
ಬಳ್ಳಾರಿ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆರನೇ ಗ್ಯಾರಂಟಿ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ರೂ.15,000 ಹಾಗೂ ಸಹಾಯಕಿಯರಿಗೆ ರೂ.10,000 ಗೌರವಧನ ಹೆಚ್ಚಳವನ್ನು ತಕ್ಷಣ ಜಾರಿಗೊಳಿಸಬೇಕೆಂದು (AITUC) ರಾಜ್ಯ ಅಧ್ಯಕ್ಷ ಬಿ. ಅಮ್ಜಾದ್ ಅವರು ಒತ್ತಾಯಿಸಿದರು.
ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾಭವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ವತಿಯಿಂದ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ, 2011ರಿಂದ ನಿವೃತ್ತರಾದ ವಯೋವೃದ್ಧ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು. ಈಗಾಗಲೇ ಸ್ವಯಂ ನಿವೃತ್ತಿಯಾದವರಿಗೂ ಈ ಸೌಲಭ್ಯ ವಿಸ್ತರಿಸಬೇಕು. ಅಂಗನವಾಡಿ ಕೇಂದ್ರಗಳ ಜವಾಬ್ದಾರಿಯೊಂದಿಗೆ ಬಲವಂತವಾಗಿ ಬಿ.ಎಲ್.ಓ ಕರ್ತವ್ಯ ಹೇರಲಾಗುತ್ತಿದೆ. ಬಿ.ಎಲ್.ಓ ಜವಾಬ್ದಾರಿಯನ್ನು ನಿರಾಕರಿಸುವ ಕಾರ್ಯಕರ್ತೆಯರನ್ನು ಅಮಾನತು ಮಾಡುವ ಕ್ರಮವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಫೆಡರೇಶನ್ ರಾಜ್ಯ ಕಾರ್ಯದರ್ಶಿ ಜಯಮ್ಮ ಮಾತನಾಡಿ,
ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಲ್ಕೆಜಿ-ಯುಕೆಜಿ ಆರಂಭಿಸಿರುವುದರಿಂದ ಅಂಗನವಾಡಿಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಉದ್ದೇಶ ಹಾಳಾಗುತ್ತಿದೆ. ಆದ್ದರಿಂದ ಅಂಗನವಾಡಿಗಳಲ್ಲೇ ಎಲ್ಕೆಜಿ-ಯುಕೆಜಿ ತರಗತಿಗಳನ್ನು ಪ್ರಾರಂಭಿಸಿ ವ್ಯವಸ್ಥೆಯನ್ನು ಬಲಪಡಿಸಬೇಕು,
ಮಕ್ಕಳ ಪೌಷ್ಟಿಕಾಹಾರ ತಯಾರಿಸಲು ತರಕಾರಿಗೆಂದು ಒಂದು ಮಗುವಿಗೆ ಕೇವಲ 50 ಪೈಸೆ ನೀಡಲಾಗುತ್ತಿದೆ ಬೆಲೆ ಏರಿಕೆಗೆ ಅನುಗುಣವಾಗಿ ಈ ಮೊತ್ತವನ್ನು ಹೆಚ್ಚಿಸಬೇಕು ಡಿ.ಎ. ರೂ.30 ಇರುವುದನ್ನು ಹೆಚ್ಚಿಸಿ ನಗರ ಪ್ರದೇಶದ ಕಾರ್ಯಕರ್ತೆಯರಿಗೂ ವಿಸ್ತರಿಸಬೇಕು. ಮಾತೃವಂದನ ಹಾಗೂ ಭಾಗ್ಯಲಕ್ಷ್ಮಿ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಬಾಡಿಗೆ ಕಟ್ಟಡಗಳಲ್ಲಿ ನಡೆಯುವ ಅಂಗನವಾಡಿಗಳಿಗೆ ಬಾಡಿಗೆ ಹಣವನ್ನು ನಿಯಮಿತವಾಗಿ ಬಿಡುಗಡೆ ಮಾಡಬೇಕು. ಮುಂಗಡ ಹಣ ನೀಡಬೇಕು. ಕೇಂದ್ರ ಅನುಮೋದನೆ ಇಲ್ಲದ ಅಂಗನವಾಡಿಗಳಿಗೂ ಬಾಡಿಗೆ ಹಾಗೂ ಪೋಷಣ್ ಅಭಿಯಾನ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದರು.
ಅನಾರೋಗ್ಯಕ್ಕೊಳಗಾಗುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ವೇತನ ಸಹಿತ ವೈದ್ಯಕೀಯ ರಜೆ ನೀಡಬೇಕು. ಪ್ರಭಾರ ಭತ್ಯೆ ರೂ.50 ಹೆಚ್ಚಿಸಬೇಕು. ಮೊಟ್ಟೆ ದರ ಏರಿಕೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಬೇಕು ಮತ್ತು ಅತ್ಯಂತ ಮುಖ್ಯವಾಗಿ, ಅನುಕಂಪದ ಆಧಾರದ ನೇಮಕಾತಿಯಲ್ಲಿ ವಾಸಸ್ಥಳ ನಿಯಮ ಸಡಿಲಿಸಬೇಕು. ಸಾದಿಲ್ವಾರು ರೂ.2000 ಹಣದ ಬಳಕೆಗೆ ಸ್ಪಷ್ಟನೆ ನೀಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಗೌರವಧನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕು ಅಥವಾ ಇರುವ ಚೀಟಿಗಳನ್ನು ಮುಂದುವರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳನ್ನು ನಿಯಮಾನುಸಾರ ವರ್ಗಾವಣೆಗೊಳಿಸಬೇಕು. ಇತರ ರಾಜ್ಯಗಳಂತೆ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾರ್ಚ್ 2ರಂದು ನಲ್ಲಿ ‘ಬೆಂಗಳೂರು ಚಲೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಶನ್ ಜಿಲ್ಲಾ ಅಧ್ಯಕ್ಷರಾದ ಆರ್ಕಾಣಿ , ಅದಿಮೂರ್ತಿ, ಕವಿತಾ, ಇಂದಿರಾ, ಮೀನಾ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್