬ್ರವರಿ (ಹಿ.ಸ) :

ಆ್ಯಂಕರ್ : ಜಿಲ್ಲೆಯ ೨೮ ಕೇಂದ್ರಗಳಲ್ಲಿ ಸುಗಮವಾಗಿ ಆರಂಭವಾದ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಗೆ ಇಂದು ಜಿಲ್ಲೆಯಲ್ಲಿ ೧೧೧೪೪ ಮಂದಿ ನೋಂದಾಯಿಸಿದ್ದು, ೧೦೮೨೦ ಮಂದಿ ಪರೀಕ್ಷೆಗೆ ಹಾಜರಾಗಿದ್ದು, ೩೨೪ ಮಂದಿ ಗೈರಾಗಿದ್ದಾರೆ ಮತ್ತು ಜಿಲ್ಲಾಧಿಕಾರಿಗಳು ಹಲವು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ೨೮ ಕೇಂದ್ರಗಳ ಪೈಕಿ ಕೋಲಾರದಲ್ಲಿ ೧೦, ಬಂಗಾರಪೇಟೆ-೩, ಕೆಜಿಎಫ್-೩, ಶ್ರೀನಿವಾಸಪುರ-೩, ಮುಳಬಾಗಿಲು-೫, ಮಾಲೂರಿನಲ್ಲಿ ೪ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಇದರಲ್ಲಿ ೧೩ ಸರ್ಕಾರಿ, ೫ ಅನುದಾನಿತ, ೧೦ ಅನುದಾನರಹಿತ ಪರೀಕ್ಷಾ ಕೇಂದ್ರಗಳಾಗಿದ್ದು, ಎಲ್ಲೂ ಯಾವುದೇ ಗೊಂದಲಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ.

ಕೆಲವು ಕೇಂದ್ರಗಳಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಸಿಬ್ಬಂದಿ ಹೂ ನೀಡಿ ಆಹ್ವಾನಿಸಿ ಶುಭ ಕೋರಿ, ಪರೀಕ್ಷೆ ಕುರಿತು ಆತ್ಮಸ್ಥೈರ್ಯ ತುಂಬಲಾಯಿತು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲ್ಪಟ್ಟ ಪೊಲೀಸ್ ಅಧೀಕಾರಿಗಳು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡೆಲ್ಗಳನ್ನು ಅಂಚೆ ಕಚೇರಿಗೆ ಪರೀಕ್ಷಾ ಸಿಬ್ಬಂದಿಯೊಂದನೆ ತೆಗೆದುಕೊಂಡು ತಲುಪಿಸುವ ಕೆಲಸ ಮಾಡಿದರು ಎಂದರು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷೆ ನಡೆಯುವ ೨೦೦ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇದಾಜ್ಞೆ ಜಾರಿ ಮಾಡಿದ್ದು, ಈ ಭಾಗದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು ಎಂದರು.

ಪಿಯುಸಿ ಪರೀಕ್ಷೆಯ ಮೊದಲ ದಿನ ಇದಾಗಿದ್ದು, ಇಂದು ಬೆಳಗ್ಗೆ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಗೂ ಒಂದು ಗಂಟೆ ಮುನ್ನವೇ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿ ನಮೂದಾಗಿದೆ ಎಂದು ಆತಂಕದಿಂದಲೇ ಪರಿಶೀಲಿಸುತ್ತಿದ್ದುದು ಕಂಡು ಬಂತು.

ದ್ವಿತೀಯ ಪಿಯುಸಿ ಪರೀಕ್ಷೆ ಜೀವನ ನಿರ್ಧರಿಸಿರುವ ಅತಿ ಪ್ರಮುಖ ಘಟ್ಟವಾಗಿರುವ ಕಾರಣ ಮಕ್ಕಳೊಂದಿಗೆ ಪೋಷಕರು ಕೇಂದ್ರಗಳಿಗೆ ಆಗಮಿಸಿ ಮಕ್ಕಳು ನೋಂದಣಿ ಸಂಖ್ಯೆ ಹುಡುಕಲು ನೆರವಾಗುತ್ತಿದ್ದುದು ಕಂಡು ಬಂತು.

ನಗರ ವ್ಯಾಪ್ತಿಯ ಬಾಲಕಿಯರ, ಬಾಲಕರ ಪಿಯು ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಪರೀಕ್ಷಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು.

ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳು ಪರೀಕ್ಷೆಯ ವೆಬ್ ಕಾಸ್ಟಿಂಗ್ ವೀಕ್ಷಿಸಿ, ಅವ್ಯವಹಾರಗಳಿಗೆ ಅವಕಾಶವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡರು.

ಚಿತ್ರ : ಕೋಲಾರ ನಗರ ವ್ಯಾಪ್ತಿಯ ಬಾಲಕಿಯರ, ಬಾಲಕರ ಪಿಯು ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಪರೀಕ್ಷಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande