
ಕೋಲಾರ, 27 ನವೆಂಬರ್ (ಹಿ.ಸ.)
ಕೆರೆಗಳು, ರಾಜಕಾಲುವೆ ಹಾಗೂ ಪೋಷಕ ಕಾಲುವೆಗಳನ್ನು ಒತ್ತುವರಿಯಿಂದ ರಕ್ಷಿಸಿ ಜಲಮೂಲಗಳನ್ನು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಲಿದೆ. ಈಗಲೇ ಎಚ್ಚೆತ್ತುಕೊಂಡು ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ಹೇಳಿದರು.
ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೋಲಾರ ನಗರದ ಕುಡಿಯುವ ನೀರು ಪೂರೈಸುವ ಅಮ್ಮೇರಹಳ್ಳಿ ಕೆರೆಗೆ ಮುಖ್ಯ ಪೀಡರ್ ರಾಜಕಾಲುವೆಗಳ ದುರಸ್ತಿ ಸಂರಕ್ಷಣೆ ಹಾಗೂ ತಂತಿಬೇಲಿ ನಿರ್ಮಾಣ ಕಾಮಗಾರಿಗೆ ತಾಲೂಕಿನ ಮಡೇರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೆರೆಗಳು ತಂದೆ-ಮಗಯಿದ್ದ0ತೆ, ಕಾಲುವೆಗಳು ತಾಯಿಯಿದ್ದಂತೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸರ್ಕಾರಿ ಜಾಗಗಳನ್ನು ಸಂರಕ್ಷಿಸಬೇಕು. ಕೆರೆ, ರಾಜಕಾಲುವೆಗಳನ್ನು ಉಳಿಸದಿದ್ದರೆ ಮುಂದಿನ ಪೀಳಿಗೆಗೆ ಅವುಗಳನ್ನು ಚಿತ್ರಗಳಲ್ಲಿ ತೋರಿಸುವ ಪರಿಸ್ಥಿತಿ ಬರಬಹುದು. ನೀರಿಗಾಗಿ ಸಂಘರ್ಷ ಎದುರಾಗುವ ದಿನಗಳು ದೂರವಿಲ್ಲ. ಪೋಷಕ ಕಾಲುವೆಗಳ ದುರಸ್ತಿ ಹಾಗೂ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಕೋಲಾರ ನಗರಕ್ಕೆ ನೀರು ಪೂರೈಸುವ ಅಮ್ಮೇರಹಳ್ಳಿ ಕೆರೆಯನ್ನೂ ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಮಳೆ ಪ್ರಮಾಣ ಕಡಿಮೆಯಾದಂತೆ ಪೋಷಕ ಕಾಲುವೆಗಳು ಒತ್ತುವರಿಯಾಗಿದ್ದು, ಅವುಗಳ ನಿರ್ವಹಣೆ ಕಡೆಗಣಿಸಲಾಗಿದೆ. ಕೆಸಿ ವ್ಯಾಲಿ ಹಾಗೂ ಎತ್ತಿನಹೊಳೆ ಯೋಜನೆ ಜಾರಿಯಾದ ಬಳಿಕವೂ ಜಲಮೂಲಗಳ ಸಂರಕ್ಷಣೆ ಅಗತ್ಯವಿದೆ. ಜಿಲ್ಲೆಯ ಎಲ್ಲ ಕೆರೆಗಳ ಅಭಿವೃದ್ಧಿ ಹಾಗೂ ರಾಜಕಾಲುವೆಗಳ ದುರಸ್ತಿಗೆ ?೨ ಸಾವಿರ ಕೋಟಿ ಅನುದಾನದ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಮುಂದಾಗಬೇಕು. ಜಿಲ್ಲೆಯ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹಕಾರ ನೀಡಲಿದ್ದಾರೆ ಎಂದರು.
ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮಾತನಾಡಿ, ಕೆರೆಗಳ ಒತ್ತುವರಿ ತೆರವು ಹಾಗೂ ಜಲಮೂಲಗಳ ಸಂರಕ್ಷಣೆಗೆ ರೈತರ ಸಹಕಾರ ಅಗತ್ಯ. ರಾಜಕಾಲುವೆ ನಿರ್ಮಾಣ, ಚೆಕ್ಡ್ಯಾಂಗಳ ಮೂಲಕ ನೀರು ಸಂಗ್ರಹಕ್ಕೆ ಕ್ರಮವಹಿಸಲಾಗುವುದು. ರೈತರಿಗೆ ಅನ್ಯಾಯವಾಗದಂತೆ ಜಲಸಂರಕ್ಷಣಾ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪೋಲೀಸ್ ವರಿಷ್ಠಾಧಿಕಾರಿ ಕನ್ನಿಕ ಸುಕ್ರಿವಾಲ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಎಂ.ಎಸ್ ಮಂಗಳ, ಎಸಿ ನಯನ, ತಹಶಿಲ್ದಾರ್ ನಾಗವೇಣಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಸೇರಿದಂತೆ ಅಧಿಕಾರಿಗಳು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್