ರೈತರ ಸಮಗ್ರ ಅಭಿವೃದ್ಧಿಗೆ ಗ್ರಾಮೀಣ ನಾವೀನ್ಯ ಕೇಂದ್ರಗಳ ಸ್ಥಾಪನೆ: ಎರಡು ಸಂಸ್ಥೆಗಳ ಒಪ್ಪಂದ
ಕೋಲಾರ ಸತ್ಯ ಸಾಯಿ ಕೃಷಿ ಡಿಪ್ಲೋಮಾ ಕೇಂದ್ರದ ಸಹಯೋಗದಲ್ಲಿ ಪ್ರಯೋಗ
ಚಿಕ್ಕಬಳ್ಳಾಪುರ ಜಿಲ್ಲೆ ಸತ್ಯಸಾಯಿ ಕೃಷ್ಣ ನಿಕೇತನಂ ಕೃಷಿ ಡಿಪ್ಲೊಮಾ ಕೇಂದ್ರ ಹಾಗೂ ಬೀಯಿಂಗ್ ಫಾರ್ಮರ್ ಫೌಂಡೇಷನ್ ಆಶ್ರಯದಲ್ಲಿ ನಾವೀನ್ಯ ಕೇಂದ್ರ ಸ್ಥಾಪನೆಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು..


ಕೋಲಾರ, 27 ನವೆಂಬರ್ (ಹಿ.ಸ.)

ರೈತರ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕೃಷಿ, ಆರೋಗ್ಯ, ಶಿಕ್ಷಣ, ಕೌಶಲ ತರಬೇತಿ, ಉದ್ಯೋಗ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗ್ರಾಮೀಣ ನಾವೀನ್ಯ ಕೇಂದ್ರಗಳನ್ನು ಸ್ಥಾಪಿಸಲು ಶ್ರೀ ಸತ್ಯ ಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯ ಹಾಗೂ ಬೀಯಿಂಗ್ ಫಾರ್ಮರ್ ಫೌಂಡೇಷನ್ ಒಪ್ಪಂದ ಮಾಡಿಕೊಂಡಿವೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಗೊಲ್ಲಗುರುವೇನಹಳ್ಳಿಯ ಶ್ರೀ ಸತ್ಯಸಾಯಿ ಕೃಷ್ಣ ನಿಕೇತನಂ ಕೃಷಿ ಡಿಪ್ಲೊಮಾ ಕೇಂದ್ರದ ಸಹಯೋಗದಲ್ಲಿ ಈ ನಾವೀನ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ಈ ಸಂಬಂಧ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ ಒಪ್ಪಂದಕ್ಕೆ ಬೀಯಿಂಗ್ ಫಾರ್ಮರ್ ಫೌಂಡೇಷನ್ ಪರವಾಗಿ ಸಾಂಬಶಿವರೆಡ್ಡಿ ಶ್ರೀನಿವಾಸ ಬಾಲಾಜಿ ಹಾಗೂ ವಿಶ್ವವಿದ್ಯಾಲಯದ ಪರವಾಗಿ ಕುಲಪತಿ ಪ್ರೊ. ಶ್ರೀಕಂಠ ಮೂರ್ತಿ ಕೆ. ಸಹಿ ಹಾಕಿದರು. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಉಪಸ್ಥಿತರಿದ್ದರು.

ಗ್ರಾಮೀಣ ಪ್ರದೇಶದ ರೈತರು ಹಾಗೂ ಸಾರ್ವಜನಿಕರಿಗೆ ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಒದಗಿಸುವುದು ಈ ಕೇಂದ್ರಗಳ ಪ್ರಮುಖ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕೃಷಿ ವಿಶ್ವವಿದ್ಯಾಲಯ ಹಾಗೂ ಜಾಗತಿಕ ಕೃಷಿ ನಾವೀನ್ಯ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿಯೂ ಎರಡೂ ಸಂಸ್ಥೆಗಳು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಕುಲಪತಿ ಪ್ರೊ. ಶ್ರೀಕಂಠ ಮೂರ್ತಿ ತಿಳಿಸಿದರು.

ಕೇಂದ್ರಗಳಲ್ಲಿ ಕೃಷಿ ಮತ್ತು ಆಹಾರ ಉತ್ಪನ್ನಗಳ ಅಭಿವೃದ್ಧಿ, ಆಧುನಿಕ ಕೃಷಿ ಪದ್ಧತಿಗಳ ತರಬೇತಿ, ಕೌಶಲ ಅಭಿವೃದ್ಧಿ, ಉದ್ಯೋಗ ಮಾಹಿತಿ ಹಾಗೂ ರೈತ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಲು ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನೂ ರೂಪಿಸಲಾಗುತ್ತದೆ. ಕೃಷಿ ಉತ್ಪಾದನೆ ಮತ್ತು ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದು ಯೋಜನೆಯ ಉದ್ದೇಶವಾಗಿದೆ.

ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಸಾಯಿ ಸ್ವಾಸ್ಥ್ಯ ಕೇಂದ್ರ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಯೂ ಇದೆ. ಇದರೊಂದಿಗೆ ಹಿರಿಯ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ವಸತಿ ಮತ್ತು ಆರೈಕೆ ವ್ಯವಸ್ಥೆ ರೂಪಿಸಲು ಉದ್ದೇಶಿಸಲಾಗಿದೆ.

ಬೀಯಿಂಗ್ ಫಾರ್ಮರ್ ಫೌಂಡೇಷನ್ ಕೃಷಿ ತರಬೇತಿ, ಉದ್ಯಮಶೀಲತೆ ಹಾಗೂ ವಿವಿಧ ಯೋಜನೆಗಳಿಗೆ ದಾನಿಗಳ ಮೂಲಕ ಹಣಕಾಸಿನ ನೆರವು ಒದಗಿಸಲಿದೆ. ವಿಶ್ವವಿದ್ಯಾಲಯವು ಕೇಂದ್ರಗಳ ನಿರ್ವಹಣೆ, ಅಗತ್ಯ ಸಿಬ್ಬಂದಿ ನೇಮಕ, ತರಬೇತಿ ಹಾಗೂ ಶೈಕ್ಷಣಿಕ ಸಹಕಾರದ ಜವಾಬ್ದಾರಿ ವಹಿಸಲಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande