
ಕೋಲಾರ, 27 ನವೆಂಬರ್ (ಹಿ.ಸ.)
ಕನಕದಾಸರು ಪ್ರತಿಪಾದಿಸಿದ ಸಮಾನತೆಯ ಆದರ್ಶದ ಹಾದಿಯಲ್ಲಿ ಪ್ರತಿಯೊಬ್ಬರೂ ನಿತ್ಯವೂ ನಡೆದಾಗ ಮಾತ್ರ ಕನಕದಾಸರ ಜಯಂತಿ ಆಚರಣೆ ಅರ್ಥಪೂರ್ಣವಾಗಲಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ತಿಳಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಮಾನತೆಯನ್ನು ಸಾರುವ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ರಚಿಸುವುದಕ್ಕೂ ಸುಮಾರು 500 ವರ್ಷಗಳ ಹಿಂದೆಯೇ ಕನಕದಾಸರು ಅಸಮಾನತೆ ಮತ್ತು ಅಸ್ಪೃಶ್ಯತೆ ಸಮಾಜಕ್ಕೆ ಅಂಟಿರುವ ಪಿಡುಗುಗಳೆಂದು ಗುರುತಿಸಿ, ತಮ್ಮ ಸಾಹಿತ್ಯ ಮತ್ತು ಸಂಗೀತದ ಮೂಲಕ ಅವುಗಳ ವಿರುದ್ಧ ಹೋರಾಡಿದ್ದರು. ಅವರು ಬೋಧಿಸಿದ ಸಮಾನತೆಯ ವಿಚಾರಗಳು ಇಂದಿಗೂ ಹೆಚ್ಚು ಪ್ರಸ್ತುತವಾಗಿವೆ ಎಂದರು.
ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಕನಕದಾಸರಂತಹ ಮಹನೀಯರ ಜಯಂತಿಗಳಲ್ಲಿ ಸಮಾನತೆಯ ಕುರಿತು ಮಾತನಾಡಿ, ಕಾರ್ಯಕ್ರಮದಿಂದ ಹೊರಬಂದ ಬಳಿಕ ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ಆಚರಿಸಿದರೆ ಅಂತಹ ಆಚರಣೆಗಳಿಗೆ ಏನು ಅರ್ಥವಿದೆ ಎಂದು ಪ್ರಶ್ನಿಸಿದರು.
ಜಾತಿ, ಅಸಮಾನತೆ ಮತ್ತು ಅಸ್ಪೃಶ್ಯತೆಯಂತಹ ಪಿಡುಗುಗಳು ದೇಶದ ಸಾಮಾಜಿಕ ವ್ಯವಸ್ಥೆಗೆ ದೊಡ್ಡ ಸವಾಲಾಗಿವೆ. ಮಹನೀಯರನ್ನೂ ಜಾತಿಯ ಚೌಕಟ್ಟಿನಲ್ಲಿ ಬಂಧಿಸಿ ಅವರ ಜಯಂತಿಗಳನ್ನು ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಆದರ್ಶಗಳನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬರೂ ಪಾಲಿಸಿದಾಗ ಮಾತ್ರ ಸಮಾನತೆಯ ಆಶಯದೊಂದಿಗೆ ಭಾರತವನ್ನು ಒಗ್ಗಟ್ಟಿನಿಂದ ಪುನರ್ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಾತಿ ಮತ್ತು ಧರ್ಮದ ಭೇದಗಳನ್ನು ಮೀರಿ ಸಮಾಜವನ್ನು ಸಂಘಟಿಸಲು ಶ್ರಮಿಸಿದ ಕನಕದಾಸರು ಸಂಗೀತ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಕೃತಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೌಲ್ಯಗಳನ್ನು ಒಳಗೊಂಡಿವೆ ಎಂದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಜಿ. ರಾಜು, ಸಿಂಡಿಕೇಟ್ ಸದಸ್ಯ ಜೈದೀಪ್, ಶೈಕ್ಷಣಿಕ ಮಂಡಳಿ ಸದಸ್ಯರಾದ ಕಲ್ಲಂಡೂರು ಲೋಕೇಶ್ ಹಾಗೂ ಎಚ್. ಮುನಿಸ್ವಾಮಿ ಗೌಡ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್