ಪೆಟ್ರೋಲ್ನಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆ: ವಾಹನ ಸವಾರರಿಗೆ ಆತಂಕ
ಕರ್ನಾಟಕದಲ್ಲಿ ಪೆಟ್ರೋಲ್ ಮಾದರಿಗಳ ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆಯಾಗಿರುವುದಾಗಿ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಅತಿಯಾದ ಎಥೆನಾಲ್ ಮಿಶ್ರಣದ ವಿರುದ್ಧ ಕ್ರಮ, ವಾಹನ ಸವಾರರಿಗೆ ಪರಿಹಾರ ನಿಧಿ ಹಾಗೂ ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ ಪ್ರಮಾಣ ಪ್ರದರ್ಶನಕ್ಕೆ ಕೇಂದ್ರ
Karnataka-Petrol-Samples-Show-31-2-Percent-Ethanol-Rizwan-Arshad


ಬೆಂಗಳೂರು, 06 ನವೆಂಬರ್ (ಹಿ.ಸ.):

ಕರ್ನಾಟಕದಲ್ಲಿ ವಿವಿಧ ಪೆಟ್ರೋಲ್ ಕಂಪನಿಗಳಿಂದ ಸಂಗ್ರಹಿಸಿದ ಮಾದರಿಗಳ ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಪತ್ತೆಯಾಗಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಮಾದರಿಯಲ್ಲಿ ಶೇ.31.2 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿಸಿಎಲ್) ಮಾದರಿಯಲ್ಲಿ ಶೇ.30.5ರಷ್ಟು ಎಥೆನಾಲ್ ಇರುವುದು ಕಂಡುಬಂದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.

ಎಥೆನಾಲ್ ಅತಿಯಾದ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುವ ಸಾಧ್ಯತೆಯಿದ್ದು, ವಾಹನಗಳ ದುರಸ್ತಿ ವೆಚ್ಚವೂ ಹೆಚ್ಚಾಗಬಹುದು ಎಂದು ಹೇಳಿದರು.

ಸಾಮಾನ್ಯವಾಗಿ ವಾಹನ ತಯಾರಕರು ನಿಗದಿಪಡಿಸಿರುವ ಇಂಧನ ಬಳಕೆಯ ಮಾನದಂಡಗಳ ಮೇಲೆ ಎಥೆನಾಲ್ ಪ್ರಮಾಣದ ಪರಿಣಾಮ ಉಂಟಾಗಬಹುದು.

ಇಂತಹ ಸಂದರ್ಭದಲ್ಲಿ ವಾಹನಗಳ ವಾರಂಟಿ ಹಾಗೂ ವಿಮಾ ಪಾಲಿಸಿಗಳು ಎಥೆನಾಲ್ ಮಿಶ್ರಣದಿಂದ ಉಂಟಾಗುವ ಹಾನಿಗೆ ಪರಿಹಾರ ನೀಡುತ್ತವೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

ರಾಷ್ಟ್ರಮಟ್ಟದಲ್ಲಿ ವಾಹನ ಸವಾರರಿಗೆ ವರ್ಷಕ್ಕೆ ಸುಮಾರು 1.01 ಲಕ್ಷ ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ಅಂದಾಜಿದೆ. ಇದರಲ್ಲಿ 62 ಸಾವಿರ ಕೋಟಿ ರೂ. ಹೆಚ್ಚುವರಿ ಇಂಧನ ವೆಚ್ಚ ಹಾಗೂ 39 ಸಾವಿರ ಕೋಟಿ ರೂ. ವಾಹನಗಳ ದುರಸ್ತಿ ವೆಚ್ಚ ಸೇರಿದೆ ಎಂದು ಸಚಿವರು ತಿಳಿಸಿದರು.

ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಬೇಕು.

ಪ್ರತಿಯೊಂದು ಪೆಟ್ರೋಲ್ ಮಾದರಿಯಲ್ಲಿರುವ ನೈಜ ಎಥೆನಾಲ್ ಪ್ರಮಾಣವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.

ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವ ಕಂಪನಿಗಳ ವಿರುದ್ಧ ದಂಡ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂಬಂಧ ರಾಜ್ಯದಲ್ಲಿ ನಡೆಸಿದ ಪರೀಕ್ಷಾ ವರದಿಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಸಲ್ಲಿಸಲಾಗುವುದು. 'ಮಿಷನ್ ನಿಖರ' ಯೋಜನೆಯಡಿ ರಾಜ್ಯದ ವಿವಿಧೆಡೆ ಪೆಟ್ರೋಲ್ ಮಾದರಿಗಳ ಪರೀಕ್ಷೆಯನ್ನು ಮುಂದುವರಿಸಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.

ವಾಹನ ಸವಾರರ ಹಿತಾಸಕ್ತಿ ಕಾಪಾಡಲು ಆಗ್ರಹಎಥೆನಾಲ್ ಮಿಶ್ರಣದ ನಿಖರ ಪ್ರಮಾಣವನ್ನು ಮರೆಮಾಚದೆ ಗ್ರಾಹಕರಿಗೆ ತಿಳಿಸುವುದು ತೈಲ ಕಂಪನಿಗಳ ಜವಾಬ್ದಾರಿಯಾಗಿದೆ.

ವಾಹನ ಸವಾರರಿಗೆ E10, E20 ಸೇರಿದಂತೆ ಲಭ್ಯವಿರುವ ಇಂಧನ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿ, ಸೂಕ್ತ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಬೇಕು ಎಂದು ಸಚಿವರು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಈ ಪರೀಕ್ಷಾ ವರದಿಗಳು ಪೆಟ್ರೋಲ್ ಗುಣಮಟ್ಟ ಹಾಗೂ ವಾಹನಗಳ ಸುರಕ್ಷತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande