ಸರ್ಕಾರಿ ಶಾಲಾ ಮಕ್ಕಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ
ಸರ್ಕಾರಿ ಶಾಲಾ ಮಕ್ಕಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ
ಕೋಲಾರದಲ್ಲಿ ಸರ್ಕಾರಿ ಶಾಲೆಗಳ ಪರಿಶಿಷ್ಟ ಜಾತಿ,ವರ್ಗಗಳ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಗುರುವಾರ ಬೆಳಗ್ಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರವಾಸೋದ್ಯಮ ನಿಗಮದ ಅಧಿಕಾರಿ ಶಾಂತಕುಮಾರ್,ಬಿಇಒ ಕಚೇರಿಯ ಸುದರ್ಶನ್ ಹಸಿರು ನಿಶಾನೆ ತೋರಿದರು.


ಕೋಲಾರ, ೨೬ ಫೆಬ್ರವರಿ (ಹಿ.ಸ):

ಆಂಕರ್ : ಸರ್ಕಾರಿ ಶಾಲೆಗಳ ಹಿಂದುಳಿದ, ಅಲ್ಪಸಂಖ್ಯಾತ,ಇತರೆ ವರ್ಗಗಳ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಗುರುವಾರ ಬೆಳಗ್ಗೆ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕರ್ನಾಟಕ ಪ್ರವಾಸೋದ್ಯಮ ನಿಗಮದ ಅಧಿಕಾರಿ ಶಾಂತಕುಮಾರ್, ಬಿಇಒ ಕಚೇರಿಯ ಸುದರ್ಶನ್ ಹಸಿರು ನಿಶಾನೆ ತೋರಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ತಾಲ್ಲೂಕಿನ ಒಟ್ಟು ೯೨ ವಿದ್ಯಾರ್ಥಿಗಳನ್ನು ಹೊತ್ತ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ದರ್ಶನ ಪ್ರವಾಸಕ್ಕೆ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಅಧಿಕಾರಿ ಶಾಂತಕುಮಾರ್, ಮಕ್ಕಳಲ್ಲಿ ಪ್ರಾಚ್ಯಪ್ರಜ್ಞೆ ಹೆಚ್ಚಲು ಹಾಗೂ ಸಾಮಾನ್ಯ ಜ್ಞಾನ ವೃದ್ದಿಗೆ ಈ ಪ್ರವಾಸ ಸಹಕಾರಿಯಾಗಿದ್ದು, ನಮ್ಮ ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ ಪ್ರವಾಸದಲ್ಲಿ ಮಕ್ಕಳ ಆರೋಗ್ಯ, ಊಟ ವಸತಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತಲಾ ಇಬ್ಬರು ಪುರುಷ ಹಾಗೂ ಮಹಿಳಾ ಶಿಕ್ಷಕರು ಪ್ರವಾಸದಲ್ಲಿ ಮಕ್ಕಳ ನೇತೃತ್ವ ವಹಿಸಿದ್ದು, ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮವಹಿಸಲಾಗಿದೆ ಎಂದರು.

ಪ್ರವಾಸದ ನೇತೃತ್ವ ವಹಿಸಿರುವ ಬಿಇಒ ಕಚೇರಿಯ ಸುದರ್ಶನ್ ಮಾತನಾಡಿ, ತಾವೂ ಮಕ್ಕಳೊಂದಿಗೆ ಪ್ರವಾಸ ತೆರಳುತ್ತಿದ್ದು, ಮಕ್ಕಳಿಗೆ ಶೈಕ್ಷಣಿಕವಾಗಿ ಮಾಹಿತಿ ಪಡೆಯಲು ಅಗತ್ಯವಿರುವ ಐತಿಹಾಸಿಕ ಕ್ಷೇತ್ರಗಳ ದರ್ಶನ ಮಾಡಿಸಲಾಗುತ್ತಿದೆ, ಕಲೆ,ಸಾಂಸ್ಕೃತಿಕ ಪರಿಚಯ ಈ ಪ್ರವಾಸದ ಮೂಲಕ ಮಾಡಿಸಲಾಗುತ್ತಿದೆ ಈ ಪ್ರವಾಸದಲ್ಲಿ ಮಕ್ಕಳ ಪಠ್ಯಕ್ಕೆ ಅನುಕೂಲವಾಗುವಂತೆ ಪ್ರೇಕ್ಷಣೀಯ ಸ್ಥಳಗಳ ಆಯ್ಕೆ ಮಾಡಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸುವುದಾಗಿ ತಿಳಿಸಿದರು. ಪ್ರವಾಸದಲ್ಲಿ ಶ್ರವಣಬೆಳಗೊಳ, ಬೇಲೂರು, ಹಳೇಬೀಡು, ಮುರುಡೇಶ್ವರ, ಗೋಕರ್ಣ, ಬನವಾಸಿ,ಯಾಣ ಮತ್ತಿತರ ಪ್ರವಾಸಿ ತಾಣಗಳನ್ನು ಮಕ್ಕಳು ನಾಲ್ಕು ದಿನಗಳ ಸುತ್ತಿ ವೀಕ್ಷಿಸಿ ಬರಲಿದ್ದಾರೆ.

ಮಕ್ಕಳೊಂದಿಗೆ ಪ್ರವಾಸದಲ್ಲಿ ವ್ಯವಸ್ಥಾಪಕರಾಗಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಕೆ.ಲೀಲಾ, ಬೆಳಮಾರನಹಳ್ಳಿ ಶಾಲಾ ಶಿಕ್ಷಕಿ ಅಂಬಿಕಾ, ಮದ್ದೇರಿಯ ಮಲ್ಲಿಕಾರ್ಜುನ್, ಗೈಡ್ ಜಗದೀಶ್ ಮತ್ತಿತರರು ತೆರಳಲಿದ್ದಾರೆ ಎಂದು ತಿಳಿಸಿದರು.

ಪ್ರವಾಸಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ, ಮುಖ್ಯಶಿಕ್ಷಕ ದೇವರಾಜ್, ಪದ್ಮಾವತಿ, ಯಶೋಧ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್, ಶಿಕ್ಷಕರಾದ ರಮೇಶ್, ವೇಮಗಲ್ ಮುನಿರಾಜ್, ಕ್ಯಾಲನೂರು ನಾಗರಾಜ್ ಮತ್ತಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande