
ಹೊಸಪೇಟೆ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಸಮಾಜ ವ್ಯವಸ್ಥೆಯನ್ನು ಜಾಗೃತಗೊಳಿಸುವ ನಿಟ್ಡಿನಲ್ಲಿ ರಥೋತ್ಸವಗಳು ನಡೆಯುತ್ತವೆ ಎಂದು ಕೊಟ್ಡೂರು ಡೋಣೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಶ್ರೀ ಜಗದ್ಗುರು ಕೊಟ್ಟೂರೇಶ್ವರ ಜಾತ್ರ ಮಹೋತ್ಸವ -೨೬ ರ ಸರ್ವಧರ್ಮ ಸಮನ್ವಯ ಮಹಾರಥೋತ್ಸವದ ಜೀವನದರ್ಶನ ಪ್ರವಚನ ಮಂಗಲೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಸಮಾಜಗಳು ಒಗ್ಗೂಡಿ ತೇರನ್ನು ಎಳೆಯುತ್ತವೆ. ಅದರಲ್ಲೂ ಕೊಟ್ಟೂರುಸ್ವಾಮಿ ಮಠದ ಸರ್ವಧರ್ಮ ಸಮನ್ವಯ ಮಹಾರಥೋತ್ಸವವು ಸರ್ವಧರ್ಮಗಳನ್ನು ಒಳಗೊಂಡಿದೆ. ಸರ್ವ ಸಮಾಜದವರ ಉತ್ಸವ ಇದಾಗಿದೆ ಎಂದರು.
ಕುಟುಂಬ ವ್ಯವಸ್ಥೆಯು ಸಾಕಷ್ಟು ಬದಲಾವಣೆಗಳು ಆಗಿವೆ. ಕುಟುಂಬಗಳಲ್ಲಿ ಒಗ್ಗಟ್ಟಿಲ್ಲ. ಸಂಕುಚಿತ ಭಾವನೆಗಳು ಹೆಚ್ಚಾಗಿ ಕುಟುಂಬ ವ್ಯವಸ್ಥೆ ಕ್ಷೀಣಿಸುತ್ತಿದೆ. ಕೂಡು ಕುಟುಂಬದ ಕಲ್ಪನೆ ಬಲಗೊಳ್ಳಬೇಕಿದೆ ಎಂದರು.
ವರ್ಗೀಕೃತ ವ್ಯವಸ್ಥೆ ಬಲಗೊಳ್ಳುತ್ತಿರುವ ಈ ದಿನಗಳಲ್ಲಿ ಬಸವಣ್ಣನವರ ಅನುಯಾಯಿಗಳು ಎಲ್ಲರೂ ಬಸವಣ್ಣನವರ ಆಚಾರ - ವಿಚಾರಗಳು, ಸಮ ಸಮಾಜದ ಪರಿಕಲ್ಪನೆಗಳ ಪಾಲನೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಿರಂಜನ ಜಗದ್ಗುರು ಕೊಟ್ಡೂರು ಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಉತ್ತಂಗಿಯ ಶ್ರೀ ಶಂಕರ ಸ್ವಾಮಿ ಮಠದ ಜಗದ್ಗುರು ಸೋಮೇಶ್ವರ ಮಹಾಸ್ವಾಮಿಗಳು, ಹಿರೇಮಲ್ಲನಕೆರೆಯ ವಿರಕ್ತಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯ ಮಹಾಸ್ವಾಮಿಗಳು, ನಂದೀಪುರದ ಶ್ರೀ ಚರಂತೇಶ್ವರ ಮಠದ ಡಾ. ಮಹೇಶ್ವರ ಮಹಾಸ್ವಾಮಿಗಳು ವೇದಿಕೆಯಲ್ಲಿದ್ದರು.
ಡೋಣಿ ಗದಗದ ಹಿರೇಮಠದ ಶಶಿಧರ ಶಾಸ್ತ್ರಿಗಳು ಪ್ರವಚನ ಮಂಗಲ ನುಡಿ ನುಡಿದರು. ಸುರೇಶ ಕುಮಾರ ಮತ್ತು ಸಿದ್ಧಲಿಂಗೇಶ ಅವರು ಸಂಗೀತ ಸಾಥ್ ನೀಡಿದರು.
ಸಿ.ಎಸ್. ಶರಣಯ್ಯ ಮತ್ತು ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ ಅವರು ಕಾರ್ಯಕ್ರಮ ನಿರೂಪಿಸಿದರು.
ವಿದುಷಿ ಅಚಲ ಜಿ.ಎಸ್. , ವಿಹಾನ್ ಮತ್ತು ತಂಡವು ವಚನ ಸಂಗೀತೋತ್ಸವವನ್ನು ನೆರವೇರಿತು. ವಿವಿಧ ಮಠಾಧಿಪತಿಗಳು ಮತ್ತು ಗಣ್ಯರು ವೇದಿಕೆಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್