
ನವದೆಹಲಿ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 25-26 ರಂದು ಎರಡು ದಿನಗಳ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಹಾಗೂ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಫೆ.25ರಂದು ಟೆಲ್ ಅವಿವ್ ತಲುಪಲಿದ್ದು, ಮೊದಲ ದಿನ ನೆಸ್ಸೆಟ್ ಅನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಲ್ಲದೆ ಭಾರತೀಯ ಮೂಲದ ಸಮುದಾಯದೊಂದಿಗೆ ಸಂವಾದ ಹಾಗೂ ತಂತ್ರಜ್ಞಾನ ಪ್ರದರ್ಶನಕ್ಕೆ ಭೇಟಿ ಕಾರ್ಯಕ್ರಮವೂ ನಿಗದಿಯಾಗಿದೆ. ಸಂಜೆ ಪ್ರಧಾನಿ ನೆತನ್ಯಾಹು ಆಯೋಜಿಸುವ ಭೋಜನದಲ್ಲಿ ಭಾಗವಹಿಸಲಿದ್ದಾರೆ.
ಫೆ.26ರಂದು ಅವರು ಯಾದ್ ವಶೇಂ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ. ಬಳಿಕ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಮಾತುಕತೆಯ ಬಳಿಕ ನಾವೀನ್ಯತೆ, ವಿಜ್ಞಾನ-ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ರಕ್ಷಣಾ, ಕೃಷಿ, ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲೂ ಸಹಕಾರ ವಿಸ್ತರಣೆ ಚರ್ಚೆಯಾಗಲಿದೆ.
2017ರಲ್ಲಿ ಪ್ರಧಾನಿ ಮೋದಿ ಇಸ್ರೇಲ್ಗೆ ಐತಿಹಾಸಿಕ ಭೇಟಿ ನೀಡಿದ್ದು, ನಂತರ 2018ರಲ್ಲಿ ನೆತನ್ಯಾಹು ಭಾರತಕ್ಕೆ ಭೇಟಿ ನೀಡಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಉಭಯ ನಾಯಕರು ಪ್ರಾದೇಶಿಕ ಪರಿಸ್ಥಿತಿ, ಭಯೋತ್ಪಾದನೆ ಮತ್ತು ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಕುರಿತು ನಿಯಮಿತ ಸಂಪರ್ಕದಲ್ಲಿದ್ದಾರೆ.
ರಕ್ಷಣಾ ಸಹಕಾರ, ಜಂಟಿ ಸಂಶೋಧನೆ, ಐ4ಎಫ್ ನಿಧಿ, ಕೃಷಿ ಕ್ಷೇತ್ರದ ಶ್ರೇಷ್ಠತಾ ಕೇಂದ್ರಗಳು ಹಾಗೂ ಐ2ಯು2 ವೇದಿಕೆಯಡಿ (ಭಾರತ-ಇಸ್ರೇಲ್-ಯುಎಇ-ಅಮೆರಿಕಾ) ಸಹಕಾರ ಎರಡೂ ದೇಶಗಳ ಕಾರ್ಯತಂತ್ರದ ಪಾಲುದಾರಿಕೆಗೆ ಬಲ ನೀಡಿವೆ.
ಪ್ರಧಾನಿ ಮೋದಿಯವರ ಈ ಭೇಟಿ, ರಕ್ಷಣಾ, ತಂತ್ರಜ್ಞಾನ, ವ್ಯಾಪಾರ ಮತ್ತು ಪ್ರಾದೇಶಿಕ ಸಹಕಾರದ ವ್ಯಾಪಕ ಕಾರ್ಯಸೂಚಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa