
ನವದೆಹಲಿ, 09 ನವೆಂಬರ್ (ಹಿ.ಸ.):
ದೀಪಾವಳಿಯನ್ನು ‘ಸಂತೋಷದ ಈದ್’ ಎಂದು ಬಣ್ಣಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಹೇಳಿಕೆ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಇದೇ ವೇಳೆ ಖರ್ಗೆ ಅವರು ಕ್ಷಮೆಯಾಚಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಸೋಮವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಖರ್ಗೆ ಅವರ ಹೇಳಿಕೆ ಕಾಂಗ್ರೆಸ್ನ ಹಿಂದೂ ಮತ್ತು ಸನಾತನ ವಿರೋಧಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದರು. ಕಾಂಗ್ರೆಸ್ನಲ್ಲಿ ಸೋನಿಯಾ ಗಾಂಧಿ ಅವರ ನಿಯಂತ್ರಣವಿದ್ದು, ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಖರ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ದೀಪಾವಳಿ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಜಗತ್ತಿನ ಅತ್ಯಂತ ಪ್ರಾಚೀನ ಧರ್ಮ ಮತ್ತು ಸಂಸ್ಕೃತಿಗಳಲ್ಲಿ ಒಂದಾದ ಹಿಂದೂ ಸಂಪ್ರದಾಯದ ಅವಿಭಾಜ್ಯ ಭಾಗವಾಗಿದೆ. ಭಗವಾನ್ ಶ್ರೀರಾಮ ಎಲ್ಲರ ಆರಾಧ್ಯ ದೈವ. ಇಂತಹ ಸಂದರ್ಭದಲ್ಲಿ ದೀಪಾವಳಿ ಎಂದು ಹೇಳಲು ಕಾಂಗ್ರೆಸ್ ಅಧ್ಯಕ್ಷರಿಗೆ ಏಕೆ ಹಿಂಜರಿಕೆ ಎಂದು ಭಾಟಿಯಾ ಪ್ರಶ್ನಿಸಿದರು.
ದೇಶದಾದ್ಯಂತ ಜನರು ದೀಪಾವಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾಗ ಖರ್ಗೆ ಅವರು ಇಡೀ ಜಗತ್ತಿಗೆ ‘ಸಂತೋಷದ ಈದ್’ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ರಾಜಕೀಯವು ಹಿಂದೂ ಹಬ್ಬಗಳ ಗುರುತನ್ನೇ ಬದಲಿಸುವ ಹಂತಕ್ಕೆ ತಲುಪಿದೆಯೇ ಎಂದು ಪ್ರಶ್ನಿಸಿದರು. ಈದ್ ಸಂದರ್ಭದಲ್ಲಿ ಅದನ್ನು ‘ಸಂತೋಷದ ದೀಪಾವಳಿ’ ಎಂದು ಕರೆಯುವ ಧೈರ್ಯವನ್ನು ರಾಹುಲ್ ಗಾಂಧಿ ಮತ್ತು ಖರ್ಗೆ ತೋರಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ನ ರಾಜಕೀಯವು ಮುಸ್ಲಿಂ ಸಮುದಾಯದ ತುಷ್ಟೀಕರಣ ಹಾಗೂ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತರುವುದರ ಸುತ್ತಲೇ ಇದೆ ಎಂದು ಭಾಟಿಯಾ ಆರೋಪಿಸಿದರು. ಸಂತೋಷ, ಸಂಭ್ರಮ ಮತ್ತು ಸೌಹಾರ್ದತೆಯ ಸಂಕೇತವಾದ ದೀಪಾವಳಿಯ ಸಂದರ್ಭದಲ್ಲಿಯೂ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ ಹಿಂದೂಗಳ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಟೀಕಿಸಿದರು.
ಖರ್ಗೆ ಕ್ಷಮೆಯಾಚಿಸಬೇಕು: ವಿಶ್ವ ಹಿಂದೂ ಪರಿಷತ್
ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್ ಕೂಡ ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷರಿಗೆ ಈಗ ಪ್ರತಿಯೊಂದು ಹಬ್ಬದಲ್ಲೂ ಈದ್ ಕಾಣಿಸುತ್ತಿದೆ. ಈ ಹೇಳಿಕೆ ದುರದೃಷ್ಟಕರ, ನಾಚಿಕೆಗೇಡಿನ ಮತ್ತು ಖಂಡನೀಯವಾಗಿದೆ. ಇದು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಅವರು ಟೀಕಿಸಿದರು.
ಹಿಂದೂ ಹಬ್ಬಗಳು ಕಾಂಗ್ರೆಸ್ಗೆ ಹೆಮ್ಮೆಯ ವಿಷಯವಾಗುವ ಬದಲು ಮುಜುಗರದ ಸಂಗತಿಯಾಗಿವೆಯೇ ಎಂದು ಪ್ರಶ್ನಿಸಿದ ಬನ್ಸಲ್, ಹಿಂದೂ ಸಂಪ್ರದಾಯಗಳನ್ನು ಲೇವಡಿ ಮಾಡುವುದು ಮತ್ತು ಭಾರತೀಯ ಸಂಸ್ಕೃತಿಯನ್ನು ಅವಮಾನಿಸುವುದರಲ್ಲಿ ಕಾಂಗ್ರೆಸ್ಗೆ ಯಾವ ರೀತಿಯ ಸಂತೋಷ ಸಿಗುತ್ತದೆ ಎಂದು ಆಕ್ಷೇಪಿಸಿದರು. ತುಷ್ಟೀಕರಣದ ರಾಜಕೀಯಕ್ಕಾಗಿ ದೇಶದ ಬಹುಸಂಖ್ಯಾತ ಹಿಂದೂ ಸಮಾಜದ ಭಾವನೆಗಳನ್ನು ಗೌರವಿಸುವುದನ್ನೂ ಕಾಂಗ್ರೆಸ್ ಮರೆತಿದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ತನ್ನ ಮಿತ್ರಪಕ್ಷಗಳಂತೆ ಹಿಂದೂ ಹಬ್ಬಗಳು ಮತ್ತು ಸನಾತನ ಸಂಸ್ಕೃತಿಯ ವಿರುದ್ಧ ನಿಂತಿದೆಯೇ ಎಂಬುದಕ್ಕೆ ಉತ್ತರಿಸಬೇಕು. ಇದು ಕೇವಲ ಒಂದು ಹೇಳಿಕೆಯ ವಿಚಾರವಲ್ಲ, ಕೋಟ್ಯಂತರ ಹಿಂದೂಗಳ ನಂಬಿಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಈ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಹಾಗೂ ಖರ್ಗೆ ಕ್ಷಮೆಯಾಚಿಸಬೇಕು ಎಂದು ವಿನೋದ್ ಬನ್ಸಲ್ ಆಗ್ರಹಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.