
ಬೆಂಗಳೂರು, 06 ನವೆಂಬರ್ (ಹಿ.ಸ.):
ಮೆಖ್ರಿ ಸರ್ಕಲ್ನಿಂದ ಹೆಬ್ಬಾಳದವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಇಂದಿನಿಂದ ಸಂಚಾರ ನಿರ್ಬಂಧ ಹಾಗೂ ಮಾರ್ಗ ಬದಲಾವಣೆ ಜಾರಿಗೊಳಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಂಡಿರುವ ಈ ಕಾಮಗಾರಿಯು ಮುಂದಿನ 18 ತಿಂಗಳ ಕಾಲ ನಡೆಯಲಿದ್ದು, ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಬಳ್ಳಾರಿ ರಸ್ತೆಯ ಯುಎಎಸ್ ಸ್ಟಾಫ್ ಕ್ವಾರ್ಟರ್ಸ್ನಿಂದ ಮೆಖ್ರಿ ಸರ್ಕಲ್ವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾರ್ಯ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮೆಖ್ರಿ ಸರ್ಕಲ್ನಿಂದ ಹೆಬ್ಬಾಳದವರೆಗಿನ ಮುಖ್ಯ ರಸ್ತೆಯನ್ನು ಕಾಮಗಾರಿಗಾಗಿ ಮುಚ್ಚಲಾಗಿದ್ದು, ಸರ್ವಿಸ್ ರಸ್ತೆಯಲ್ಲಿ ಮಾತ್ರ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸದಾಶಿವನಗರ ಮತ್ತು ಸಂಜಯನಗರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಬಳ್ಳಾರಿ ರಸ್ತೆಯಲ್ಲಿ ಹಗುರ, ಮಧ್ಯಮ ಹಾಗೂ ಭಾರೀ ಸರಕು ಸಾಗಣೆ ವಾಹನಗಳು ಮತ್ತು ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಪರ್ಯಾಯ ಮಾರ್ಗ
ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲು ನಿಲ್ದಾಣ, ಟ್ಯಾನರಿ ರಸ್ತೆ ಹಾಗೂ ನಾಗವಾರ ರಸ್ತೆ ಮೂಲಕ ರಿಂಗ್ ರಸ್ತೆಯನ್ನು ತಲುಪಿ ವಿಮಾನ ನಿಲ್ದಾಣದ ಕಡೆಗೆ ಸಾಗಬೇಕು.
ಯಶವಂತಪುರ ಕಡೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಮತ್ತಿಕೆರೆ ರಸ್ತೆ ಮೂಲಕ ಸಂಚರಿಸಿ, ಬಿಇಎಲ್ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದು ಹೆಬ್ಬಾಳ ಅಥವಾ ನಾಗವಾರ ರಿಂಗ್ ರಸ್ತೆ ಮೂಲಕ ಮುಂದುವರಿಯಬೇಕು.
ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವವರಿಗೆ ಮಾರ್ಗ ಬದಲಾವಣೆ
ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಬರುವ ವಾಹನಗಳು ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ ನಾಗವಾರ ಜಂಕ್ಷನ್ನಲ್ಲಿ ಬಲಕ್ಕೆ ತಿರುವು ಪಡೆದು ಬಂಬೂಬಜಾರ್ ಹಾಗೂ ಕ್ವೀನ್ಸ್ ರಸ್ತೆ ಮೂಲಕ ನಗರ ಪ್ರವೇಶಿಸಬಹುದು.
ಇನ್ನೊಂದು ಪರ್ಯಾಯವಾಗಿ ಹೆಬ್ಬಾಳದಲ್ಲಿ ಬಲಕ್ಕೆ ತಿರುಗಿ ಹೆಬ್ಬಾಳ ರಿಂಗ್ ರಸ್ತೆ, ಕುವೆಂಪು ಸರ್ಕಲ್, ಗೊರಗುಂಟೆಪಾಳ್ಯ ಜಂಕ್ಷನ್ ಹಾಗೂ ಡಾ. ರಾಜ್ಕುಮಾರ್ ರಸ್ತೆ ಮೂಲಕ ನಗರದ ಕೇಂದ್ರ ಭಾಗವನ್ನು ತಲುಪಬಹುದು.
ಯಶವಂತಪುರದಿಂದ ನಗರ ಕೇಂದ್ರಕ್ಕೆ ಬರುವ ವಾಹನಗಳು ಬಿಎಚ್ಇಎಲ್ ಜಂಕ್ಷನ್ನಿಂದ ಮಾರಮ್ಮ ಸರ್ಕಲ್ ಬಳಿ ಬಲಕ್ಕೆ ತಿರುವು ಪಡೆದು ಮಾರ್ಗೋಸಾ ರಸ್ತೆಯ ಮೂಲಕ ಸಂಚರಿಸಬೇಕು.
ಸ್ಥಳೀಯ ವಾಹನಗಳಿಗೂ ಮಾರ್ಗ ಬದಲಾವಣೆ
ಹೆಬ್ಬಾಳದಿಂದ ನಗರದ ಕಡೆಗೆ ಬರುವ ಸಾಮಾನ್ಯ ವಾಹನಗಳು ಹೆಬ್ಬಾಳ ಫ್ಲೈಓವರ್ ಇಳಿದ ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆಗೆ ತೆರಳಿ, ಸಿಬಿಐ ಜಂಕ್ಷನ್ ಮೂಲಕ ಮತ್ತೆ ಬಳ್ಳಾರಿ ಮುಖ್ಯ ರಸ್ತೆಯನ್ನು ಸಂಪರ್ಕಿಸಬಹುದು.
ಅದೇ ರೀತಿ ಹೆಬ್ಬಾಳದಿಂದ ಆನಂದನಗರ, ಆರ್.ಟಿ. ನಗರ ಹಾಗೂ ಜಯಮಹಲ್ ಕಡೆಗೆ ತೆರಳುವ ವಾಹನಗಳು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ, ಆನಂದನಗರ ಕ್ರಾಸ್ ಹಾಗೂ ಸಿಬಿಐ ಜಂಕ್ಷನ್ ಮೂಲಕ ಆನಂದನಗರ ಮುಖ್ಯ ರಸ್ತೆಯನ್ನು ತಲುಪಬೇಕು.
1–2 ಗಂಟೆ ಮುಂಚಿತವಾಗಿ ಪ್ರಯಾಣ ಆರಂಭಿಸಲು ಸೂಚನೆ
ಮುಂದಿನ 18 ತಿಂಗಳ ಕಾಲ ನಡೆಯಲಿರುವ ಕಾಮಗಾರಿಯಿಂದ ಬಳ್ಳಾರಿ ರಸ್ತೆ ಹಾಗೂ ವಿಮಾನ ನಿಲ್ದಾಣ ಸಂಪರ್ಕ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ವಿಶೇಷವಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯಕ್ಕಿಂತ ಕನಿಷ್ಠ ಒಂದರಿಂದ ಎರಡು ಗಂಟೆಗಳ ಮುಂಚಿತವಾಗಿ ಮನೆಯಿಂದ ಹೊರಡುವುದು ಸೂಕ್ತ ಎಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಸಾರ್ವಜನಿಕರು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಿ, ಪ್ರಕಟಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸಂಚಾರ ವ್ಯವಸ್ಥೆಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R