
ಕೋಲಾರ, 03 ನವೆಂಬರ್ (ಹಿ.ಸ.)
ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೀಡಿರುವ ಹೇಳಿಕೆಯು ಮೈತ್ರಿಧರ್ಮಕ್ಕೆ ಅಪಚಾರ ಮಾಡಿದಂತಿದೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಹಾಲಕ್ಷ್ಮಿ ಬಡಾವಣೆ ಶಾಸಕ ಗೋಪಾಲಯ್ಯರಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದ ವೇದಿಕೆಯಲ್ಲೇ ವರ್ತೂರು ಪ್ರಕಾಶ್ ಜೆಡಿಎಸ್ ಪಕ್ಷದ ಕುರಿತಾಗಿ ಆಡಿರುವ ಮಾತುಗಳಿಂದ ಕಾರ್ಯಕರ್ತರು, ಮುಖಂಡರಿಗೆ ತೀವ್ರ ಮುಜುಗರ ಉಂಟಾಗಿದೆ ಎಂದು ತಿಳಿಸಿದರು.
ಒಂದು ವೇಳೆ ಮೈತ್ರಿ ಹೊರತಾಗಿ ಚುನಾವಣೆ ನಡೆಸಬೇಕೆನ್ನುವುದು ತಮ್ಮ ಅನಿಸಿಕೆ ಆಗಿದ್ದರೆ ನಿಮ್ಮ ಪಕ್ಷದ ವರಿಷ್ಠರಿಗೆ ತಿಳಿಸಿ ಬಹಿರಂಗ ಹೇಳಿಕೆ ಕೊಡಿಸಿ ಆ ಬಳಿಕ ನಿಮ್ಮ ತೀರ್ಮಾನ ತೆಗೆದುಕೊಳ್ಳಿ. ಇದಕ್ಕೆ ನಮ್ಮದೇನು ಅಭ್ಯಂತರ ಇರುವುದಿಲ್ಲ. ಅದನ್ನು ಬಿಟ್ಟು ಒಂದು ಕಡೆ ಮೈತ್ರಿ ಎಂದು ಹೇಳಿ ಮತ್ತೊಂದು ಕಡೆ ಜೆಡಿಎಸ್ ಪಕ್ಷದ ಬಗ್ಗೆ ಕಾರ್ಯಕರ್ತರು, ಮುಖಂಡರ ಮನಸ್ಸಿಗೆ ಘಾಸಿ ಆಗುವಂತೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದೆ. ಮಾಜಿ ಶಾಸಕ ಕೆ.ಶ್ರೀನಿವಾಸಗೌಡರು ಪಕ್ಷ ತೊರೆದ ನಂತರ ನಾನೂ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಗ್ರಾಪಂ ಮಟ್ಟದಿಂದ ಲೋಕಸಭೆ ಚುನಾವಣೆವರೆಗೂ ಪಕ್ಷ ಸದೃಢಗೊಳಿಸಿದ್ದೇವೆ.ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಜತೆಗೆ ಅನೇಕ ಗ್ರಾಪಂಗಳನ್ನು ಇಂದಿಗೂ ಪಕ್ಷದ ಭದ್ರಕೋಟೆಯಾಗಿ ಇರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ ೨೦೨೩ರ ವಿಧಾನಸಭೆ ಚುನಾವಣೆ ನಂತರ ಜೆಡಿಎಸ್, ಬಿಜೆಪಿ ವರಿಷ್ಠರ ತೀರ್ಮಾನದಂತೆ ಮೈತ್ರಿಕೂಟದಲ್ಲಿ ನಡೆದ ಎಲ್ಲ ಚುನಾವಣೆಗಳನ್ನು ಸರಿಸಮನಾಗಿ ಟಿಕೆಟ್ ಹಂಚಿಕೆ ಮಾಡಿಕೊಂಡು ಅನೇಕ ಚುನಾವಣೆಗಳಲ್ಲಿ ಗೆದ್ದಿರುತ್ತೇವೆ. ಇತ್ತೀಚೆಗೆ ನಡೆದ ಆಗ್ನೇಯ ಪದವೀಧರರ ಚುನಾವಣೆಯಲ್ಲಿಯೂ ಹೆಚ್ಚಿನ ಶ್ರಮವಹಿಸಿ ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರಾಮಾಣಿಕ ಪ್ರಯತ್ನದಿಂದ ಯಶಸ್ವಿಯಾಗಿದ್ದು, ಮೈತ್ರಿಗೂ ಬದ್ಧರಾಗಿದ್ದೇವೆ. ಹೀಗಾಗಿ ಜೆಡಿಎಸ್ ಪಕ್ಷವು ಕೋಲಾರ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಬಲಿಷ್ಠ ಪಕ್ಷವಾಗಿದೆ.
ಹೀಗಾಗಿ ವರ್ತೂರು ಪ್ರಕಾಶ್ ಹೇಳಿಕೆ ಸಂಬಂಧ ಕೂಡಲೇ ಬಿಜೆಪಿ ಜಿಲ್ಲಾಧ್ಯಕ್ಷರು, ರಾಜ್ಯ ನಾಯಕರು, ವರಿಷ್ಠರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಸಿಎಂಆರ್ ಶ್ರೀನಾಥ್ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್