
ಬೆಂಗಳೂರು, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಜಿಎಎಫ್ಎಕ್ಸ 2026 (ಗೇಮಿಂಗ್, ಅನಿಮೇಷನ್, ದೃಶ್ಯ ಪರಿಣಾಮಗಳ ಸಮ್ಮೇಳನ) 7ನೇ ಆವೃತ್ತಿಯನ್ನು ಉದ್ಘಾಟಿಸಿ, ಕರ್ನಾಟಕವನ್ನು ಡಿಜಿಟಲ್ ಸೃಜನಶೀಲ ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿಸುವ ಸಂಕಲ್ಪ ವ್ಯಕ್ತಪಡಿಸಿದರು.
“ಎವೊಲ್ಯೂಶನ್ ರಿಲೋಡೆಡ್” ಎಂಬ ವಿಷಯದಡಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇವಲ ಭಾರತದ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲದೆ ಕಲ್ಪನೆ ಮತ್ತು ಇಂಜಿನಿಯರಿಂಗ್, ಕಲೆ ಮತ್ತು ಕ್ರಮಾವಳಿಗಳ ಸಂಗಮವಾಗಿರುವ ನಗರ ಎಂದು ಹೇಳಿದರು.
ಎವಿಜಿಸಿ-ಎಕ್ಸ್ಆರ್ ಕ್ಷೇತ್ರವು ಇನ್ನು ಸಣ್ಣಮಟ್ಟದ ಸೃಜನಾತ್ಮಕ ಉದ್ಯಮವಲ್ಲ; ಡಿಜಿಟಲ್ ಕ್ರಾಂತಿ, ಇಮರ್ಸಿವ್ ಮೀಡಿಯಾ, ಇ-ಸ್ಪೋರ್ಟ್ಸ್ ಹಾಗೂ ಎಕ್ಸ್ಟೆಂಡೆಡ್ ರಿಯಾಲಿಟಿ ಯುಗದಲ್ಲಿ ಕಥೆ, ಸಂಸ್ಕೃತಿ, ಶಿಕ್ಷಣ ಮತ್ತು ಆಡಳಿತದ ಅನುಭವಗಳನ್ನು ರೂಪಿಸುವ ಶಕ್ತಿಯಾಗಿದೆ ಎಂದು ತಿಳಿಸಿದರು.
2017ರಲ್ಲಿ ದೇಶದಲ್ಲೇ ಮೊದಲ ಎವಿಜಿಸಿ ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕವಾಗಿದ್ದು, 2024–2029ರ ಮೂರನೇ ಎವಿಜಿಸಿ-ಎಕ್ಸ್ಆರ್ ನೀತಿಯನ್ನು ಜಾರಿಗೆ ತರುವ ಮೂಲಕ ಈ ಕ್ಷೇತ್ರದ ಮೇಲಿನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಲಾಗಿದೆ ಎಂದು ಹೇಳಿದರು.
ಪ್ರೋತ್ಸಾಹಕ ಯೋಜನೆಗಳು, ಮೂಲಸೌಕರ್ಯ ಬೆಂಬಲ, ಕೌಶಲ್ಯಾಭಿವೃದ್ಧಿ, ಇನ್ಕ್ಯೂಬೇಶನ್ ವ್ಯವಸ್ಥೆಗಳು ಹಾಗೂ ಕೈಗಾರಿಕಾ ಸಹಭಾಗಿತ್ವಗಳ ಮೂಲಕ ಸಮಗ್ರ ಪರಿಸರ ವ್ಯವಸ್ಥೆ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ ಮತ್ತು ಕಲಬುರಗಿ ಸೇರಿದಂತೆ ರಾಜ್ಯದ ನಾನಾ ನಗರಗಳಲ್ಲಿ ಡಿಜಿಟಲ್ ಕ್ರಿಯೇಟಿವ್ ಕ್ಲಸ್ಟರ್ ಗಳನ್ನು ರೂಪಿಸಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಎವಿಜಿಸಿ-ಎಕ್ಸ್ಆರ್ ಕ್ಷೇತ್ರವು 20 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಿದ ಅವರು, ತಂತ್ರಜ್ಞಾನ ಮಾನವ ಸೃಜನಶೀಲತೆಯನ್ನು ಹೆಚ್ಚಿಸಬೇಕೇ ಹೊರತು ಅಳಿಸಬಾರದು. ಬೌದ್ಧಿಕ ಆಸ್ತಿ ಹಕ್ಕುಗಳು, ದತ್ತಾಂಶ ಗೌಪ್ಯತೆ ಮತ್ತು ಸೃಷ್ಟಿಕರ್ತರ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಅನಿಮೇಷನ್ ಮತ್ತು ಗೇಮಿಂಗ್ ಕ್ಷೇತ್ರದಲ್ಲಿ ಜವಾಬ್ದಾರಿಯುತ ಹಾಗೂ ಮೌಲ್ಯಾಧಾರಿತ ವಿಷಯ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
“ಕರ್ನಾಟಕವನ್ನು ಭಾರತದ ‘ಸಿಲಿಕಾನ್ ವ್ಯಾಲಿ’ ಮಾತ್ರವಲ್ಲ, ಡಿಜಿಟಲ್ ಪ್ರಪಂಚದ ‘ಸೃಜನಶೀಲ ರಾಜಧಾನಿ’ಯಾಗಿಸುವುದು ನಮ್ಮ ಗುರಿ,” ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa