ನ. 30ರಂದು ಕೋಲಾರದಲ್ಲಿ ಟಿಪ್ಪು ಜಯಂತಿ ಆಚರಣೆ: ನಟ ಪ್ರಕಾಶ್ ರಾಜ್ ಭಾಗಿ
ಟಿಪ್ಪು ಜಯಂತಿಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಆಗಮನ
ಕೋಲಾರದಲ್ಲಿ ಟಿಪ್ಪು ಸೆಕ್ಯೂಲರ್ ಸೇನೆಯಿಂದ ನಡೆಯಲಿರುವ ಟಿಪ್ಪು ಜಯಂತಿಯಲ್ಲಿ ಬಹುಭಾಷ ನಟ ಪ್ರಕಾಶ್ ರಾಜ್ ಭಾಗವಹಿಸಲಿದ್ದಾರೆ ಎಂದು ಟಿಪ್ಪು ಸೆಕ್ಯೂಲ್ ಸೇನೆಯ ಸೈಯದ್ ಆಸೀಫ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಕೋಲಾರ, 27 ನವೆಂಬರ್ (ಹಿ.ಸ.):

ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನೆ ನೇತೃತ್ವದಲ್ಲಿ ಸೌಹಾರ್ದ ಕರ್ನಾಟಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 30ರಂದು ಕೋಲಾರ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹುಭಾಷಾ ನಟ ಹಾಗೂ ಖ್ಯಾತ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನೆ ಅಧ್ಯಕ್ಷ ಸೈಯದ್ ಆಸೀಫ್ ಉಲ್ಲಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ 'ದೇಶಪ್ರೇಮಿ ಟಿಪ್ಪು ಸುಲ್ತಾನರು ಇಂದಿನ ಯುವಜನತೆಗೆ ಎಷ್ಟು ಪ್ರಸ್ತುತ?' ಎಂಬ ವಿಷಯದ ಕುರಿತು ಎದ್ದೇಳು ಕರ್ನಾಟಕ ರಾಜ್ಯ ಸಂಚಾಲಕ ಕೆ.ಎನ್. ಅಶೋಕ್ ಮಾತನಾಡಲಿದ್ದಾರೆ. 'ಪ್ರಜಾಪ್ರಭುತ್ವದ ಇಂದಿನ ಬಿಕ್ಕಟ್ಟು ಮತ್ತು ಕನ್ನಡಿಗರ ಹೊಣೆಗಾರಿಕೆ' ಎಂಬ ವಿಷಯದ ಕುರಿತು ಪ್ರಗತಿಪರ ಚಿಂತಕ ಹಾಗೂ ಹೋರಾಟಗಾರ ಶಿವಸುಂದರ್ ವಿಚಾರ ಮಂಡಿಸಲಿದ್ದಾರೆ ಎಂದರು.

ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸೈಯದ್ ಆಸೀಫ್ ಉಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಅಂಜುಮನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂದು ಬೆಳಿಗ್ಗೆ 8.30ಕ್ಕೆ ಪ್ರಕಾಶ್ ರಾಜ್ ಅವರು ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಸೌಹಾರ್ದ ಭೇಟಿ ನೀಡಲಿದ್ದಾರೆ. ಬಳಿಕ ನಗರದ ನಚಿಕೇತನ ನಿಲಯದ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಬೆಂಗಳೂರು ವಿಭಾಗೀಯ ಸಮನ್ವಯಕಾರ ಹೈದರ್ ಬೇಗ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ದಲಿತ ಸೇನೆಯ ಸಂಸ್ಥಾಪಕ ಅಧ್ಯಕ್ಷ ದಲಿತ್ ನಾರಾಯಣಸ್ವಾಮಿ, ಎದ್ದೇಳು ಕರ್ನಾಟಕ ಸಂಘಟನೆಯ ಕೋಲಾರ ಜಿಲ್ಲಾ ಸಮನ್ವಯಕಾರ ಕಿತ್ತಂಡೂರು ವೆಂಕಟರಾಮ್, ಸಲ್ಮಾನ್, ಆದಿಲ್, ಇಲಿಯಾಜ್ ಅಹಮದ್ ಹಾಗೂ ಸೈಯದ್ ಅಸಾದುಲ್ಲಾ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande