ಸಂಶೋಧನಾ ತಪಸ್ವಿ ಪ್ರೊ ಸಿ.ಮಹಾದೇವಪ್ಪ ಅವರಿಗೆ ಒಲಿದು ಬಂದ ಗೌರವ
ಬೆಳಗಾವಿ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕನ್ನಡ ಸಾಹಿತ್ಯ ಸಂಶೋಧನಾ ಪರಂಪರೆಯಲ್ಲಿ ಕೆಲವು ವ್ಯಕ್ತಿತ್ವಗಳು ಕಾಲಾತೀತವಾಗಿರುತ್ತವೆ. ಅವರ ಸಾಧನೆ ಕೇವಲ ಕೃತಿಗಳ ಸಂಖ್ಯೆಯಲ್ಲಿ ಅಲ್ಲ, ಸಾಹಿತ್ಯದ ಆತ್ಮವನ್ನು ಅರಿತು ಅದನ್ನು ಪೀಳಿಗೆಗಳಿಗೆ ಹಂಚುವ ನಿಷ್ಠೆಯಲ್ಲಿ ಅಡಕವಾಗಿರುತ್ತದೆ. ಅಂತಹ ಮಹನೀಯರ
ಸಂಶೋಧನಾ ತಪಸ್ವಿ ಪ್ರೊ ಸಿ.ಮಹಾದೇವಪ್ಪ ಅವರಿಗೆ ಒಲಿದು ಬಂದ ಗೌರವ


ಬೆಳಗಾವಿ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕನ್ನಡ ಸಾಹಿತ್ಯ ಸಂಶೋಧನಾ ಪರಂಪರೆಯಲ್ಲಿ ಕೆಲವು ವ್ಯಕ್ತಿತ್ವಗಳು ಕಾಲಾತೀತವಾಗಿರುತ್ತವೆ. ಅವರ ಸಾಧನೆ ಕೇವಲ ಕೃತಿಗಳ ಸಂಖ್ಯೆಯಲ್ಲಿ ಅಲ್ಲ, ಸಾಹಿತ್ಯದ ಆತ್ಮವನ್ನು ಅರಿತು ಅದನ್ನು ಪೀಳಿಗೆಗಳಿಗೆ ಹಂಚುವ ನಿಷ್ಠೆಯಲ್ಲಿ ಅಡಕವಾಗಿರುತ್ತದೆ. ಅಂತಹ ಮಹನೀಯರಲ್ಲಿ ಸಂಶೋಧನಾ ತಪಸ್ವಿ ಪ್ರೊ. ಸಿ. ಮಹಾದೇವಪ್ಪನವರು ಅಗ್ರಗಣ್ಯರು. ಕಳೆದ ಎಂಟು ದಶಕಗಳಿಂದ ಕನ್ನಡ ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆ ಅಪಾರ ಮತ್ತು ಅಪೂರ್ವ. ವಯಸ್ಸು ನೂರನ್ನು ದಾಟಿದ್ದರೂ ಅವರಲ್ಲಿರುವ ಉತ್ಸಾಹ, ಚೈತನ್ಯ ಮತ್ತು ಅಧ್ಯಯನದ ತವಕ ಇಂದಿನ ಯುವ ಸಂಶೋಧಕರಿಗೂ ಮಾದರಿಯಾಗಿದೆ.

ಪ್ರೊ. ಮಹಾದೇವಪ್ಪನವರ ಜೀವನವೇ ಒಂದು ನಿರಂತರ ಸಾಧನೆಯ ಕಥೆ. ಸಾಹಿತ್ಯದ ಮೇಲೆ ಅವರಿಗಿದ್ದ ಪ್ರೀತಿ ಕೇವಲ ಆಸಕ್ತಿ ಮಟ್ಟದಲ್ಲೇ ನಿಂತಿರಲಿಲ್ಲ; ಅದು ತಪಸ್ಸಿನ ರೂಪ ಪಡೆದಿತ್ತು. ಗ್ರಂಥಾಲಯಗಳಲ್ಲಿನ ಅನೇಕ ಅಮೂಲ್ಯ ಪಾಂಡಿತ್ಯಗ್ರಂಥಗಳನ್ನು ಶೋಧಿಸಿ, ಅಪರೂಪದ ಕೃತಿಗಳನ್ನು ಸಂಗ್ರಹಿಸಿ, ಅವುಗಳನ್ನು ಸಮಗ್ರವಾಗಿ ಸಂಪಾದಿಸಿ ಪ್ರಕಟಿಸುವ ಮೂಲಕ ಅವರು ಕನ್ನಡ ಸಾಹಿತ್ಯಲೋಕಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಸಂಶೋಧನೆ ಎಂದರೆ ಕೇವಲ ಮಾಹಿತಿಗಳ ಸಂಗ್ರಹವಲ್ಲ; ಅದರ ಹಿಂದೆ ಇರುವ ತತ್ತ್ವ, ಚಿಂತನೆ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಅರಿಯುವುದು ಮುಖ್ಯ ಎಂಬುದನ್ನು ಅವರು ತಮ್ಮ ಕಾರ್ಯದಿಂದ ತೋರಿಸಿದ್ದಾರೆ.

೧೦೪ ವರ್ಷಗಳ ಸುದೀರ್ಘ ಜೀವನ ಸಾಗಿಸುತ್ತಿರುವ ಇವರ ಬತ್ತದ ಉತ್ಸಾಹ ನಿಜಕ್ಕೂ ಆಶ್ಚರ್ಯಕರ. ವಯಸ್ಸು ದೇಹಕ್ಕೆ ಬಂದರೂ ಮನಸ್ಸಿಗೆ ಬರಬಾರದು ಎಂಬುದಕ್ಕೆ ಅವರು ಜೀವಂತ ಸಾಕ್ಷಿ. ಸಾಹಿತ್ಯ ಕ್ಷೇತ್ರದ ಭೀಷ್ಮರೆಂದು ಕರೆಯಲ್ಪಡುವ ಇಂತಹ ಮಹನೀಯರಿಗೆ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ ದೊರೆತಿರುವುದು ಅತ್ಯಂತ ಸಂತೋಷದ ಸಂಗತಿ. ಈ ಗೌರವ ಅವರಿಗೆ ಎಂದೋ ದೊರಕಬೇಕಾಗಿದ್ದರೂ, ಗುಣಗ್ರಾಹಿ ಕುಲಪತಿಗಳಾದ ಡಾ. ಡಿ. ವಿ. ಪರಮಶಿವಮೂರ್ತಿ ಅವರ ಅವಧಿಯಲ್ಲಿ ಅದು ಸಾಧ್ಯವಾದುದು ಅಭಿನಂದನೀಯ. ಇದು ಕೇವಲ ವ್ಯಕ್ತಿಗೌರವವಲ್ಲ; ಕನ್ನಡ ಸಂಶೋಧನಾ ಪರಂಪರೆಯನ್ನೇ ಗೌರವಿಸುವ ಒಂದು ಚಿಹ್ನೆ.

೨೩-೪-೨೦೨೨ರಂದು ಕರ್ನಾಟಕ ಪ್ರಕಾಶಕರ ಸಂಘವು ಬೆಂಗಳೂರಿನಲ್ಲಿ ನನಗೆ ‘ಎಂ. ಗೋಪಾಲಕೃಷ್ಣ ಸಾಹಿತ್ಯ ಪರಿಚಾರಕ ಪ್ರಶಸ್ತಿ’ ಪ್ರದಾನ ಮಾಡಿದ ಸಂದರ್ಭದಲ್ಲಿ, ಡಾ. ಬಿ. ನಂಜುಂಡಸ್ವಾಮಿ ಅವರು ವೈಯ್ಯಾಲಿಕಾವಲ್ನ ಶಾರದಾನಿವಾಸದಲ್ಲಿರುವ ಬೆಂಗಳೂರು ಸಂಶೋಧನ ಕೋಟಿಗೆ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿ ಪ್ರೊ. ಮಹಾದೇವಪ್ಪನವರು ನೂರು ವರ್ಷದ ತುಂಬು ಭರ್ತಿಯಲ್ಲಿದ್ದರು. ಆದರೂ ನಮ್ಮೊಂದಿಗೆ ತಾಸಾನುಗಟ್ಟಲೆ ಮಾತನಾಡಿ, ತಮ್ಮ ಸಂಶೋಧನಾ ಜೀವನದ ಪಥವನ್ನು ಮೆಲುಕು ಹಾಕಿದರು. ತಾವು ನಡೆಸಿದ ಅಧ್ಯಯನಗಳು, ಎದುರಿಸಿದ ಸವಾಲುಗಳು, ಇನ್ನೂ ಮಾಡಬೇಕಾದ ಕಾರ್ಯಗಳ ಬಗ್ಗೆ ಉತ್ಸಾಹದಿಂದ ಹಂಚಿಕೊಂಡರು.

ಅವರು ಕಟ್ಟಿಗೆಹಳ್ಳಿ ಸಿದ್ಧಲಿಂಗನ ವಚನ ಸಂಕಲನವನ್ನು ಸಂಪಾದಿಸುತ್ತಿರುವುದಾಗಿ ತಿಳಿಸಿದಾಗ, ನೂರನೆಯ ವಯಸ್ಸಿನಲ್ಲಿಯೂ ಅವರಲ್ಲಿ ಉಳಿದಿದ್ದ ಅಧ್ಯಯನದ ತುಡಿತ ನನ್ನಲ್ಲಿ ಆಶ್ಚರ್ಯ ಮತ್ತು ಪ್ರೇರಣೆಯನ್ನು ಮೂಡಿಸಿತು. ಸಾಹಿತ್ಯ ಸೇವೆ ಅವರಿಗೆ ಉದ್ಯೋಗವಲ್ಲ; ಅದು ಜೀವನ ಧ್ಯೇಯ. ಸಂಶೋಧನೆ ಅವರಿಗಾಗಿ ಸಾಧನೆಯ ಮಾರ್ಗ. ಅವರ ಮಾತುಗಳಲ್ಲಿ ಕಂಡ ಆತ್ಮವಿಶ್ವಾಸ ಮತ್ತು ಕನ್ನಡ ಸಾಹಿತ್ಯದ ಮೇಲೆ ಕಂಡ ಅಪಾರ ಪ್ರೀತಿ ಮರೆಯಲಾಗದ ಅನುಭವ.

ಅತ್ಯಂತ ಮುದ ನೀಡಿದ ಕ್ಷಣವೆಂದರೆ, ಅವರು ಒಳಗೆ ಹೋಗಿ ತಮ್ಮ ದೀರ್ಘ ತಪಸ್ಸಿನ ಫಲವಾಗಿ ಸಂಪಾದಿಸಿದ ‘ಪ್ರಭುಗೀತಾ’ ಕೃತಿಯನ್ನು ತಂದು, ಅದಕ್ಕೆ ಸಹಿ ಮಾಡಿ ಪ್ರೀತಿಯಿಂದ ನನಗೆ ನೀಡಿದ ಸಂದರ್ಭ. ಆ ಕ್ಷಣ ನನ್ನ ಜೀವನದಲ್ಲಿ ಅಮೂಲ್ಯ ಸ್ಮರಣೆಯಾಗಿ ಉಳಿದಿದೆ. ಅದು ಕೇವಲ ಪುಸ್ತಕದ ಕೊಡುಗೆಯಲ್ಲ; ಒಂದು ಮಹಾನ್ ಸಂಶೋಧಕರ ಆಶೀರ್ವಾದದ ಪ್ರತೀಕ.

ಕನ್ನಡ ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ದೀರ್ಘಕಾಲದ ತಪಸ್ಸಿನ ಮೂಲಕ ಅಪೂರ್ವ ಸ್ಥಾನವನ್ನು ಪಡೆದ ಮಹನೀಯರಲ್ಲಿ ಪ್ರೊ. ಸಿ. ಮಹಾದೇವಪ್ಪನವರು ಅಗ್ರಗಣ್ಯರು. ಮೈಸೂರು ಜಿಲ್ಲೆಯ ಸೋಸಲೆ ಗ್ರಾಮದಲ್ಲಿ ಸೋಸಲೆ ಬಸಪ್ಪ ಮತ್ತು ವೀರಾಜಮ್ಮ ದಂಪತಿಗಳ ಮಗನಾಗಿ ೮ ಜುಲೈ ೧೯೨೨ರಂದು ಜನಿಸಿದ ಅವರು, ಬಾಲ್ಯದಿಂದಲೇ ಅಕ್ಷರ ಸಂಸ್ಕೃತಿಯ ವಾತಾವರಣದಲ್ಲಿ ಬೆಳೆದರು. ಅವರ ತಂದೆ ಬಸಪ್ಪನವರು ಪ್ರಾಥಮಿಕ ಶಾಲೆಯ ಉಪಾಧ್ಯಯರಾಗಿದ್ದುದರಿಂದ, ಎಳೆಯ ವಯಸ್ಸಿನಲ್ಲಿಯೇ ವಿದ್ಯೆಯ ಮೆಲುಕು ಮತ್ತು ಪುಸ್ತಕಪ್ರೀತಿ ಅವರ ಮನಸ್ಸಿನಲ್ಲಿ ಬೆಳೆದಿತು.

ಪ್ರಾಥಮಿಕ ಶಿಕ್ಷಣವನ್ನು ಸೋಸಲೆಯಲ್ಲಿ ಪೂರ್ಣಗೊಳಿಸಿದ ಅವರು, ಮೈಸೂರಿನ ಮರಿಮಲ್ಲಪ್ಪ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಪದವಿ ಪಡೆದರು. ಅವರ ವಿದ್ಯಾಭ್ಯಾಸದ ಹಾದಿಯಲ್ಲಿ ಆ ಕಾಲದ ಮಹನೀಯರಾದ ಎ.ಆರ್. ಕೃಷ್ಣಶಾಸ್ತ್ರಿ, ಡಿ.ಎಲ್. ನರಸಿಂಹಾಚಾರ್, ಕೆ. ವೆಂಕಟರಾಮಪ್ಪ, ಹಾಗೂ ಕೆ.ವಿ. ಪುಟ್ಟಪ್ಪ (ಕುವೆಂಪು) ಮೊದಲಾದ ಮಹಾಮನಿಗಳು ಗುರುಗಳಾಗಿ ದಾರಿದೀಪರಾದರು. ಈ ಪಾಂಡಿತ್ಯಮಯ ವಾತಾವರಣವು ಮಹಾದೇವಪ್ಪನವರ ಸಂಶೋಧನಾ ಮನೋಭಾವಕ್ಕೆ ದೃಢವಾದ ಅಸ್ತಿತ್ವ ನೀಡಿತು.

ಕೆಲವು ಕಾಲ ಮೈಸೂರಿನ ಪ್ರಾಚ್ಯ ಸಂಶೋಧನಾ ಸಂಸ್ಥೆಯಲ್ಲಿ ಓಲೆಗರಿ ಪ್ರತಿಮಾಡುವ ಕಾರ್ಯ ನಿರ್ವಹಿಸಿದ ಅವರು, ಹಸ್ತಪ್ರತಿಗಳೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡರು. ಆ ಅನುಭವವೇ ಅವರ ಮುಂದಿನ ಸಂಪಾದನಾ ಕಾರ್ಯಗಳಿಗೆ ಪೂರಕವಾಯಿತು. ತುಮಕೂರಿನ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, ಚಿಕ್ಕಮಗಳೂರಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿ ಹಾಗೂ ಬೆಂಗಳೂರಿನ ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಬಳಿಕ ಎಂ.ಎ. ಶಿಕ್ಷಣವನ್ನು ಪೂರ್ಣಗೊಳಿಸಿ ತಮ್ಮ ವಿದ್ಯಾಸಾಧನೆಯನ್ನು ಮತ್ತಷ್ಟು ಗಾಢಗೊಳಿಸಿದರು.

ಶೈಕ್ಷಣಿಕ ಕ್ಷೇತ್ರದ ಹೊರತಾಗಿಯೂ ಅವರು ಮೈಸೂರು ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸಕರಾಗಿ, ‘ಪ್ರಬುದ್ಧ ಕರ್ನಾಟಕ’ ಸಂಪಾದಕ ಸಮಿತಿ ಅಧ್ಯಕ್ಷರಾಗಿ, ವಿವಿಧ ಪರೀಕ್ಷಾ ಮಂಡಳಿಗಳ ಅಧ್ಯಕ್ಷರಾಗಿ ಹಾಗೂ ಭಾಷಾಂತರ ಯೋಜನೆಯ ಸಮಿತಿ ಸದಸ್ಯರಾಗಿ ಅಪೂರ್ವ ಸೇವೆ ಸಲ್ಲಿಸಿದರು. ಅವರ ಸೇವಾ ವ್ಯಾಪ್ತಿ ಶಿಕ್ಷಣ, ಸಂಪಾದನೆ, ಸಂಶೋಧನೆ ಮತ್ತು ಸಂಘಟನಾ ಕ್ಷೇತ್ರಗಳವರೆಗೂ ವಿಸ್ತರಿಸಿತ್ತು.

ಸಂಪಾದನಾ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ವಿಶೇಷ ಗಮನಾರ್ಹ. ಗುಬ್ಬಿ ಮಲ್ಲಣಾರ್ಯನ ಭಾವಚಿಂತಾರತ್ನ, ಹರಿಹರ ಕವಿಯ ಮನುಚೋಳ ರಗಳೆ, ಚೆನ್ನಂಜೆದೇವರ ಶಂಕರದೇವರ ಕಂದ, ಚಂದ್ರಕವಿಯ ಶಂಕರ ಶತಕ ಮುಂತಾದ ಕೃತಿಗಳ ಸಂಪಾದನೆಯ ಮೂಲಕ ಶತಕ ಸಾಹಿತ್ಯಕ್ಕೆ ಹೊಸ ಚೈತನ್ಯ ನೀಡಿದರು. ಸಂಶೋಧನಾತ್ಮಕ ಅಜ್ಞಾತ ಶತಕಗಳನ್ನು ಉಧೃತ ವೃತ್ತಗಳೊಂದಿಗೆ ಪರಿಚಯಿಸಿ, ಕನ್ನಡ ಸಾಹಿತ್ಯಲೋಕಕ್ಕೆ ಹೊಸ ದಾರಿಯನ್ನು ತೋರಿಸಿದರು.

ಇದಷ್ಟೇ ಅಲ್ಲದೆ ಮುಕ್ತಿಸೋಪಾನ ಗೋರಕ್ಷ ಶತಕ, ಉದಯಾದಿತ್ಯಾಲಂಕಾರ, ಕಾವ್ಯ ಸಮರ್ಥನೆ (ಕವಿ ಶೆಲ್ಲಿಯ ಕೃತಿಯ ಅನುವಾದ), ಪ್ರಭುಗೀತಾ, ವೀರಶೈವ ಸಾಹಿತ್ಯ ಮತ್ತು ಇತರ ಲೇಖನಗಳು, ಅರವತ್ತುಮೂರು ಚರಿತ್ರೆ (ಆರಾಧ್ಯದೇವ ಕೃತಿ), ತೋಂಟದ ಸಿದ್ಧೇಶ್ವರ ಪುರಾಣ, ಉದಯಾದಿತ್ಯನ ಜ್ಞಾನಸಾರ, ಕಲ್ಯಾಣ ಶತಕ, ಕಟ್ಟಿಗೆಹಳ್ಳಿ ಸಿದ್ಧಲಿಂಗನ ಏಕೋತ್ತರ ಶತಸ್ಥಲ ಮುಂತಾದ ಅನೇಕ ಅಮೂಲ್ಯ ಕೃತಿಗಳನ್ನು ಸಂಪಾದಿಸಿ ಕನ್ನಡ ಸಾರಸ್ವತ ಪ್ರಪಂಚಕ್ಕೆ ನೀಡಿದರು. ಈ ಕೃತಿಗಳ ಮೂಲಕ ಅವರು ಕೇವಲ ಪಾಠಸಂಪಾದಕರಾಗಿ ಮಾತ್ರವಲ್ಲ, ಸಂಶೋಧನಾತ್ಮಕ ಚಿಂತಕರಾಗಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡರು.

ಪ್ರಭುಗೀತಾ ಕೃತಿ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದ ಮಹತ್ವದ ಗ್ರಂಥ. ಅನೇಕ ವರ್ಷಗಳ ಕಾಲ ಅಪ್ರಕಟಿತವಾಗಿಯೇ ಉಳಿದಿದ್ದ ಈ ಕೃತಿಯನ್ನು ಒಂದೇ ಒಂದು ಹಸ್ತಪ್ರತಿಯನ್ನು ಆಧರಿಸಿ ಸಂಶೋಧನಾ ತಪಸ್ವಿ ಪ್ರೊ. ಸಿ. ಮಹಾದೇವಪ್ಪ ಅವರು ಕನ್ನಡ ಮತ್ತು ಸಂಸ್ಕೃತ ಉಭಯ ಭಾಷೆಗಳಲ್ಲಿ ಪ್ರಕಟಿಸಿದುದು ಅವರ ಪಾಂಡಿತ್ಯ, ಸಹನೆ ಮತ್ತು ತಪಸ್ಸಿನ ಸಾರ್ಥಕತೆಯ ಸಂಕೇತವಾಗಿದೆ. ಹಸ್ತಪ್ರತಿಗಳ ಅಧ್ಯಯನ, ಪಾಠಾಂತರಗಳ ಪರಿಶೀಲನೆ, ಅರ್ಥನಿರ್ಣಯ ಹಾಗೂ ವ್ಯಾಖ್ಯಾನ. ಆ ಮಹಾಕಾರ್ಯವನ್ನು ಅವರು ಅತ್ಯಂತ ಶ್ರದ್ಧೆಯಿಂದ ನೆರವೇರಿಸಿದರು.

ಈ ಕೃತಿಯ ಲೋಕಾರ್ಪಣೆ ಅಂದಿನ ಭಾರತದ ಉಪರಾಷ್ಟ್ರಪತಿಗಳಾಗಿದ್ದ ಭೈರೋನ್ ಸಿಂಗ್ ಶೇಖಾವತ್ ಅವರಿಂದ ನಡೆದಿರುವುದು ವಿಶೇಷ ಗೌರವದ ವಿಷಯ. ಇದು ಕೇವಲ ಒಂದು ಗ್ರಂಥದ ಬಿಡುಗಡೆ ಮಾತ್ರವಲ್ಲ; ಶರಣ ಸಂಸ್ಕೃತಿ ಮತ್ತು ವಚನ ಪರಂಪರೆಯ ಮಹತ್ವವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿಷ್ಠಾಪಿಸಿದ ಘಟನೆಯೂ ಆಗಿದೆ.

ಶರಣ ಸಂಸ್ಕೃತಿ ಅಧ್ಯಯನಕ್ಕೆ ಪ್ರಭುಗೀತಾ ಐತಿಹಾಸಿಕ ಮಹತ್ವದ್ದಾಗಿದೆ. ವಚನ ಸಾಹಿತ್ಯದ ಜ್ಞಾನಾನುಭವವನ್ನು ಸಂಸ್ಕೃತ ಪಾಂಡಿತ್ಯದ ಮೂಲಕವೂ ಗ್ರಹಿಸಲು ಸಾಧ್ಯವಿದೆ ಎಂಬುದನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ. ವಚನಗಳು ಆನುಭಾವಿಕ, ಜೀವಂತ ಮತ್ತು ನೇರ ಜೀವನದ ಅನುಭವಗಳ ಅಭಿವ್ಯಕ್ತಿ. ಆದರೆ ಅವುಗಳ ತತ್ತ್ವಸಾರವನ್ನು ಕೇವಲ ಸಂಸ್ಕೃತಪರ ಪಂಡಿತರು ಅರ್ಥಮಾಡಿಕೊಳ್ಳುವುದು ಸುಲಭವಿರಲಿಲ್ಲ. ಈ ಹಿನ್ನೆಲೆಯನ್ನು ಪ್ರೊ. ಮಹಾದೇವಪ್ಪನವರು ತಮ್ಮ ಪ್ರಸ್ತಾವನೆಯಲ್ಲಿ ವಿವರಿಸುತ್ತಾರೆ.

ಅವರು ಗುಬ್ಬಿಯ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣದಲ್ಲಿನ ಒಂದು ಷಟ್ಪದಿಯನ್ನು ಉಲ್ಲೇಖಿಸುತ್ತಾರೆ:

ವಿದ್ಯಾನಗರಿಯಲ್ಲಿಯಲ್ಲಮಪ್ರಭುದೇವ

ಹೃದ್ಯವಚನವನೊಗಟೆಯೆನಲಾಗ ನೃಪಸಭಾ

ವೇದ್ಯಮಪ್ಪಂತೆ ವೇದಾಗಮಾರ್ಥನಿಘಂಟುಸನ್ಮತ ಪ್ರಭುಗೀತೆಯಾ

ಆದ್ಯಾಂತವಾಗಿ ರಚಿಸುತ ಶಿಲಾಶಾಸನದೊ

ಳುದ್ಯನ್ಮಹಾತತ್ವನಿರ್ಣಯವ ಲೇಖಿಸುತ

ತದ್ಯಶೋಮೂರ್ತಿ ಹೆಸರಾದನಾ ಮಾಯಿದೇವ ಪ್ರಭೂತ್ತಮನೇಳ್ಗೆಯಿಂ

(ವೀರಶೈವಾಮೃತ ಪುರಾಣ ಕಾಂ.೭, ಸಂಧಿ ೧೭)

ಈ ಪದ್ಯದ ಆಶಯವನ್ನು ವಿವರಿಸುವ ಸಂದರ್ಭದಲ್ಲಿ ಮಹಾದೇವಪ್ಪನವರು ಹೇಳುವಂತೆ, ಆನುಭಾವಿಕ ವಚನ ಸಾಹಿತ್ಯದ ಜ್ಞಾನಾನುಭವವು ಕೇವಲ ಸಂಸ್ಕೃತಪರ ಅನ್ಯಧರ್ಮೀಯ ಪಂಡಿತರಿಗೆ ತತ್ತ್ವದೃಷ್ಟಿಯ ರುಚಿಭೇದದಿಂದ ಸಂಪೂರ್ಣವಾಗಿ ಲಭ್ಯವಾಗಲಿಲ್ಲ. ಹೀಗಾಗಿ ಪ್ರಭುದೇವರ ವಚನಗಳು ರಾಜಸಭೆಯ ಪಂಡಿತರಿಗೆ ‘ಒಗಟು’ಯಂತಾಗಿದ್ದವು. ಆ ಬೌದ್ಧಿಕ ಕೊರತೆಯನ್ನು ನಿವಾರಿಸಲು ಮಗ್ಗೆಯ ಮಾಯಿದೇವರು ಪ್ರಭುದೇವರ ವಚನಗಳನ್ನು ಸಂಸ್ಕೃತಪರರಿಗೆ ಸುಪರಿಚಿತವಾದ ಭಾಷಾಶೈಲಿಯಲ್ಲಿ, ವೇದಾಗಮಾರ್ಥಸಮ್ಮತವಾಗಿ ವ್ಯಾಖ್ಯಾನಿಸಿ ನೃಪಸಭೆಗೆ ವೇದ್ಯವಾಗುವಂತೆ ರೂಪಿಸಿದರು ಎಂದು ಅವರು ವಿಶ್ಲೇಷಿಸುತ್ತಾರೆ.

ಇದರಿಂದ ಎರಡು ಪ್ರಮುಖ ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ, ವಚನ ಸಾಹಿತ್ಯದ ತತ್ತ್ವಗಂಭೀರತೆ. ಎರಡನೆಯದಾಗಿ, ಅದರ ಸಾರವನ್ನು ವಿಭಿನ್ನ ಭಾಷಾ-ಸಾಂಸ್ಕೃತಿಕ ವಲಯಗಳಿಗೆ ತಲುಪಿಸುವ ಅಗತ್ಯತೆ. ಪ್ರಭುಗೀತಾ ಈ ಎರಡು ಲೋಕಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಕನ್ನಡದ ಆನುಭಾವಿಕ ಪರಂಪರೆಯನ್ನು ಸಂಸ್ಕೃತ ತತ್ತ್ವಚಿಂತನೆಯೊಂದಿಗೆ ಸಂವಾದಗೊಳಿಸುವ ಅಪೂರ್ವ ಪ್ರಯತ್ನ ಇದಾಗಿದೆ.

ಇದೇ ಸಂದರ್ಭದಲ್ಲಿ ಪ್ರೊ. ಮಹಾದೇವಪ್ಪನವರು ಇಂಗ್ಲಿಷ್ ಭಾಷೆಯಲ್ಲಿಯೂ ಪ್ರಸ್ತಾವನೆ ಬರೆದು, ಶರಣ ತತ್ತ್ವವನ್ನು ಅಂತರರಾಷ್ಟ್ರೀಯ ವಾಚಕರಿಗೂ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಇದು ಅವರ ದೂರದೃಷ್ಟಿ ಮತ್ತು ಸಮಗ್ರ ಚಿಂತನೆಯ ಪ್ರತಿಬಿಂಬ. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್—ಈ ಮೂರು ಭಾಷಾ ಪ್ರಪಂಚಗಳ ನಡುವೆ ಸಂವಹನ ಸಾಧಿಸಿದ ಈ ಕೃತಿ, ನಿಜಾರ್ಥದಲ್ಲಿ ಬಹುಭಾಷಾ ಸಂಶೋಧನೆಯ ಮಾದರಿಯಾಗಿದೆ.

ಹನ್ನೆರಡನೆಯ ಶತಮಾನದಲ್ಲಿ ಅರಳಿಕೊಂಡ ಆಧ್ಯಾತ್ಮಿಕ ಕಂದಾವರೆಯ ಪರಿಮಳವು ನಿಡುಗಾಲ ನಾಡೆಲ್ಲ ಹರಡಿಕೊಂಡಿದೆ. ಆ ಕಂದಾವರೆಯ ಪರಿಮಳವೆಂದರೆ ಅಲ್ಲಮಪ್ರಭುದೇವ ಅವರ ಮಹಾಮಹಿಮ ವ್ಯಕ್ತಿತ್ವ. ಸಾವಿರಾರು ವರ್ಷಗಳಿಂದ ಈ ಭೂಮಿಯಲ್ಲಿ ಉಳಿದು, ಬೆಳೆದು, ಬೇರೂರಿಕೊಂಡಿದ್ದ ಆಧ್ಯಾತ್ಮದ ಒಲವು ಈ ಸಿದ್ಧಪುರುಷನಲ್ಲಿ ಬಾನೆತ್ತರ ಗರಿಕೆದರಿಕೊಂಡಿತು. ಅವರ ವಚನಗಳ ತತ್ತ್ವಗಂಭೀರತೆ, ಭಾಷೆಯ ಆಳ, ಅನುಭವದ ಶುದ್ಧತೆ—ಇವುಗಳ ವೈಭವಕ್ಕೆ ಬೆರಗಾಗದವರು ಕನ್ನಡನಾಡಿನಲ್ಲಿ ಯಾರಿದ್ದಾರೆ?

ಅಲ್ಲಮಪ್ರಭುದೇವರ ಕನ್ನಡ ವಚನಗಳನ್ನು ಸಂಸ್ಕೃತ ಭಾಷೆಗೆ ಪರಿವರ್ತಿಸಿ, ರಾಷ್ಟ್ರದ ಸಂಸ್ಕೃತಪರ ಪಾಂಡಿತ್ಯವಲಯಕ್ಕೆ ಅವರ ತತ್ತ್ವವನ್ನು ಪರಿಚಯಿಸಬೇಕೆಂಬ ಸಾಹಸ ಹದಿನೈದನೆಯ ಶತಮಾನದಲ್ಲೇ ನಡೆದಿದೆ. ಪ್ರಭುದೇವರು ಕಣ್ಮರೆಯಾಗಿ ಸುಮಾರು ಮೂರು ಶತಮಾನಗಳ ನಂತರ ಮಗ್ಗೆಯ ಮಾಯಿದೇವರು ಈ ಮಹತ್ತರ ಕಾರ್ಯವನ್ನು ಕೈಗೊಂಡರು. ಕನ್ನಡದ ಆನುಭಾವಿಕ ವಚನ ಪರಂಪರೆಯನ್ನು ಸಂಸ್ಕೃತದ ತತ್ತ್ವಭಾಷೆಗೆ ಅನುವಾದಿಸುವುದು ಸುಲಭ ಕಾರ್ಯವಲ್ಲ; ಅದು ಎರಡು ಸಂಸ್ಕೃತಿಗಳ ನಡುವಿನ ಸೇತುವೆ ನಿರ್ಮಿಸುವ ಮಹಾಯತ್ನ.

ಆದರೆ ಈ ಅಮೂಲ್ಯ ಕೃತಿ ದೀರ್ಘಕಾಲ ಇತಿಹಾಸದ ಮಣ್ಣಿನಡಿಯಲ್ಲಿ ಇಂಗಿದ ತೊರೆಯಂತೆ ಅಡಗಿಯೇ ಉಳಿಯಿತು. ಅದರ ಅಸ್ತಿತ್ವವೇ ಬಹುಜನರಿಗೆ ತಿಳಿಯದಂತಾಯಿತು. ಇಂತಹ ಸಂದರ್ಭದಲ್ಲಿ ಆ ಕೃತಿಯನ್ನು ಅನ್ವೇಷಿಸಿ, ಪತ್ತೆಹಚ್ಚಿ, ಸಂಪಾದಿಸಿ, ಲೋಕಕ್ಕೆ ಪರಿಚಯಿಸಿದ ಮಹೋನ್ನತ ಕಾರ್ಯವನ್ನು ನೆರವೇರಿಸಿದವರು ಸಂಶೋಧನಾ ತಪಸ್ವಿ ಪ್ರೊ. ಸಿ. ಮಹಾದೇವಪ್ಪ. ಇದು ಕೇವಲ ಸಂಪಾದನಾ ಕಾರ್ಯವಲ್ಲ; ಇತಿಹಾಸದ ಒಳಹೊಕ್ಕ ಬೆಳಕನ್ನು ಹೊರಗೆ ತಂದು ನಿಲ್ಲಿಸಿದ ಮತ್ತೊಂದು ಸಾಹಸ.

ವಿದ್ಯಾಲಂಕಾರ, ಶಾಸ್ತ್ರಚೂಡಾಮಣಿ, ವಿದ್ಯಾವಾಚಸ್ಪತಿ ಎನಿಸಿಕೊಂಡಿದ್ದ ಸಾ. ಕೃ. ರಾಮಚಂದ್ರರಾವ್ ಅವರು “ಮಗ್ಗೆಯ ಮಾಯಿದೇವರ ಸಾಹಸವನ್ನು ಬೆಳಕಿಗೆ ತಂದ ಮಹಾದೇವಪ್ಪನವರ ಕಾರ್ಯವೇ ಇನ್ನೊಂದು ಸಾಹಸ” ಎಂದು ಹೇಳಿರುವ ನುಡಿಗಳು ಅಕ್ಷರಶಃ ಸತ್ಯ. ಈ ಮಾತುಗಳಲ್ಲಿ ಮಹಾದೇವಪ್ಪನವರ ಸಂಶೋಧನಾ ಗಂಭೀರತೆ ಮತ್ತು ಅವರ ಕಾರ್ಯದ ಐತಿಹಾಸಿಕ ಮಹತ್ವ ಸ್ಪಷ್ಟವಾಗುತ್ತದೆ.

ಕನ್ನಡ, ಸಂಸ್ಕೃತ ಮತ್ತು ಆಧ್ಯಾತ್ಮಿಕ ಪರಂಪರೆಯ ತ್ರಿವೇಣಿ ಸಂಗಮವಾಗಿ ಹೊರಹೊಮ್ಮಿದ ಈ ಸಂಶೋಧನಾ ಸಾಧನೆ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ಇಂತಹ ಮಹನೀಯ ಸಂಶೋಧಕರಿಗೆ ಈಗ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿ ದೊರೆತಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ನೂರಾ ನಾಲ್ಕು ವರ್ಷಗಳ ಹಿರಿಯ ವಿದ್ವಾಂಸರಾದ ಪ್ರೊ. ಸಿ. ಮಹಾದೇವಪ್ಪನವರು ಇನ್ನೂ ದೀರ್ಘಕಾಲ ನಮ್ಮ ಮಧ್ಯದಲ್ಲಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಸಂವರ್ಧಿಸಲಿ, ಸಂಶೋಧನಾ ದೀಪವನ್ನು ಬೆಳಗಿಸಲಿ ಎಂಬುದು ಹೃತ್ಪೂರ್ವಕ ಪ್ರಾರ್ಥನೆ.

-ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande