
ಜೈಸಲ್ಮೇರ್, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ನಾಯಕರಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್ ವಾಯುಪಡೆ ನಿಲ್ದಾಣದಿಂದ ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ ‘ಪ್ರಚಂಡ್’ನಲ್ಲಿ ಹಾರಾಟ ನಡೆಸಿ ಇತಿಹಾಸ ನಿರ್ಮಿಸಿದರು. ಹಾರಾಟದ ವೇಳೆ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ನಡೆಯುತ್ತಿದ್ದ ‘ವಾಯು ಶಕ್ತಿ’ ಮಹಾ ವ್ಯಾಯಾಮ ಪ್ರದೇಶದ ವೈಮಾನಿಕ ಸಮೀಕ್ಷೆಯನ್ನೂ ಅವರು ನಡೆಸಿದರು.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ ‘ಪ್ರಚಂಡ್’ ಸಂಪೂರ್ಣವಾಗಿ ಭಾರತೀಯ ನಿರ್ಮಿತ ಯುದ್ಧ ಯಂತ್ರವಾಗಿದೆ. ಕಠಿಣ ಪರ್ವತ ಪ್ರದೇಶಗಳು, ಹೆಚ್ಚಿನ ಎತ್ತರದ ಗಡಿ ವಲಯಗಳು—ಲಡಾಖ್ ಹಾಗೂ ಸಿಯಾಚಿನ್ಗಳಂತಹ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿವಿಧ ಬಾಂಬ್ಗಳು, ಗನ್ಗಳು ಮತ್ತು ಕ್ಷಿಪಣಿಗಳಿಂದ ಸಜ್ಜುಗೊಳ್ಳಬಲ್ಲ ಈ ಹೆಲಿಕಾಪ್ಟರ್ ಗಾಳಿಯಲ್ಲಿ ಚುರುಕಾಗಿ ಚಲಿಸಿ, ಬೆಟ್ಟ-ಕಣಿವೆಗಳಲ್ಲಿ ಅಡಗಿರುವ ಶತ್ರುಗಳನ್ನು ನಿಖರವಾಗಿ ಗುರಿಯಾಗಿಸುವ ಸಾಮರ್ಥ್ಯ ಹೊಂದಿದೆ.
‘ಪ್ರಚಂಡ್’ನ ಮೊದಲ ‘ಧನುಷ್’ ಸ್ಕ್ವಾಡ್ರನ್ ಜೋಧ್ಪುರದಲ್ಲಿ ರಚನೆಯಾಗಿದ್ದು, ಪಾಕಿಸ್ತಾನ ಮತ್ತು ಚೀನಾ ಗಡಿಭಾಗಗಳಲ್ಲಿ ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ. ರಾಷ್ಟ್ರಪತಿಯೊಬ್ಬರು ‘ಪ್ರಚಂಡ್’ನಲ್ಲಿ ಹಾರಾಟ ನಡೆಸಿರುವುದು ಇದೇ ಮೊದಲು ಎನ್ನಲಾಗಿದೆ.
ಇದೇ ವೇಳೆ, ರಾಷ್ಟ್ರಪತಿ ಮುರ್ಮು ಪೋಖ್ರಾನ್ನಲ್ಲಿ ಭಾರತೀಯ ವಾಯುಪಡೆಯ ಅತಿದೊಡ್ಡ ಫೈರ್ಪವರ್ ಪ್ರದರ್ಶನವಾದ ‘ವಾಯು ಶಕ್ತಿ’ ವ್ಯಾಯಾಮವನ್ನು ಮುಖ್ಯ ಅತಿಥಿಯಾಗಿ ವೀಕ್ಷಿಸಿದರು. ವಿವಿಧ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಮತ್ತು ಕ್ಷಿಪಣಿ ಸಾಮರ್ಥ್ಯದ ಪ್ರದರ್ಶನ ಗಮನ ಸೆಳೆಯಿತು.
ಗಮನಾರ್ಹವಾಗಿ, ಮುರ್ಮು ಅವರು ಅಕ್ಟೋಬರ್ 29, 2025ರಂದು ಹರಿಯಾಣದ ಅಂಬಾಲಾ ವಾಯುಪಡೆ ನಿಲ್ದಾಣದಿಂದ ರಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಸುಮಾರು 30 ನಿಮಿಷಗಳ ಹಾರಾಟದಲ್ಲಿ 200 ಕಿಮೀ ದೂರ ಕ್ರಮಿಸಿ, 15,000 ಅಡಿ ಎತ್ತರದಲ್ಲಿ ಹಾಗೂ ಗಂಟೆಗೆ ಸುಮಾರು 700 ಕಿಮೀ ವೇಗದಲ್ಲಿ ಹಾರಿದ್ದರು. ಅದಕ್ಕೂ ಮೊದಲು 2023ರಲ್ಲಿ ಸುಖೋಯ Su-30MKI ಯುದ್ಧ ವಿಮಾನದಲ್ಲೂ ಹಾರಾಟ ನಡೆಸಿದ್ದರು. ಭಾರತೀಯ ವಾಯುಪಡೆಯ ಎರಡು ವಿಭಿನ್ನ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎಂಬ ಗೌರವವೂ ಅವರಿಗೆ ಸಲ್ಲುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa