
ಬೆಂಗಳೂರು, 24 ಅಕ್ಟೋಬರ್ (ಹಿ.ಸ.):
ವಿಭಿನ್ನ ಪೋಸ್ಟರ್‌ಗಳು ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ಕನ್ನಡದ ನಿರೀಕ್ಷಿತ ಚಿತ್ರ ‘ಶಂಕರಾಭರಣ’ದ ಪ್ರಚಾರಕ್ಕೆ ನಟ ಶೈನ್ ಶೆಟ್ಟಿ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಚಿತ್ರದ ಕಥೆಯಲ್ಲಿ ಬಸ್ ಚಾಲಕನಾಗಿ ಕಾಣಿಸಿಕೊಳ್ಳುವ ಶೈನ್ ಶೆಟ್ಟಿ, ಅದೇ ಬಸ್‌ನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.
ಸುಮಂತ್ ಭಟ್ ನಿರ್ದೇಶನದ ಈ ಚಿತ್ರ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಕಥೆ ಮತ್ತು ಪ್ರಚಾರ ಎರಡರಲ್ಲೂ ವಿಭಿನ್ನತೆ ಮೂಡಿಸುವ ಉದ್ದೇಶದಿಂದ ಶೈನ್ ಶೆಟ್ಟಿ ಬಸ್ ಮೂಲಕ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಕುಂದಾಪುರದಿಂದ ಆರಂಭವಾದ ಈ ಪ್ರಚಾರಯಾತ್ರೆ ಈಗಾಗಲೇ ಮಂಗಳೂರು, ಮೈಸೂರು, ಉಡುಪಿ ಹಾಗೂ ಶಿವಮೊಗ್ಗದ ಪ್ರೇಕ್ಷಕರನ್ನು ತಲುಪಿದೆ.
ಜಿಲ್ಲೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸ್ಥಳೀಯ ಪ್ರಸಿದ್ಧ ದೇವಾಲಯಗಳು, ಕಾಲೇಜುಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಿತ್ರತಂಡ ಪ್ರಚಾರ ನಡೆಸುತ್ತಿದೆ. ನಟ ಶೈನ್ ಶೆಟ್ಟಿ ಮತ್ತು ನಟಿ ತನ್ವಿ ರಾಮ್ ಈ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರಸಿದ್ಧ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಶೈನ್ ಶೆಟ್ಟಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಟ ರಾಜ್ ಬಿ. ಶೆಟ್ಟಿ ಅವರು ‘ಶಂಕರಾಭರಣ’ ಚಿತ್ರತಂಡವನ್ನು ಭೇಟಿಯಾಗಿ ಬೆಂಬಲ ಸೂಚಿಸಿದರು. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ತಪ್ಪದೇ ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದರು.
ಪ್ರಸ್ತುತ ಬೆಳಗಾವಿಯಲ್ಲಿರುವ ‘ಶಂಕರಾಭರಣ’ ಚಿತ್ರದ ಪ್ರಚಾರದ ಬಸ್ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳಿ ಪ್ರೇಕ್ಷಕರನ್ನು ಭೇಟಿಯಾಗಲಿದೆ.
ಚಿತ್ರದಲ್ಲಿ ತನ್ವಿ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ತನ್ವಿ ರಾಮ್ ಈ ಚಿತ್ರದ ಪ್ರಚಾರಯಾತ್ರೆಯಲ್ಲೂ ಶೈನ್ ಶೆಟ್ಟಿ ಅವರೊಂದಿಗೆ ಭಾಗವಹಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.