
ಕೋಲಾರ, 03 ನವೆಂಬರ್ (ಹಿ.ಸ.)
ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ನೀಡಲಾಗುವ ಪ್ರೋತ್ಸಾಹಧನ ಹೆಚ್ಚಳ, ವೇತನ ಪರಿಷ್ಕರಣೆ, ಸಂಘಗಳ ನಿರ್ವಹಣಾ ವೆಚ್ಚ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್ ಮಾತನಾಡಿ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ಪ್ರತಿ ಲೀಟರ್ ಹಾಲಿನ ಮೇಲೆ ೧೦ ಪೈಸೆ ಹೆಚ್ಚುವರಿ ಪ್ರೋತ್ಸಾಹಧನ ನೀಡುವುದಾಗಿ ಈ ಹಿಂದೆ ಭರವಸೆ ನೀಡಲಾಗಿತ್ತು. ಅದರಂತೆ ಏಪ್ರಿಲ್ ೨೦೨೬ರಿಂದ ಅನ್ವಯವಾಗುವಂತೆ ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕಿದ್ದರೂ ಇದುವರೆಗೂ ಜಾರಿಗೊಳಿಸಿಲ್ಲ. ಕೂಡಲೇ ಬಾಕಿ ಸಮೇತ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಗಳ ನಿರ್ವಹಣಾ ವೆಚ್ಚವಾಗಿ ಹಲವು ವರ್ಷಗಳಿಂದ ಪ್ರತಿ ಲೀಟರ್ಗೆ ೮೦ ಪೈಸೆ ಮಾತ್ರ ನೀಡಲಾಗುತ್ತಿದೆ. ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಸಂಘಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ನಿರ್ವಹಣಾ ವೆಚ್ಚವನ್ನು ಕನಿಷ್ಠ ೧.೫೦ ರೂ.ಗೆ ಹೆಚ್ಚಿಸಬೇಕು. ನವೆಂಬರ್ ೧ರಿಂದ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್ಗೆ ೭ ರೂ. ಹೆಚ್ಚಿಸಿರುವುದು ಸ್ವಾಗತಾರ್ಹ. ಇದಕ್ಕಾಗಿ ಒಕ್ಕೂಟ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಸಂಘಗಳಿಗೆ ೧೫ ದಿನಗಳ ಹಾಲಿನ ಬಟವಾಡೆ ಹಣ ಬಾಕಿ ಉಳಿದಿರುವುದರಿಂದ ಉತ್ಪಾದಕರಿಗೆ ಸಕಾಲದಲ್ಲಿ ಹಣ ಪಾವತಿಸಲು ತೊಂದರೆಯಾಗುತ್ತಿದೆ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದರು.
ಏಕರೂಪ ತಂತ್ರಾಂಶದ ಮೂಲಕ ಹಾಲು ಖರೀದಿ ವ್ಯವಸ್ಥೆ ಜಾರಿಯಿಂದ ಸಿಬ್ಬಂದಿಯ ಕೆಲಸದ ಒತ್ತಡ ಹೆಚ್ಚಾಗಿದೆ. ಆದ್ದರಿಂದ ಸಿಬ್ಬಂದಿಯ ವೇತನವನ್ನು ಪರಿಷ್ಕರಿಸಿ ಎಲ್ಲ ಸಂಘಗಳಲ್ಲೂ ಕಡ್ಡಾಯವಾಗಿ ಜಾರಿಗೊಳಿಸಬೇಕು. ಪ್ರಸ್ತುತ ಸಿಬ್ಬಂದಿಗೆ ಮಾತ್ರ ನೀಡುತ್ತಿರುವ ವೈದ್ಯಕೀಯ ವಿಮೆ ಸೌಲಭ್ಯವನ್ನು ಅವರ ಕುಟುಂಬದವರಿಗೂ ವಿಸ್ತರಿಸಬೇಕು. ಹೈನುರಾಸುಗಳಿಗೆ ಪೂರೈಸುತ್ತಿರುವ ಪಶು ಆಹಾರದ ಗುಣಮಟ್ಟದ ಬಗ್ಗೆ ಉತ್ಪಾದಕರಿಂದ ದೂರುಗಳು ಕೇಳಿಬರುತ್ತಿದ್ದು, ಉತ್ತಮ ಗುಣಮಟ್ಟದ ಆಹಾರ ಪೂರೈಸಬೇಕು. ಬರಗಾಲದಿಂದ ರಾಸುಗಳ ನಿರ್ವಹಣೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಪಶು ಆಹಾರದ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಮಾತನಾಡಿ ನಾನು ಕೂಡ ನಿಮ್ಮ ಹಾಗೇ ನೌಕರನಾಗಿದ್ದೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಒಕ್ಕೂಟದ ಆಡಳಿತ ಮಂಡಳಿಯ ಗಮನಕ್ಕೆ ತರಲಾಗುತ್ತದೆ ನಮ್ಮ ಕಡೆಯಿಂದ ಸಾಧ್ಯವಾಗುವ ಬೇಡಿಕೆಯನ್ನು ಕೂಡಲೇ ಬಗೆಹರಿಸಲು ಬದ್ದವಾಗಿರುವುದಾಗಿ ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಉಪಾಧ್ಯಕ್ಷ ಮಿಂಡಹಳ್ಳಿ ಮುನಿರಾಜು, ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶಗೌಡ, ಖಜಾಂಚಿ ವಕ್ಕಲೇರಿ ನಾಗರಾಜ್, ಜಿಲ್ಲಾ ನಿರ್ದೇಶಕ ಗೋಪಾಲ್, ತಾಲ್ಲೂಕು ಅಧ್ಯಕ್ಷ ತೊಂಡಾಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಉಪಾಧ್ಯಕ್ಷ ಗಂಗಾಪುರ ಬಾಬು, ಮುಖಂಡರಾದ ರವಿ, ಸುರೇಶ್, ಸುಬ್ರಹ್ಮಣ್ಯ, ಹರಿ ಮತ್ತಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್