ಸಾತಪೂರದಲ್ಲಿ ಶಾರ್ಟ್ ಸರ್ಕ್ಯೂಟ್ಗೆ 8 ಎಕರೆ ಕಬ್ಬು ಬೆಳೆ ನಾಶ: ರೈತರಿಗೆ ₹16 ಲಕ್ಷ ಪರಿಹಾರ ನೀಡಲು ಬಿ.ಡಿ. ಪಾಟೀಲ ಆಗ್ರಹ
ವಿಜಯಪುರ, 03 ನವೆಂಬರ್ (ಹಿ.ಸ.) ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ರೈತರಿಗೆ ಸೇರಿದ ಸುಮಾರು 8 ಎಕರೆ ಕಬ್ಬು ಬೆಳೆ ಸಂಪೂರ್ಣವಾಗಿ ಸುಟ್ಟು ನಾಶವಾಗಿರುವ ಘಟನೆ ಇಂಡಿ ನಗರಸಭೆ ವ್ಯಾಪ್ತಿಯ ಸಾತಪೂರ ಗ್ರಾಮದಲ್ಲಿ ನ.3ರಂದು ನಡೆದಿದೆ. ಗ್ರಾಮದ ರೈತರಾದ ಶಿವಮ್ಮ ಸಾತಪ್
ಕಬ್ಬು ನ್ಯಾಶ್


ವಿಜಯಪುರ, 03 ನವೆಂಬರ್ (ಹಿ.ಸ.)

ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ರೈತರಿಗೆ ಸೇರಿದ ಸುಮಾರು 8 ಎಕರೆ ಕಬ್ಬು ಬೆಳೆ ಸಂಪೂರ್ಣವಾಗಿ ಸುಟ್ಟು ನಾಶವಾಗಿರುವ ಘಟನೆ ಇಂಡಿ ನಗರಸಭೆ ವ್ಯಾಪ್ತಿಯ ಸಾತಪೂರ ಗ್ರಾಮದಲ್ಲಿ ನ.3ರಂದು ನಡೆದಿದೆ.

ಗ್ರಾಮದ ರೈತರಾದ ಶಿವಮ್ಮ ಸಾತಪ್ಪ ಪೂಜಾರಿ ಅವರಿಗೆ ಸೇರಿದ 4 ಎಕರೆ, ಹುಸೇನಿ ಕಟ್ಟಿಮನಿ ಅವರಿಗೆ ಸೇರಿದ 2 ಎಕರೆ ಹಾಗೂ ದೊಡ್ಡಪ್ಪ ಲಾಯಪ್ಪ ಸಾತಲಗಾಂವ ಅವರಿಗೆ ಸೇರಿದ 2 ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆಗೆ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟುಹೋಗಿದ್ದು, ರೈತರು ಅಪಾರ ಪ್ರಮಾಣದ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ.

ರೈತರು ಸಾಲ-ಸೂಲ ಮಾಡಿ, ಹಲವು ತಿಂಗಳುಗಳ ಕಾಲ ಶ್ರಮವಹಿಸಿ ಬೆಳೆಸಿದ್ದ ಕಬ್ಬು ಬೆಳೆ ಕಣ್ಣೆದುರೇ ಬೆಂಕಿಗೆ ಆಹುತಿಯಾಗಿರುವುದು ಕುಟುಂಬಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಬೆಳೆ ಕೈತಪ್ಪಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಾಲ ತೀರಿಸುವುದು ಸೇರಿದಂತೆ ಕುಟುಂಬ ನಿರ್ವಹಣೆಯ ಬಗ್ಗೆಯೂ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಅವರು ಸಾತಪೂರ ಗ್ರಾಮಕ್ಕೆ ಭೇಟಿ ನೀಡಿ, ಬೆಂಕಿ ಅವಘಡದಿಂದ ಹಾನಿಗೊಳಗಾದ ಜಮೀನುಗಳನ್ನು ಪರಿಶೀಲಿಸಿದರು.

ನಷ್ಟಕ್ಕೊಳಗಾದ ರೈತರೊಂದಿಗೆ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ ಸಾಂತ್ವನ ಹೇಳಿದರು. ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಡಿ. ಪಾಟೀಲ, ರೈತರು ಕಷ್ಟಪಟ್ಟು ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ಅವರಿಗೆ ತಕ್ಷಣ ನೆರವಿನ ಅಗತ್ಯವಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಷ್ಟದ ಸಮರ್ಪಕ ಸಮೀಕ್ಷೆ ನಡೆಸಬೇಕು. ಹಾನಿಯ ಪ್ರಮಾಣವನ್ನು ವೈಜ್ಞಾನಿಕವಾಗಿ ಅಂದಾಜಿಸಿ, ಸಂತ್ರಸ್ತ ಮೂವರು ರೈತರಿಗೆ ಒಟ್ಟು ₹16 ಲಕ್ಷ ಪರಿಹಾರವನ್ನು ಸರ್ಕಾರ ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಬೆಳೆ ನಷ್ಟದ ಕುರಿತು ಅಧಿಕಾರಿಗಳು ವಿಳಂಬ ಮಾಡದೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ರೈತರ ಸಂಕಷ್ಟದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ತ್ವರಿತವಾಗಿ ಸ್ಪಂದಿಸುವ ಮೂಲಕ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಭೀಮಾಶಂಕರ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಘಟನೆಯ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಂ.ಎನ್. ಪಾಟೀಲ, ಪ್ರಕಾಶ ಹಿರೇಕುರಬರ, ಸಾತಪ್ಪ ಪೂಜಾರಿ, ಪಾಂಡು ಗುಡ್ಲ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande