
ಕೋಲಾರ, ೨೬ ಫೆಬ್ರವರಿ (ಹಿ.ಸ):
ಆ್ಯಂಕರ್ : ಎಸ್ಸೆಸ್ಸೆಲ್ಸಿ ಕಳೆದ ಸಾಲಿನ ಫಲಿತಾಂಶ ಕುಸಿಯಲು ಕಾರಣಗಳನ್ನು ತಿಳಿದು, ಈ ಬಾರಿ ಶೇ.೧೦೦ ಸಾಧನೆಗೆ ಮಕ್ಕಳನ್ನು ಸಜ್ಜುಗೊಳಿಸಿ, ಆತ್ಮಸ್ಥೆöÊರ್ಯ ತುಂಬಿ ಎಂದು ಕೆಜಿಎಫ್ ತಾಲ್ಲೂಕಿನ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಶಾಸಕಿ ರೂಪಕಲಾ ಶಶಿಧರ್ ತಾಕೀತು ಮಾಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಕರೆದಿದ್ದ ಕೆಜಿಎಫ್ ತಾಲ್ಲೂಕಿನ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು.
ಪ್ರತಿ ಶಾಲೆಯ ಮುಖ್ಯ ಶಿಕ್ಷಕರ ಬಳಿ ಆಯಾ ಶಾಲೆಯ ಪೂರ್ವಸಿದ್ದತಾ ಪರೀಕ್ಷೆಗಳ ಫಲಿತಾಂಶದ ಮಾಹಿತಿ ಪಡೆದು, ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಶ್ನಿಸಿದರು. ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ಶಿಕ್ಷಕರ ವರ್ಗಾವಣೆಯಿಂದ ಕಳೆದ ಬಾರಿ ಫಲಿತಾಂಶ ಕುಸಿಯಲು ಕಾರಣವಾಯಿತು ಎಂದು ಕೆಲವು ಮುಖ್ಯಶಿಕ್ಷಕರು ಅಳಲು ತೋಡಿಕೊಂಡರು.
ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಕೊರತೆ ತಕ್ಕಮಟ್ಟಿಗೆ ಸುಧಾರಿಸಿದ್ದು ಪ್ರತಿ ವಿಷಯದ ಶಿಕ್ಷಕರು ತಮ್ಮ ಸಂಪೂರ್ಣ ಶ್ರಮವನ್ನು ಹಾಕಿ ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ತಯಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಹತ್ತನೆ ತರಗತಿ ವಿದ್ಯಾರ್ಥಿಗಳಗೆ ಶಾಲಾ ಅವಧಿ ನಂತರ ಕೂಡ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತರಲಾಯಿತು.
ವಿದ್ಯಾರ್ಥಿಗಳ ಪೋಷಕರನ್ನು ಸಹಾ ಸಂಪರ್ಕಿಸಿ ಮನೆಯಲ್ಲಿ ಮಕ್ಕಳು ಓದಿಕೊಳ್ಳಲು ಉತ್ತಮ ವಾತಾವರಣ ಒದಗಿಸಲು ಮನವರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ ಕೆಲವು ಮುಖ್ಯಶಿಕ್ಷಕರು, ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.
ಸಭೆಗೆ ಗೈರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಕೆಲವು ಮುಖ್ಯಶಿಕ್ಷಕರು ಈವರೆಗೂ ಫಲಿತಾಂಶ ಉತ್ತಮ ಪಡಿಸುವ ಸಂಬAಧ ಬಿಇಒ ಅವರು ಯಾವುದೇ ಸಭೆ ನಡೆಸಿಲ್ಲ ಆದರೆ ಡಿಡಿಪಿಐ ಅವರು ಎರಡು ಸಭೆಗಳನ್ನು ನಡೆಸಿದ್ದಾರೆ ಎಂದು ವಿವರಿಸಿ, ಡಿಡಿಪಿಐ ಸಭೆಗೂ ಬಿಇಒ ಗೈರಾಗಿದ್ದರ ಕುರಿತು ಶಾಸಕರ ಗಮನಕ್ಕೆ ತಂದಾಗ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.
ಶಾಸಕರು ಮಾತನಾಡಿ, ಫಲಿತಾಂಶದ ಸುಧಾರಣೆ ಬಗ್ಗೆ ಶಿಕ್ಷಕರ ಮೇಲೆ ಒತ್ತಡ ಹಾಕುವುದರಿಂದ ಯಾವುದೇ ಪ್ರಯೋಜನ ಇಲ್ಲ ಅದು ಪ್ರತಿಯೊಬ್ಬರಿಗೆ ತಾನಾಗಿ ಬರಬೇಕು. ಒಬ್ಬ ಗುರು ತನ್ನ ವಿದ್ಯಾರ್ಥಿಯನ್ನು ತನಗಿಂತ ಉತ್ತಮ ಸ್ಥಾನ ಸಂಪಾದಿಸುವ ಶಕ್ತಿ ತುಂಬುತ್ತಾನೆ ಹಾಗಾಗಿ ಗುರು ನೆನೆದರೇ ಎಂತಹಾ ದಡ್ಡ ವಿದ್ಯಾರ್ಥಿಯನ್ನು ಸಹಾ ತಿದ್ದಬಹುದು ಆ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಶಾಲೆಗಳಲ್ಲಿ ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಹಕಾರ ಬೇಕಿದ್ದಲ್ಲಿ ತಮ್ಮನ್ನು ಮುಕ್ತವಾಗಿ ಸಂಪರ್ಕಿಸಬಹುದು ಸದಾ ನಿಮ್ಮೊಂದಿಗೆ ಇರುವುದಾಗಿ ಶಾಸಕರು ಭರವಸೆ ನೀಡಿದರು.
ಶಿಕ್ಷಕರು ಪೋಷಕರನ್ನು ಸಂಪರ್ಕಿಸಿ, ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ, ಮನೆಯಲ್ಲಿ ಪರೀಕ್ಷೆ ಮುಗಿಯುವವರೆಗೂ ಟಿವಿ,ಮೊಬೈಲ್ ಬಳಸದೇ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿ, ಮಕ್ಕಳ ಪ್ರಗತಿ ಗಮನಿಸಲು ಸಲಹೆ ನೀಡುವಂತೆ ಸೂಚಿಸಿದರು. ಶಾಲೆಯಿಂದ ಮನೆಗೆ ಹೋದ ಮಕ್ಕಳು ಮನೆಯಲ್ಲಿ ಓದುತ್ತಿದ್ದಾರೆಯೇ ಎಂಬುದನ್ನು ಶಿಕ್ಷಕರು ಪರಿಶೀಲಿಸಲು ಮನೆ ಭೇಟಿ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿ, ಮುಖ್ಯಶಿಕ್ಷಕರು ಗಮನಹರಿಸಲು ಕೋರಿದರು.
ಇದೇ ಸಂದರ್ಭದಲ್ಲಿ ಪೋಷಕರಿಗೆ ಮನವಿ ಮಾಡಿದ ಶಾಸಕರು, ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿದರೆ ತಮ್ಮ ಕೆಲಸ ಮುಗಿಯಿತು ಎಂಬ ಮನೋಭಾವ ಬಿಡಿ ಕನಿಷ್ಟ ತಿಂಗಳಿಗೊಮ್ಮೆಯಾದರೂ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರೊಂದಿಗೆ ಮಾತನಾಡಿ, ನಿಮ್ಮ ಮಗುವಿನ ಶೈಕ್ಷಣಿಕ ಪ್ರಗತಿಯ ಕುರಿತು ಅರಿತುಕೊಳ್ಳಿ ಎಂದು ಪೋಷಕರಿಗೆ ಸಲಹೆ ನೀಡಿದರು.
ತಮ್ಮ ಕಛೇರಿಯಿಂದ ಮಾಹಿತಿ ಇದ್ದರೂ ಸಹಾ ಇಂತಹ ಪ್ರಮುಖ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇಲಾಖಾ ಅಧಿಕಾರಿಗಳ ಪ್ರೋತ್ಸಾಹ ಇಲ್ಲವೆಂದು ಶಿಕ್ಷಕರು ತಿಳಿಸಿದ ವಿಷಯ ಪ್ರಸ್ತಾಪ ಮಾಡಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು
ಪ್ರೌಡಾಶಾಲಾ ಶಿಕ್ಷಕರನ್ನು ತಕ್ಷಣದಿಂದ ಬಿ.ಎಲ್.ಒ. ಕರ್ತವ್ಯದಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲು ಕಂದಾಯ ಇಲಾಖಾ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕೆಜಿಎಫ್ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಪ್ರೌಢ ಶಾಲೆಯ ಹಲವು ಶಿಕ್ಷಕರನ್ನು ಬಿ.ಎಲ್.ಒ. ಕರ್ತವ್ಯಕ್ಕೆ ನೇಮಿಸಲಾಗಿದ್ದು ಅದರಲ್ಲೂ ವಿಶೇಷವಾಗಿ ಪ್ರಮುಖ ವಿಷಯಗಳ ಶಿಕ್ಷಕನ್ನು ನೇಮಿಸಲಾಗಿದ್ದು ವಿದ್ಯಾರ್ಥಿಗಳ ಕಡೆ ಗಮನಹರಿಸುವುದು ಕಷ್ಟಕರವಾಗುತ್ತಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡು, ಬಿ.ಎಲ್.ಒ. ಕರ್ತವ್ಯದಿಂದ ಬಿಡುಗಡೆಗೊಳಿಸಲು ಕೋರಿದರು.
ಪ್ರಸಕ್ತ ಸಾಲಿನಲ್ಲಿ ಹತ್ತನೆ ತರಗತಿಯಲ್ಲಿ ಉತ್ತಮ ಫಲಿತಾಂಶದ ಸಾಧನೆ ಮಾಡಲಾಗುವುದು, ತಾಲ್ಲೂಕಿನ ಘನತೆ ಉಳಿಸಲಾಗುವುದು ಎಂದು ಎಲ್ಲಾ ಮುಖ್ಯಶಿಕ್ಷಕರರ ಪರವಾಗಿ ಅವರು ಶಾಸಕರಿಗೆ ಭರವಸೆ ನೀಡಿದರು.
ಸಭೆಯಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಅಧ್ಯಕ್ಷ ಮಾಲತೇಶ್, ಮುಖ್ಯಶಿಕ್ಷಕರಾದ ಸೈಯಿದಾಬಿ, ಮಂಜುನಾಥ್, ಅರುಣಾಭಟ್ ಸೇರಿದಂತೆ ಖಾಸಗಿ,ಅನುದಾನಿತ, ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್