
ನವದೆಹಲಿ, 03 ನವೆಂಬರ್ (ಹಿ.ಸ.):
ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್ಎ) ಅಧ್ಯಕ್ಷ ಸ್ಥಾನಕ್ಕೆ ಭಾರತ ಸತತ ಮೂರನೇ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾಗಿದೆ. ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಒಕ್ಕೂಟದ 139ನೇ ಶೃಂಗಸಭೆಯಲ್ಲಿ 130ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಭಾರತದ ಪುನರಾಯ್ಕೆಗೆ ಒಮ್ಮತ ವ್ಯಕ್ತಪಡಿಸಿವೆ.
ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅತಿದೊಡ್ಡ ಸಮಾವೇಶದಲ್ಲಿ ಭಾರತದ ಪುನರಾಯ್ಕೆಯನ್ನು ಸದಸ್ಯ ರಾಷ್ಟ್ರಗಳು ಕರತಾಡನದ ಮೂಲಕ ಸ್ವಾಗತಿಸಿದವು. ಸೌರಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿ ಹಾಗೂ ಜಾಗತಿಕ ಮಟ್ಟದಲ್ಲಿ ಇಂಧನ ಸಹಕಾರಕ್ಕೆ ನೀಡುತ್ತಿರುವ ಕೊಡುಗೆಯನ್ನು ಸದಸ್ಯ ರಾಷ್ಟ್ರಗಳು ಗುರುತಿಸಿವೆ.
ಸೌರಶಕ್ತಿ, ಪವನಶಕ್ತಿ ಮತ್ತು ಹಸಿರು ಜಲಜನಕ ಕ್ಷೇತ್ರಗಳಲ್ಲಿ ಭಾರತ ಕೈಗೊಂಡಿರುವ ಕ್ರಮಗಳು, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸುವ ಗುರಿ ಹಾಗೂ ಇಂಧನ ಪೂರೈಕೆಯ ಬದ್ಧತೆ ಭಾರತದ ಪುನರಾಯ್ಕೆಗೆ ಪ್ರಮುಖ ಕಾರಣಗಳಾಗಿವೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸುವ ಗುರಿ, ಒಂದು ಕೋಟಿ ಮನೆಗಳಿಗೆ ಸೌರ ಮೇಲ್ಛಾವಣಿ ಅಳವಡಿಸಿ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಹಾಗೂ ಕೃಷಿ ಪಂಪ್ಸೆಟ್ಗಳಿಗೆ ಸೌರಶಕ್ತಿ ಒದಗಿಸುವ ಪ್ರಧಾನಮಂತ್ರಿ ಕುಸುಮ್ ಯೋಜನೆಗಳು ಗಮನ ಸೆಳೆದಿವೆ.
ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಮತ್ತು ಇಂಧನ ಕ್ಷೇತ್ರದ ಸಾಮರ್ಥ್ಯದ ಬಗ್ಗೆ ಸದಸ್ಯ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯತತ್ಪರತೆಯನ್ನು ಪ್ರಶಂಸಿಸಿವೆ.
ಸಚಿವ ಪ್ರಲ್ಹಾದ ಜೋಶಿ ಧನ್ಯವಾದ
ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಸತತ ಮೂರನೇ ಬಾರಿಗೆ ಭಾರತವನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ಸಲ್ಲಿಸಿದ್ದಾರೆ.
ಭಾರತವನ್ನು ಪುನರಾಯ್ಕೆ ಮಾಡಿರುವುದು ಜಾಗತಿಕ ಸಮುದಾಯಕ್ಕೆ ದೇಶದ ಮೇಲಿರುವ ವಿಶ್ವಾಸದ ಪ್ರತೀಕವಾಗಿದೆ. ಸೌರಶಕ್ತಿ ಕ್ರಾಂತಿ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಪ್ರಯತ್ನಗಳ ಮೇಲೆ ವಿದೇಶಗಳು ನಂಬಿಕೆ ಇಟ್ಟಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಸತತ ಮೂರನೇ ಬಾರಿ ಅಧ್ಯಕ್ಷ ಸ್ಥಾನ ದೊರೆತಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಇದರೊಂದಿಗೆ ಭಾರತದ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾಗತಿಕ ಸೌರ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲಾಗುವುದು. ವಿಶೇಷವಾಗಿ ಜಾಗತಿಕ ದಕ್ಷಿಣದ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಸೌರಶಕ್ತಿಯ ಪ್ರಯೋಜನ ತಲುಪಿಸುವ ನಿಟ್ಟಿನಲ್ಲಿ ಭಾರತ ತನ್ನ ಪ್ರಯತ್ನ ಮುಂದುವರಿಸಲಿದೆ ಎಂದು ಪ್ರಲ್ಹಾದ ಜೋಶಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.