ಮತಗಳ್ಳತನದ ಆರೋಪಕ್ಕೆ ಉತ್ತರಿಸಲಾಗದೆ ಮೋದಿ, ಶಾ ವಿಶೇಷ ಅಧಿವೇಶನಕ್ಕೆ ಮುಂದಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, 04 ನವೆಂಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ‘ದಿಮಾಗಿ ನಕ್ಸಲ್’ ಎಂಬ ವಿಫಲ ಹೇಳಿಕೆಯನ್ನು ಪುನರಾವರ್ತಿಸುತ್ತಿದ್ದಾರೆ. ಆದರೆ, ಮತಗಳ್ಳತನದ ಆರೋಪ ಹಾಗೂ ವಿದೇಶಿ ಶಕ್ತಿಗಳಿಗೆ ಭಾರತದ ಹಿತಾಸಕ್ತಿಗಳನ್ನು ಅಡಮಾನ ಇಟ್ಟಿರುವ ಕುರಿತು ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ನೀಡಿರುವ
ಮಲ್ಲಿಕಾರ್ಜುನ ಖರ್ಗೆ ಫೈಲ್ ಪೋಟೋ


ನವದೆಹಲಿ, 04 ನವೆಂಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ‘ದಿಮಾಗಿ ನಕ್ಸಲ್’ ಎಂಬ ವಿಫಲ ಹೇಳಿಕೆಯನ್ನು ಪುನರಾವರ್ತಿಸುತ್ತಿದ್ದಾರೆ. ಆದರೆ, ಮತಗಳ್ಳತನದ ಆರೋಪ ಹಾಗೂ ವಿದೇಶಿ ಶಕ್ತಿಗಳಿಗೆ ಭಾರತದ ಹಿತಾಸಕ್ತಿಗಳನ್ನು ಅಡಮಾನ ಇಟ್ಟಿರುವ ಕುರಿತು ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ನೀಡಿರುವ ಬಹಿರಂಗ ಸವಾಲಿಗೆ ಉತ್ತರಿಸುವ ಧೈರ್ಯ ಅವರಿಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಮೂರು ಕೋಟಿ ಒಳನುಸುಳುಕೋರರಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಹಲವು ವರ್ಷಗಳಿಂದ ಗೃಹ ಸಚಿವರಾಗಿರುವ ಅವರು ಅಕ್ರಮವಾಗಿ ಜನರು ದೇಶದೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದು ಏಕೆ? ತಮ್ಮ ಅಸಮರ್ಥತೆಗೆ ಹೊಣೆ ಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಐದು ಬಾರಿ ತನ್ನ ನಿಲುವು ಬದಲಿಸಿದೆ. ಇದರಲ್ಲಿ ನಮೂನೆ-6ರ ಸಂಪೂರ್ಣ ಬದಲಾವಣೆಯೂ ಸೇರಿದೆ. ಈ ಬದಲಾವಣೆಯನ್ನು ಸಹ ಚುನಾವಣಾ ಆಯುಕ್ತರೇ ಅಕ್ರಮ ಎಂದು ಕರೆದಿದ್ದರು. ಹಾಗಾದರೆ, ಈ ಬದಲಾವಣೆಗೆ ಕಾರಣವೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಸಂಸತ್ತಿನ ಹಿಂದಿನ ಅಧಿವೇಶನ ಮುಕ್ತಾಯಗೊಂಡು 83 ದಿನಗಳು ಕಳೆದಿದ್ದರೂ ಅದನ್ನು ಇನ್ನೂ ಅಧಿಕೃತವಾಗಿ ಅಂತ್ಯಗೊಳಿಸಿಲ್ಲ. ಇದೀಗ ಮುಂದಿನ ಅಧಿವೇಶನ ಆರಂಭವಾಗುವ ಸಂದರ್ಭದಲ್ಲೇ ವಿಶೇಷ ಅಧಿವೇಶನ ಕರೆಯುವ ಉದ್ದೇಶ ಹೊಂದಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಸಾರ್ವಜನಿಕ ದೋಷಾರೋಪಣೆ ಪ್ರಕ್ರಿಯೆ ಹಾಗೂ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ‘ಮತ ಉಳಿಸಿ’ ಸಮಾವೇಶವು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಆತಂಕಕ್ಕೀಡು ಮಾಡಿದೆ ಎಂದು ಖರ್ಗೆ ಹೇಳಿದ್ದಾರೆ.

ಪ್ರಧಾನಿ ಮೋದಿ ಸಂಸತ್ತಿಗೆ ಬರುತ್ತಿಲ್ಲ. ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ. ಈಗಲಾದರೂ ಚರ್ಚೆಗೆ ಮುಂದೆ ಬಂದು ಪ್ರಶ್ನೆಗಳನ್ನು ಎದುರಿಸಬೇಕು. ಮತಗಳ್ಳತನದಲ್ಲಿ ತೊಡಗಿದ್ದೇಕೆ ಎಂಬುದನ್ನು ದೇಶದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande