ಇಂದಿನಿಂದ 1,364 ಕ್ಯಾನ್ಸರ್ ಔಷಧಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ದರ ಜಾರಿ
ನವದೆಹಲಿ, 09 ನವೆಂಬರ್ (ಹಿ.ಸ.): ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 1,364 ಔಷಧಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ದರಗಳು ಇಂದಿನಿಂದ (ನ.9) ಜಾರಿಗೆ ಬಂದಿವೆ. ಔಷಧಗಳ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ವಾರ್ಷಿಕ ಅಂದಾಜು ₹3,540.38 ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಸಾಯನಿಕ ಮತ್ತ
ಕ್ಯಾನ್ಸರ್ ಔಷಧ ಬೆಲೆ ಇಳಿಕೆ


ನವದೆಹಲಿ, 09 ನವೆಂಬರ್ (ಹಿ.ಸ.):

ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 1,364 ಔಷಧಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ದರಗಳು ಇಂದಿನಿಂದ (ನ.9) ಜಾರಿಗೆ ಬಂದಿವೆ. ಔಷಧಗಳ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ವಾರ್ಷಿಕ ಅಂದಾಜು ₹3,540.38 ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆ ಅಧೀನದಲ್ಲಿರುವ ರಾಷ್ಟ್ರೀಯ ಔಷಧ ಬೆಲೆ ನಿಗಾ ಪ್ರಾಧಿಕಾರವು 137 ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ದರದ ಮೇಲೆ ವ್ಯಾಪಾರ ಲಾಭದ ಮಿತಿಯನ್ನು ನಿಗದಿಪಡಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯವು ಅಕ್ಟೋಬರ್ 17ರಂದು ರಚಿಸಿದ್ದ ತಜ್ಞರ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ನವೆಂಬರ್ 8ರವರೆಗಿನ ಮಾಹಿತಿಯ ಪ್ರಕಾರ, 85 ಔಷಧ ತಯಾರಿಕಾ ಕಂಪನಿಗಳು 121 ಔಷಧಗಳಿಗೆ ಸಂಬಂಧಿಸಿದ 1,364 ಔಷಧ ರೂಪಗಳ ಪರಿಷ್ಕೃತ ದರಗಳನ್ನು ಪ್ರಕಟಿಸಿವೆ. ಈ ಪೈಕಿ 679 ಔಷಧಗಳ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಶೇ.50ಕ್ಕಿಂತ ಹೆಚ್ಚಿನ ಇಳಿಕೆ ದಾಖಲಾಗಿದೆ. ಗರಿಷ್ಠ ಬೆಲೆ ಇಳಿಕೆ ಶೇ.96.45ರಷ್ಟಿದೆ.

ಔಷಧಗಳ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ವಾರ್ಷಿಕವಾಗಿ ₹3,540.38 ಕೋಟಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಗ್ರಾಹಕರು ಔಷಧದ ಪ್ಯಾಕ್ ಮೇಲೆ ನಮೂದಿಸಿರುವ ಪರಿಷ್ಕೃತ ಗರಿಷ್ಠ ಚಿಲ್ಲರೆ ದರವನ್ನು ಪರಿಶೀಲಿಸಬಹುದು. ಅಲ್ಲದೆ, 'ಫಾರ್ಮಾ ಸಹಿ ದಾಮ್' ಮೊಬೈಲ್ ತಂತ್ರಾಂಶ ಅಥವಾ ರಾಷ್ಟ್ರೀಯ ಔಷಧ ಬೆಲೆ ನಿಗಾ ಪ್ರಾಧಿಕಾರದ ಅಧಿಕೃತ ಜಾಲತಾಣದ ಮೂಲಕ ಔಷಧಗಳ ದರವನ್ನು ಖಚಿತಪಡಿಸಿಕೊಳ್ಳಬಹುದು.

ಪರಿಷ್ಕೃತ ಗರಿಷ್ಠ ಚಿಲ್ಲರೆ ದರಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ಔಷಧ ಅಂಗಡಿ ಅಥವಾ ಆಸ್ಪತ್ರೆಯ ಔಷಧಾಲಯಗಳು ವಸೂಲಿ ಮಾಡುವಂತಿಲ್ಲ. ಹೆಚ್ಚಿನ ದರ ವಸೂಲಿ ಅಥವಾ ಔಷಧ ಬೆಲೆಗೆ ಸಂಬಂಧಿಸಿದ ಇತರ ದೂರುಗಳಿದ್ದಲ್ಲಿ ಗ್ರಾಹಕರು 'ಫಾರ್ಮಾ ಜನ ಸಮಾಧಾನ್' ಜಾಲತಾಣದ ಮೂಲಕ ದೂರು ದಾಖಲಿಸಬಹುದು. ಇಲ್ಲವೇ 1800-111-255 ಉಚಿತ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ರಾಷ್ಟ್ರೀಯ ಔಷಧ ಬೆಲೆ ನಿಗಾ ಪ್ರಾಧಿಕಾರ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande