ರಾಜಕಾಲುವೆ ಸ್ವಚ್ಛತೆಗೆ ರೊಬೊಟಿಕ್ ಯಂತ್ರ ಬಳಸಲು ಜಿಬಿಎ ಸಿದ್ದತೆ
ಬೆಂಗಳೂರು, 06 ನವೆಂಬರ್ (ಹಿ.ಸ.): ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರವಾಹ ಹಾಗೂ ಜಲಾವೃತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಾಜಕಾಲುವೆಗಳ ಸ್ವಚ್ಛತೆಗೆ ಅತ್ಯಾಧುನಿಕ ರೊಬೊಟಿಕ್ ಯಂತ್ರದ ಬಳಕೆಗೆ ಮುಂದಾಗಿದೆ. ರ
robotic-machines-for-stormwater-drain-cleaning-gba-maheshwar-rao


ಬೆಂಗಳೂರು, 06 ನವೆಂಬರ್ (ಹಿ.ಸ.):

ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರವಾಹ ಹಾಗೂ ಜಲಾವೃತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಾಜಕಾಲುವೆಗಳ ಸ್ವಚ್ಛತೆಗೆ ಅತ್ಯಾಧುನಿಕ ರೊಬೊಟಿಕ್ ಯಂತ್ರದ ಬಳಕೆಗೆ ಮುಂದಾಗಿದೆ.

ರಾಜಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳು, ತ್ಯಾಜ್ಯ ಹಾಗೂ ಇತರ ಅಡೆತಡೆಗಳನ್ನು ತೆರವುಗೊಳಿಸಲು ಹೈಟೆಕ್ ತಂತ್ರಜ್ಞಾನ ಹೊಂದಿರುವ ರೊಬೊಟಿಕ್ ಯಂತ್ರವನ್ನು ಬಳಸಲು ಯೋಜಿಸಲಾಗಿದೆ.

ಈ ಯಂತ್ರದ ಮೂಲಕ ಸುಮಾರು 30 ಮೀಟರ್ ಒಳಭಾಗದವರೆಗೆ ತಲುಪಿ ಹೂಳು ತೆರವುಗೊಳಿಸಲು ಸಾಧ್ಯವಾಗಲಿದೆ. ಇದರಿಂದ ಕಾರ್ಮಿಕರು ರಾಜಕಾಲುವೆಗಳ ಅಪಾಯಕಾರಿ ಪ್ರದೇಶಗಳಿಗೆ ಇಳಿದು ಸ್ವಚ್ಛತಾ ಕಾರ್ಯ ನಡೆಸುವ ಅಗತ್ಯ ಕಡಿಮೆಯಾಗಲಿದೆ.

ಈ ಕುರಿತು ಮಾತನಾಡಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ರಾಜಕಾಲುವೆಗಳ ಸ್ವಚ್ಛತೆ ಮತ್ತು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರೊಬೊಟಿಕ್ ಯಂತ್ರದ ಪ್ರಯೋಗದ ಮೂಲಕ ಸ್ವಚ್ಛತಾ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ.

ವಿಶೇಷವಾಗಿ ಸಿಲ್ಕ್ ಬೋರ್ಡ್ ಸೇರಿದಂತೆ ಬೆಂಗಳೂರಿನ ಮಳೆಗಾಲದಲ್ಲಿ ಪದೇಪದೇ ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಜಿಬಿಎ ಮುಂದಾಗಿದೆ.

ರಾಜಕಾಲುವೆಗಳ ಸಾಮರ್ಥ್ಯ ಹೆಚ್ಚಿಸುವುದು, ಹೂಳು ತೆರವುಗೊಳಿಸುವುದು ಹಾಗೂ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ನಗರದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸುವ ಕಾರ್ಯವೂ ನಡೆಯುತ್ತಿದೆ. ರಾಜಕಾಲುವೆಗಳ ನಿರಂತರ ನಿರ್ವಹಣೆ, ತಂತ್ರಜ್ಞಾನದ ಬಳಕೆ ಮತ್ತು ವೈಜ್ಞಾನಿಕ ರೀತಿಯಲ್ಲಿ ನೀರು ಹರಿವಿನ ವ್ಯವಸ್ಥೆ ಸುಧಾರಿಸುವ ಮೂಲಕ ಮುಂದಿನ ಮಳೆಗಾಲದಲ್ಲಿ ಜಲಾವೃತ ಸಮಸ್ಯೆಯನ್ನು ತಗ್ಗಿಸಲು ಜಿಬಿಎ ಯೋಜನೆ ರೂಪಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande