
ನವದೆಹಲಿ, 09 ನವೆಂಬರ್ (ಹಿ.ಸ.):
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವೆಂಬರ್ 11ರ ಬುಧವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ಸ್ವಚ್ಛ ಸಮೀಕ್ಷೆ 2025-26ರ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದೇಶದ ಅತ್ಯಂತ ಸ್ವಚ್ಛ ನಗರಗಳ ಜತೆಗೆ, ಸ್ವಚ್ಛ ನಗರ ಜೋಡಿ ಉಪಕ್ರಮದಡಿ ಉತ್ತಮ ಸಾಧನೆ ಮಾಡಿದ ನಗರಗಳಿಗೂ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಹಾಗೂ ರಾಜ್ಯ ಸಚಿವ ತೋಖನ್ ಸಾಹು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸ್ವಚ್ಛ ಸಮೀಕ್ಷೆಯ ಹತ್ತನೇ ಆವೃತ್ತಿಯನ್ನು 'ಸ್ವಚ್ಛತೆಯ ಹೊಸ ಉಪಕ್ರಮ–ಕೈಜೋಡಿಸೋಣ, ಒಟ್ಟಾಗಿ ಸ್ವಚ್ಛಗೊಳಿಸೋಣ' ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದೆ. 2016ರಲ್ಲಿ 73 ನಗರ ಸ್ಥಳೀಯ ಸಂಸ್ಥೆಗಳಿಂದ ಆರಂಭವಾದ ಈ ಸಮೀಕ್ಷೆ ಇದೀಗ 4,751ಕ್ಕೂ ಅಧಿಕ ನಗರಗಳಿಗೆ ವಿಸ್ತರಿಸಿದೆ.
**43 ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ**
ಈ ಬಾರಿ ನಗರ ಸ್ಥಳೀಯ ಸಂಸ್ಥೆಗಳನ್ನು 10 ಪ್ರಮುಖ ಕ್ಷೇತ್ರಗಳ 43 ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ತ್ಯಾಜ್ಯ ನಿರ್ವಹಣೆ, ಸಾರ್ವಜನಿಕವಾಗಿ ಕಾಣುವ ಸ್ವಚ್ಛತೆ, ನೈರ್ಮಲ್ಯ ಸೌಲಭ್ಯಗಳು, ಬಳಕೆಯಾದ ನೀರಿನ ನಿರ್ವಹಣೆ, ಸ್ವಚ್ಛತಾ ಕಾರ್ಮಿಕರ ಕಲ್ಯಾಣ ಹಾಗೂ ನಾಗರಿಕರ ಪ್ರತಿಕ್ರಿಯೆ ಪ್ರಮುಖ ಮಾನದಂಡಗಳಾಗಿವೆ.
ದೇಶಾದ್ಯಂತ 3,000ಕ್ಕೂ ಅಧಿಕ ತರಬೇತಿ ಪಡೆದ ಮೌಲ್ಯಮಾಪಕರು ಜಾಗತಿಕ ಸ್ಥಾನ ನಿರ್ಧಾರ ವ್ಯವಸ್ಥೆ ಆಧಾರಿತ ಮೇಲ್ವಿಚಾರಣೆಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
**ಸ್ವಚ್ಛ ನಗರ ಜೋಡಿ ಉಪಕ್ರಮಕ್ಕೂ ಗೌರವ**
ಈ ವರ್ಷ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 70 ಮಾರ್ಗದರ್ಶಕ ನಗರಗಳು ಹಾಗೂ 191 ಸಹಯೋಗಿ ನಗರಗಳ ಸಾಧನೆಗೂ ಗೌರವ ಸಲ್ಲಿಸಲಾಗುತ್ತದೆ.
ಈ ಉಪಕ್ರಮದ ಪರಿಣಾಮವಾಗಿ ಸಹಯೋಗಿ ನಗರಗಳಲ್ಲಿ ಸಾರ್ವಜನಿಕವಾಗಿ ಗೋಚರಿಸುವ ಸ್ವಚ್ಛತೆಯ ಪ್ರಮಾಣ ಶೇ.48ರಿಂದ ಶೇ.70ಕ್ಕೆ ಏರಿಕೆಯಾಗಿದೆ. ಮನೆಮನೆಗೆ ತ್ಯಾಜ್ಯ ಸಂಗ್ರಹ ಪ್ರಮಾಣ ಶೇ.52ರಿಂದ ಶೇ.74ಕ್ಕೆ ಹೆಚ್ಚಳವಾಗಿದೆ. ತ್ಯಾಜ್ಯವನ್ನು ಉತ್ಪತ್ತಿಯ ಸ್ಥಳದಲ್ಲಿಯೇ ವಿಂಗಡಿಸುವ ಪ್ರಮಾಣ ಶೇ.16ರಿಂದ ಶೇ.30ಕ್ಕೆ ಏರಿದೆ.
ಇದಲ್ಲದೆ, ನೈರ್ಮಲ್ಯ ಸೌಲಭ್ಯಗಳ ಲಭ್ಯತೆ ಶೇ.11ರಿಂದ ಶೇ.38ಕ್ಕೆ, ಬಳಕೆಯಾದ ನೀರಿನ ನಿರ್ವಹಣೆ ಶೇ.32ರಿಂದ ಶೇ.53ಕ್ಕೆ ಹಾಗೂ ಸ್ವಚ್ಛತೆಯ ಕುರಿತ ಜಾಗೃತಿ ಶೇ.48ರಿಂದ ಶೇ.66ಕ್ಕೆ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.