ಮಧ್ಯಪ್ರದೇಶದಲ್ಲಿ ದೀಪಾವಳಿ ರಾತ್ರಿ ಭೀಕರ ಅಗ್ನಿ ದುರಂತ: ಎರಡು ಕುಟುಂಬಗಳ 12 ಮಂದಿ ಸಜೀವ ದಹನ
ಕಟ್ನಿ/ಸಿಯೋನಿ, 09 ನವೆಂಬರ್ (ಹಿ.ಸ.): ಮಧ್ಯಪ್ರದೇಶದಲ್ಲಿ ದೀಪಾವಳಿ ಹಬ್ಬದ ರಾತ್ರಿ ಸಂಭವಿಸಿದ ಎರಡು ಭೀಕರ ಅಗ್ನಿ ಅವಘಡಗಳಲ್ಲಿ ಎರಡು ಕುಟುಂಬಗಳ 12 ಮಂದಿ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು, ಮೂವರು ಪುರುಷರು ಹಾಗೂ ಐವರು ಮಕ್ಕಳು ಸೇರಿದ್ದಾರೆ. ಕಟ್ನಿ ಜಿಲ್ಲೆಯ ಬರಹಿ ಪಟ್ಟಣದ
कटनी में दो माह के मासूम समेत एक ही परिवार के छह सदस्य जिंदा जले


सिवनी के छपारा में भी छह की गई जान


ಕಟ್ನಿ/ಸಿಯೋನಿ, 09 ನವೆಂಬರ್ (ಹಿ.ಸ.):

ಮಧ್ಯಪ್ರದೇಶದಲ್ಲಿ ದೀಪಾವಳಿ ಹಬ್ಬದ ರಾತ್ರಿ ಸಂಭವಿಸಿದ ಎರಡು ಭೀಕರ ಅಗ್ನಿ ಅವಘಡಗಳಲ್ಲಿ ಎರಡು ಕುಟುಂಬಗಳ 12 ಮಂದಿ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು, ಮೂವರು ಪುರುಷರು ಹಾಗೂ ಐವರು ಮಕ್ಕಳು ಸೇರಿದ್ದಾರೆ. ಕಟ್ನಿ ಜಿಲ್ಲೆಯ ಬರಹಿ ಪಟ್ಟಣದಲ್ಲಿ ಎರಡು ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದರೆ, ಸಿವ್ನಿ ಜಿಲ್ಲೆಯ ಛಪಾರಾದಲ್ಲಿ ಮತ್ತೊಂದು ಕುಟುಂಬದ ಆರು ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಎರಡೂ ಘಟನೆಗಳಲ್ಲಿ ಮನೆಗಳಲ್ಲಿದ್ದ ಒಟ್ಟು 20 ಮಂದಿಯ ಪೈಕಿ ಎಂಟು ಮಂದಿಯನ್ನು ಸುರಕ್ಷಿತವಾಗಿ ಹೊರತರಲಾಗಿದೆ. ದುರಂತಗಳಿಂದ ಎರಡೂ ಪ್ರದೇಶಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಕಟ್ನಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಸಿಲುಕಿ ಆರು ಮಂದಿ ಸಾವು

ಕಟ್ನಿ ಜಿಲ್ಲೆಯ ಬರಹಿ ಪಟ್ಟಣದಲ್ಲಿ ದೀಪಾವಳಿ ರಾತ್ರಿ ಸುಮಾರು 12 ಗಂಟೆಗೆ ಪೂರನ್ ಅಗರವಾಲ್ ಅವರ ಪಾತ್ರೆ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಗೆ ಹೊಂದಿಕೊಂಡಿದ್ದ ಮೂರು ಅಂತಸ್ತಿನ ಕಟ್ಟಡಕ್ಕೂ ಬೆಂಕಿ ವೇಗವಾಗಿ ವ್ಯಾಪಿಸಿದೆ. ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆಗಳಿಂದಾಗಿ ಮನೆಯಲ್ಲಿದ್ದವರಿಗೆ ಹೊರಬರಲು ಸಾಧ್ಯವಾಗಿಲ್ಲ.

ಈ ದುರಂತದಲ್ಲಿ 77 ವರ್ಷದ ಪೂರನ್ ಅಗರವಾಲ್, ಅವರ ಪತ್ನಿ ಚಂದ್ರಕಲಾ (74), ಸೊಸೆ ಪೂನಂ, 14 ವರ್ಷದ ಆರ್ಯಾ, ಆರು ವರ್ಷದ ಅನ್ವಿ ಹಾಗೂ ಎರಡು ತಿಂಗಳ ಹಸುಗೂಸು ಮೃತಪಟ್ಟಿದ್ದಾರೆ.

ಘಟನೆ ವೇಳೆ ರಿತೇಶ್ ಅಗರವಾಲ್ ಮತ್ತು ಅವರ ಅತ್ತಿಗೆ ಹೇಗೋ ಮನೆಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಅವರು ಕೂಗಿಕೊಂಡು ನೆರವು ಕೋರಿದರೂ, ಅಷ್ಟರಲ್ಲಾಗಲೇ ಕಟ್ಟಡದ ಬಹುಭಾಗಕ್ಕೆ ಬೆಂಕಿ ವ್ಯಾಪಿಸಿತ್ತು. ಕುಟುಂಬದ ಇತರ ಸದಸ್ಯರು ಒಳಗೇ ಸಿಲುಕಿಕೊಂಡಿದ್ದರು.

ಗೋಡೆ ಒಡೆದು ರಕ್ಷಣಾ ಕಾರ್ಯಾಚರಣೆ

ಬೆಂಕಿ ಕಾಣಿಸಿಕೊಂಡ ಬಳಿಕ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಬೆಳಗಿನ ಜಾವ ಸುಮಾರು 4.30ಕ್ಕೆ ಪೂರನ್ ಅಗರವಾಲ್ ಅವರನ್ನು ಹೊರತರಲಾಯಿತು. ಬಳಿಕ ಬೆಳಗ್ಗೆ 6.30ರ ಸುಮಾರಿಗೆ ಜೆಸಿಬಿ ಯಂತ್ರದ ಸಹಾಯದಿಂದ ಕಟ್ಟಡದ ಗೋಡೆಯನ್ನು ಒಡೆದು ಉಳಿದ ಐವರನ್ನು ಹೊರತರಲಾಯಿತು. ಅವರಲ್ಲಿ ಎರಡು ತಿಂಗಳ ಹಸುಗೂಸು ಕೂಡ ಸೇರಿತ್ತು. ಆದರೆ ಅಷ್ಟರಲ್ಲಾಗಲೇ ಎಲ್ಲರೂ ಮೃತಪಟ್ಟಿದ್ದರು.

ಅಗ್ನಿಶಾಮಕ ವಾಹನಗಳ ದೋಷಕ್ಕೆ ಆಕ್ರೋಶ

ಈ ದುರಂತದಲ್ಲಿ ಅಗ್ನಿಶಾಮಕ ವ್ಯವಸ್ಥೆಯ ವೈಫಲ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಸ್ಥಳೀಯ ಮಾಹಿತಿಯ ಪ್ರಕಾರ, ಬರಹಿ ಪುರಸಭೆಯ ಅಗ್ನಿಶಾಮಕ ವಾಹನ ಬೆಂಕಿ ಕಾಣಿಸಿಕೊಂಡ ಸುಮಾರು ಒಂದು ಗಂಟೆಯ ಬಳಿಕ, ಅಂದರೆ ರಾತ್ರಿ 1 ಗಂಟೆಗೆ ಸ್ಥಳಕ್ಕೆ ತಲುಪಿತ್ತು. ಆದರೆ ಅದರ ನೀರಿನ ಕೊಳವೆ ಹರಿದಿತ್ತು. ಸುಮಾರು ಒಂದೂವರೆ ಗಂಟೆಯ ಬಳಿಕ ವಿಜಯರಾಘವಗಢದಿಂದ ಮತ್ತೊಂದು ವಾಹನ ಬಂದಿದ್ದು, ಅದರ ಕೊಳವೆಯಲ್ಲೂ ದೋಷವಿತ್ತು ಎನ್ನಲಾಗಿದೆ.

ನಂತರ ಕಮೋರ್ ಮತ್ತು ಕಟ್ನಿಯಿಂದ ಅಗ್ನಿಶಾಮಕ ವಾಹನಗಳನ್ನು ಕರೆಸಲಾಯಿತು. ವಾಹನಗಳ ತಾಂತ್ರಿಕ ದೋಷಗಳಿಂದಾಗಿ ಬೆಂಕಿ ನಂದಿಸುವ ಕಾರ್ಯಕ್ಕೆ ತೊಂದರೆಯಾಯಿತು. ಜೆಸಿಬಿ ಮೂಲಕ ಗೋಡೆ ಒಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಸ್ಥಳೀಯ ಯುವಕರು ಕೂಡ ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು.

ಘಟನೆ ಬಳಿಕ ಅಗ್ನಿಶಾಮಕ ವ್ಯವಸ್ಥೆ ಹಾಗೂ ಆಡಳಿತದ ಸಿದ್ಧತೆಗಳ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೀಪಾವಳಿಯಂತಹ ಪ್ರಮುಖ ಹಬ್ಬದ ಸಂದರ್ಭದಲ್ಲಿ ಅಗ್ನಿಶಾಮಕ ವ್ಯವಸ್ಥೆಯನ್ನು ಸಮರ್ಪಕವಾಗಿ ಸಿದ್ಧಪಡಿಸಬೇಕಿತ್ತು. ಅಲ್ಲದೆ, ಬೆಳಗಿನ ಜಾವ 4 ಗಂಟೆಯವರೆಗೂ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿವ್ನಿ: ಆಭರಣ ವ್ಯಾಪಾರಿಯ ಮನೆಯಲ್ಲಿ ಬೆಂಕಿ, ಆರು ಮಂದಿ ಬಲಿ

ಮತ್ತೊಂದು ದುರಂತ ಸಿವ್ನಿ ಜಿಲ್ಲೆಯ ಛಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾವೀರ ವಾರ್ಡ್ ಸಂಖ್ಯೆ 7ರಲ್ಲಿ ಸಂಭವಿಸಿದೆ. ಜೈನ ಮಂದಿರದ ಸಮೀಪವಿರುವ ಆಭರಣ ವ್ಯಾಪಾರಿ ಕುಂದನ್ ಸೋನಿ ಅವರ ಮನೆಯಲ್ಲಿ ಸೋಮವಾರ ಬೆಳಗಿನ ಜಾವ ಸುಮಾರು 4ರಿಂದ 4.30ರ ನಡುವೆ ಬೆಂಕಿ ಕಾಣಿಸಿಕೊಂಡಿದೆ.

ಘಟನೆ ವೇಳೆ ಮನೆಯಲ್ಲಿ ಕುಟುಂಬದ ಒಟ್ಟು 10 ಮಂದಿ ಇದ್ದರು. ಬೆಂಕಿ ವೇಗವಾಗಿ ವ್ಯಾಪಿಸಿದ್ದರಿಂದ ಆರು ಮಂದಿ ಒಳಗೇ ಸಿಲುಕಿಕೊಂಡರು. ಉಳಿದ ನಾಲ್ವರನ್ನು ಸುರಕ್ಷಿತವಾಗಿ ಹೊರತರಲಾಯಿತು.

ಈ ಘಟನೆಯಲ್ಲಿ ಕುಂದನ್ ಲಾಲ್ ಸೋನಿ (75), ರಾಜಕುಮಾರಿ ಸೋನಿ (65), ಋತು ಸೋನಿ (42), ಸ್ಮೃತಿ ಸೋನಿ (40), ಸೂರ್ಯಾ ಸೋನಿ (45) ಮತ್ತು ಆದಿತ್ಯ ಸೋನಿ (16) ಮೃತಪಟ್ಟಿದ್ದಾರೆ.

ಅಮಾಯ್ರಾ ಸೋನಿ (7), ರಿತೇಶ್ ಸೋನಿ (45), ಸೌರಭ್ ಸೋನಿ (43) ಮತ್ತು ಆಕರ್ಷ್ ಸೋನಿ (14) ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಬೆಂಕಿಗೆ ಕಾರಣ ತಿಳಿದುಬಂದಿಲ್ಲ

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅವರು ತಲುಪುವಷ್ಟರಲ್ಲಿ ಬೆಂಕಿ ಮನೆಯಾದ್ಯಂತ ವ್ಯಾಪಿಸಿತ್ತು. ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಿ, ಒಳಗೆ ಸಿಲುಕಿದ್ದವರನ್ನು ಹೊರತರುವ ಪ್ರಯತ್ನ ನಡೆಸಿದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯುತ್ ಅವಘಡ ಸೇರಿದಂತೆ ವಿವಿಧ ಸಾಧ್ಯತೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಛಪಾರಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande