
ಕೋಲಾರ, 03 ನವೆಂಬರ್ (ಹಿ.ಸ.)
ಮಕ್ಕಳ ರಕ್ಷಣೆ, ಪೋಷಣೆ ಹಾಗೂ ಕಾನೂನುಬದ್ಧ ದತ್ತು ಪ್ರಕ್ರಿಯೆಯು ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ತಳಮಟ್ಟದ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಕೋಲಾರದಲ್ಲಿ ನಡೆದ ‘ದತ್ತು ಮಾರ್ಗಸೂಚಿ–೨೦೨೨, ಪೋಷಕತ್ವ ಯೋಜನೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಇತರೆ ಕಾಯ್ದೆಗಳ ಕುರಿತು ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.
ಜುವೆನೈಲ್ ಜಸ್ಟೀಸ್ ಕಾಯ್ದೆಯಡಿ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ನೀಡುವ ಕುರಿತು ಸ್ಪಷ್ಟ ನಿಯಮಾವಳಿಗಳಿದ್ದು, ಜಿಲ್ಲಾಧಿಕಾರಿಗಳಿಗೆ ದತ್ತು ಆದೇಶ ನೀಡುವ ಅಧಿಕಾರವಿರುತ್ತದೆ. ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆದು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಕಾನೂನಿನಲ್ಲಿ ಕಟ್ಟುನಿಟ್ಟಿನ ಕ್ರಮಗಳಿವೆ. ದತ್ತು ಪಡೆದ ಮಕ್ಕಳ ಸ್ಥಿತಿಗತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ವರದಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಬುದ್ಧಿಮಾಂದ್ಯ, ವಿಶೇಷ ಚೇತನ ಹಾಗೂ ಸಮಾಜದ ವಿವಿಧ ಕಾರಣಗಳಿಂದಾಗಿ ಪೋಷಕರಿಂದ ತ್ಯಜಿಸಲ್ಪಟ್ಟ ಮಕ್ಕಳನ್ನು ರಕ್ಷಿಸಿ, ನೋಂದಾಯಿತ ದತ್ತು ಕೇಂದ್ರಗಳಿಗೆ ತಲುಪಿಸುವುದು ಅತ್ಯಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಬಿ.ಎಲ್.ಒ ಗಳು ಮತ್ತು ಗ್ರಾಮ ಮಟ್ಟದ ಬೀಟ್ ಪೊಲೀಸರು ಇಂತಹ ಮಕ್ಕಳನ್ನು ಗುರುತಿಸಿ ಇಲಾಖೆಗೆ ಮಾಹಿತಿ ನೀಡುವ ಮೂಲಕ ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಂ. ನಾರಾಯಣಸ್ವಾಮಿ ಮಾತನಾಡಿ, ಪಂಡಿತ್ ಜವಾಹರಲಾಲ್ ನೆಹರು ಅವರು ಹೇಳಿದಂತೆ ‘ಮಕ್ಕಳು ಮಾನವ ಲೋಕದ ಪುಷ್ಪಗಳು’. ಅಂತಹ ಮಕ್ಕಳ ಪಾಲನೆ, ರಕ್ಷಣೆ ಮತ್ತು ಉತ್ತಮ ಭವಿಷ್ಯ ರೂಪಿಸುವುದು ಸಮಾಜದ ಕರ್ತವ್ಯವಾಗಿದೆ. ಸರ್ಕಾರದ ಪೋಷಕತ್ವ ಯೋಜನೆ ಮತ್ತು ೨೦೨೨ರ ನೂತನ ದತ್ತು ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆ, ರಕ್ಷಣಾ ಘಟಕಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಮನ್ವಯತೆ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಇಸಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೋಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ವಾರ್ಗಿಸ್ ಪಳ್ಳಿಪುರಂ, ಪೊಲೀಸ್ ಅಧಿಕಾರಿ ವೇದಾವತಿ, ಬೋಸ್ಕೋ ರಾಜ್ಯ ಸಂಯೋಜನಾಧಿಕಾರಿ ಶಿವಮಲ್ಲು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ದೀಪಾಶ್ರೀ, ಅಶ್ವಿನಿ, ಬಾಲ ನ್ಯಾಯ ಮಂಡಳಿ ಸದಸ್ಯ ಚೌಡಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಸಾಂಸ್ಥಿಕ ರಕ್ಷಣಾಧಿಕಾರಿ ಎನ್. ಶ್ರೀನಾಥ್, ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಬಾಲಮಂದಿರದ ಪ್ರತಿನಿಧಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್