
ಕೋಲಾರ, ೨೬ ಫೆಬ್ರವರಿ (ಹಿ.ಸ) :
ಆ್ಯಂಕರ್ : ಜಿಲ್ಲೆಯಲ್ಲಿ ಮುಂಬರುವ ಫೆಬ್ರವರಿ ೨೮ ರಿಂದ ಮಾರ್ಚ್ ೧೭ ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತವು ಸಂಪೂರ್ಣ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯ ಸುಗಮ ನಿರ್ವಹಣೆಗಾಗಿ ಈಗಾಗಲೇ ಸಂಬAಧಪಟ್ಟ ಅಧಿಕಾರಿಗಳು ಮತ್ತು ಪರೀಕ್ಷಾ ನಿಯಂತ್ರಕರೊ0ದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು ೧೪,೫೬೭ ವಿದ್ಯಾರ್ಥಿಗಳು, ಹೊಸ ವಿದ್ಯಾರ್ಥಿಗಳು ೧೩,೧೬೭, ಪುನರಾವರ್ತಿತ ವಿದ್ಯಾರ್ಥಿಗಳು ೧,೧೩೦, ಖಾಸಗಿ ವಿದ್ಯಾರ್ಥಿಗಳು ೨೭೦. ಅಲ್ಲದೆ ೮,೦೬೫ ವಿದ್ಯಾರ್ಥಿನಿಯರು ಹಾಗೂ ೬,೫೦೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೨೮ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು (೧೦)ಕೇಂದ್ರಗಳಿವೆ. ಮುಳಬಾಗಿಲು (೫), ಶ್ರೀನಿವಾಸಪುರ (೩), ಮಾಲೂರು (೪), ಕೆ.ಜಿ.ಎಫ್ (೩) ಮತ್ತು ಬಂಗಾರಪೇಟೆ (೩) ಕೇಂದ್ರಗಳನ್ನು ಹೊಂದಿವೆ. ಪ್ರಶ್ನಪತ್ರಿಕೆ ವಿತರಣೆಗೆ ರೂಟ್ ಅಧಿಕಾರಿಗಳನ್ನು ನೇಮಿಸಿದ್ದು, ಪ್ರಶ್ನೆಪತ್ರಿಕೆ ಸಕಾಲದಲ್ಲಿ ಪರೀಕ್ಷಾ ಕೇಂದ್ರ ತಲುಪಲಿದೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್, ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಮುಂತಾದ ಸೌಕರ್ಯ ಕಲ್ಪಿಸಲಾಗಿದೆ.
ಪರೀಕ್ಷಾ ಅಕ್ರಮಗಳನ್ನು ತಡೆಯಲು ಎಲ್ಲಾ ೫೨೭ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ನೇರ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ 'ಫ್ರಿಸ್ಕಿಂಗ್' (ತಪಾಸಣೆ) ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಹತ್ತಿರದ ಜೆರಾಕ್ಸ್ ಅಂಗಡಿ ಮತ್ತು ಸೈಬರ್ ಕೆಫೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ವೆಬ್ ಕಾಸ್ಟಿಂಗ್ ಸಮಯದಲ್ಲಿ ಯಾವುದೇ ಅಡಚಣೆಯಾಗದಂತೆ ಇಂಟರ್ನೆಟ್ ವೇಗವನ್ನು ೧೮೦ ನಿಂದ ೩೦೦ ಗೆ ಹೆಚ್ಚಿಸಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಆರೋಗ್ಯ ಸೇವೆಗಾಗಿ ಆಶಾ ಕಾರ್ಯಕರ್ತೆಯರ ನಿಯೋಜನೆ ಮಾಡಲಾಗಿದೆ. ಬೆಸ್ಕಾಂ ವತಿಯಿಂದ ನಿರಂತರ ವಿದ್ಯುತ್ ಸರಬರಾಜು ಹಾಗೂ ಕೆಎಸ್ಆರ್ಟಿಸಿ ವತಿಯಿಂದ ಪರೀಕ್ಷಾ ಸಮಯಕ್ಕೆ ಪೂರಕವಾಗಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳು ಮಾತ್ರವಲ್ಲದೆ, ಇನ್ವಿಜಿಲೇಟರ್ಗಳಿಗೂ ಸ್ಮಾರ್ಟ್ಫೋನ್, ಐಪ್ಯಾಡ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯಲು ನಿಷೇಧ ಹೇರಲಾಗಿದೆ. ಮುಖ್ಯ ಅಧೀಕ್ಷಕರಿಗೆ ಮಾತ್ರ ಸಂವಹನಕ್ಕಾಗಿ ಬೇಸಿಕ್ ಫೋನ್ ಬಳಸಲು ಅವಕಾಶ ನೀಡಲಾಗಿದೆ.
ಕಳೆದ ಬಾರಿ ಜಿಲ್ಲೆಯು ಶೇ. ೭೨.೪೫ ಫಲಿತಾಂಶದೊ0ದಿಗೆ ೧೬ನೇ ಸ್ಥಾನದಲ್ಲಿತ್ತು. ಈ ಬಾರಿ ನಡೆದ ಎರಡು ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಶೇ. ೮೦ಕ್ಕೂ ಅಧಿಕ ಸಾಧನೆ ತೋರಿರುವುದರಿಂದ, ಈ ಬಾರಿ ಫಲಿತಾಂಶದಲ್ಲಿ ಗಣನೀಯ ಸುಧಾರಣೆಯ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರ : ಫೆಬ್ರವರಿ ೨೮ ರಿಂದ ನಡೆಯುವ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಬಗ್ಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್