ಅರಣ್ಯ ಪ್ರದೇಶದಲ್ಲಿ ಮಾನವ ಕಾಡುಪ್ರಾಣಿಗಳ ಸಂಘರ್ಷ ತಪ್ಪಿಸಲು ಸೋಲಾರ್ ಬೇಲಿ ಅಳವಡಿಸಲು ಸಚಿವರ ಸೂಚನೆ
ಅರಣ್ಯ ಪ್ರದೇಶದಲ್ಲಿ ಮಾನವ ಕಾಡುಪ್ರಾಣಿಗಳ ಸಂಘರ್ಷ ತಪ್ಪಿಸಲು ಸೋಲಾರ್ ಬೇಲಿ ಅಳವಡಿಸಲು ಸಚಿವರ ಸೂಚನೆ
ಬಂಗಾರಪೇಟೆ ತಾಲ್ಲೂಕಿನ ಅನಿಗಾನಹಳ್ಳಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಪರಿಸರ ಮತ್ತು ಜೀವಿಶಾಸ್ತç ಸಚಿವ ಆರ್.ರಾಮಲಿಂಗಾರೆಡ್ಡಿ ಫಲಾನುಭವಿಯೊಬ್ಬರಿಗೆ ಕಂದಾಯ ಇಲಾಖೆಯ ಸವಲತ್ತನ್ನು ವಿತರಿಸಿದರು.


ಕೋಲಾರ, 21 ನವೆಂಬರ್ (ಹಿ.ಸ.)

ಕರ್ನಾಟಕ ತಮಿಳುನಾಡು ಗಡಿಭಾಗದ ಬಂಗಾರಪೇಟೆಯ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಾವಳಿ ತಡೆಗೆ ಸೋಲಾರ್ ಬೇಲಿ ಅಳವಡಿಸಲಾಗುವುದು. ಈ ಭಾಗದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಹಲವಾರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅಳವಡಿಸುವಂತೆ ಶಾಸಕರು ಮನವಿ ಮಾಡಿದ್ದಾರೆ. ಈಗಾಗಲೇ ಡಿಎಎಫ್ಒ ಅವರಿಗೆ ಸೂಚನೆ ನೀಡಲಾಗಿದೆ ಹಾಗೂ ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಜಮೀನು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮಲಿಂಗರೆಡ್ಡಿ ತಿಳಿಸಿದರು.

ಬಂಗಾರಪೇಟೆ ತಾಲ್ಲೂಕಿನ ಅನಿಗನಹಳ್ಳಿ ಗೇಟ್ ಬಳಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ 'ಪ್ರಜಾಸೇವಾ ಆಂದೋಲನ' ಹಾಗೂ ₹೧೪೨ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಂದಿನ ಚುನಾವಣೆಯೊಳಗೆ ರಾಜ್ಯಾದ್ಯಂತ ೧೫ ಲಕ್ಷ ಬಡ ಕುಟುಂಬಗಳಿಗೆ ನಿವೇಶನಗಳನ್ನು ಹಂಚುವುದು ರಾಜ್ಯ ಸರ್ಕಾರದ ಗುರಿಯಾಗಿದ್ದು, ಈ ಹಿಂದೆ ನೀಡುತ್ತಿದ್ದ ೨೦*೩೦ ಅಳತೆಯ ಬದಲಾಗಿ ೩೦*೪೦ ಅಳತೆಯ ನಿವೇಶನಗಳನ್ನೇ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗಿದೆ

ಬಂಗಾರಪೇಟೆ ಕ್ಷೇತ್ರದಲ್ಲಿ ಸುಮಾರು ೧೦ ಸಾವಿರ ಬಡ ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಈಗಾಗಲೇ ೫೦೦ ಎಕರೆ ಜಮೀನನ್ನು ಪಂಚಾಯತ್ ರಾಜ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದೇ ಮಾದರಿಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜಮೀನು ಗುರುತಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಸರ್ಕಾರದ ಅನುದಾನದಲ್ಲೇ ₹೧೬,೦೦೦ ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ೧೫,೦೦೦ ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಮುಂದಿನ ಆರು ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೋಲಾರ ಜಿಲ್ಲೆಯ ಗ್ರಾಮೀಣ ರಸ್ತೆಗಳ ಡಾಂಬರೀಕರಣಕ್ಕೂ ಸಂಪುಟದ ಅನುಮೋದನೆ ದೊರೆತಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ವಿಶೇಷವಾಗಿ ₹೧ ಕೋಟಿ ಅನುದಾನ ನೀಡಲಾಗುತ್ತಿದೆ. ಸಾರ್ವಜನಿಕರ ಆಸ್ತಿಗಳಿಗೆ ಕಾನೂನುಬದ್ಧ ಭದ್ರತೆ ಒದಗಿಸುವ 'ಭೂ ಗ್ಯಾರಂಟಿ' ಯೋಜನೆಯಡಿ ಇಂದು ೫,೦೨೭ ಫಲಾನುಭವಿಗಳಿಗೆ ಇ-ಖಾತಾ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ೧.೯೦ ಲಕ್ಷ ಜನರಿಗೆ ಇ-ಖಾತಾ ನೀಡಲಾಗುವುದು ಎಂದರು.

ದೇಶಕ್ಕಾಗಿ ಸೇವೆ ಸಲ್ಲಿಸಿದ ಸೈನಿಕರಿಗೆ ಉಚಿತ ನಿವೇಶನ ನೀಡಲು ಕಾಮಸಮುದ್ರದಲ್ಲಿ ೧೦ ಎಕರೆ ಜಮೀನು ನಿಗದಿಪಡಿಸಲಾಗಿದ್ದು, ಶೀಘ್ರದಲ್ಲೇ ಬಡಾವಣೆ ನಿರ್ಮಿಸಿ ವಿತರಿಸಲಾಗುವುದು. ಅಲ್ಲದೆ, ಬಂಗಾರಪೇಟೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ೧೦ ಎಕರೆ ಜಮೀನು ಕಾಯ್ದಿರಿಸಲಾಗಿದ್ದು, ಕ್ರೀಡಾ ಇಲಾಖೆಯಿಂದ ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಬಂಗಾರಪೇಟೆ ಶಾಸಕ ಹಾಗೂ ಕೆ.ಯು.ಐ.ಡಿ.ಎಫ್.ಸಿ ಅಧ್ಯಕ್ಷರಾದ ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ. ರವರು ಕ್ಷೇತ್ರದ ೧೦,೦೦೦ ನಿವೇಶನ ರಹಿತ ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ಕನಸು ಇಂದು ೫೦೦ ಎಕರೆ ಜಮೀನು ಹಸ್ತಾಂತರದ ಮೂಲಕ ನನಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಯೋಜನೆಗೆ ಕೇವಲ ೨೪ ಗಂಟೆಗಳಲ್ಲಿ ೩೫೦ ಎಕರೆ ಜಮೀನನ್ನು ಮಂಜೂರು ಮಾಡಿಕೊಟ್ಟ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರ ಕಾರ್ಯವೈಖರಿಯನ್ನು ಶಾಸಕರು ಮುಕ್ತಕಂಠದಿಂದ ಶ್ಲಾಘಿಸಿದರು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ ಶಾಸಕರು, ದಿಂಬದಿಂದ ಬಂಗಾರಪೇಟೆ-ಕೆಜಿಎಫ್ ರಸ್ತೆಗೆ ₹೧೧೦ ಕೋಟಿ ಹಾಗೂ ಪಟ್ಟಣದ ಸಂಚಾರ ದಟ್ಟಣೆ ತಗ್ಗಿಸಲು ಬೈಪಾಸ್ ರಸ್ತೆ ನಿರ್ಮಾಣಕ್ಕೆ ₹೧೦೦ ಕೋಟಿ ಮಂಜೂರಾಗಿದೆ ಎಂದರು.

ಕೋದಂಡರಾಮಸ್ವಾಮಿ ದೇವಾಲಯದ ₹೫೦೦ ಕೋಟಿ ಮೌಲ್ಯದ ಒತ್ತುವರಿ ಜಾಗವನ್ನು ತೆರವುಗೊಳಿಸಿ, ಸಚಿವ ರಾಮಲಿಂಗರೆಡ್ಡಿ ಅವರ ಸಹಕಾರದಿಂದ ₹೧೫ ಕೋಟಿ ವೆಚ್ಚದಲ್ಲಿ ೨೫೦ ಮಳಿಗೆಗಳು, ಕಲ್ಯಾಣ ಮಂಟಪ ಹಾಗೂ ಪಾರ್ಕಿಂಗ್ ಒಳಗೊಂಡ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಯುವಕರಿಗಾಗಿ ಕೆಸರನಹಳ್ಳಿ ಸರ್ವೆ ನಂ. ೯೩ರಲ್ಲಿ ೯ ಎಕರೆ ೩೮ ಗುಂಟೆ ಜಮೀನನ್ನು ಕ್ರೀಡಾಂಗಣಕ್ಕೆ ಮಂಜೂರು ಮಾಡಿಸಲಾಗಿದೆ. ಪಾಕರಹಳ್ಳಿಯಲ್ಲಿ ೬೬ ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಡಿಸೆಂಬರ್ ೧೫ರಂದು ಕೆ.ಸಿ. ವ್ಯಾಲಿ ಎರಡನೇ ಹಂತದ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರದ ಐದು ಗ್ಯಾರಂಟಿಗಳ ಜೊತೆಗೆ ರೆವೆನ್ಯೂ ಹಾಗೂ ಪರಿವರ್ತನೆಯಾಗದ ನಿವೇಶನಗಳಿಗೆ ಖಾತಾ ನೀಡುವ 'ಭೂ ಗ್ಯಾರಂಟಿ' ಆರನೇ ಗ್ಯಾರಂಟಿಯಾಗಿ ಜಾರಿಯಾಗಿದೆ ಎಂದ ಶಾಸಕರು, ಬಂಗಾರಪೇಟೆ ಭಾಗದಲ್ಲಿ ಕಾಡಾನೆ ಹಾವಳಿ ತಡೆಗೆ ಬಾಕಿ ಇರುವ ಸೋಲಾರ್ ಫೆನ್ಸಿಂಗ್ ಕಾಮಗಾರಿಗೆ ₹೨ ಕೋಟಿ ಹಾಗೂ ೨೦೦ ಎಕರೆ ವ್ಯಾಪ್ತಿಯ ಇಂದಿರಾಗಾAಧಿ ಟ್ರೀ ಪಾರ್ಕ್ ಅಭಿವೃದ್ಧಿಗೆ ₹೨ ಕೋಟಿ ಅನುದಾನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಅಲ್ಲದೆ, ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸರ್ವೆ ಪೂರ್ಣಗೊಳ್ಳುವವರೆಗೆ ಯಾವುದೇ ಬಡ ರೈತರನ್ನು ಒಕ್ಕಲೆಬ್ಬಿಸದಂತೆ ಆದೇಶಿಸಿರುವ ಸಚಿವರಿಗೆ ಕ್ಷೇತ್ರದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮಾತನಾಡಿ, 'ಪ್ರಜಾಸೇವಾ ಆಂದೋಲನ' ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಹಾಗೂ ಕನಸಿನ ಯೋಜನೆಯಾಗಿದೆ. ಸೆಪ್ಟೆಂಬರ್ ೫ರಂದು ರಾಜ್ಯ ಮಟ್ಟದಲ್ಲಿ ಚಾಲನೆ ಪಡೆದ ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ತಾಲ್ಲೂಕು ಮಟ್ಟದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು. ಸರ್ಕಾರವೇ ನೇರವಾಗಿ ಸಾರ್ವಜನಿಕರ ಮನೆಬಾಗಿಲಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸುವುದು, ಸ್ಥಳದಲ್ಲೇ ಸೂಕ್ತ ಪರಿಹಾರ ಒದಗಿಸುವುದು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮ ಪ್ರಾರಂಭವಾದ ಬಳಿಕ ಹಲವಾರು ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರಕಿದೆ ಎಂದ ಅವರು, ಬಂಗಾರಪೇಟೆಯ ಈ ಬೃಹತ್ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಿ ಯಶಸ್ವಿಗೊಳಿಸಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಭಾಗವಹಿಸಿದ ಸಚಿವರು, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ೧೦,೦೦೦ ನಿವೇಶನಗಳಿಗಾಗಿ ೫೦೦ ಎಕರೆ ಜಮೀನನ್ನು ಕಂದಾಯ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಗೆ ಹಸ್ತಾಂತರಿಸಲಾಯಿತು. ನಿವೃತ್ತ ಸೈನಿಕರಿಗೆ ೧೦ ಎಕರೆ ಜಮೀನಿನ ದಾಖಲೆ ಹಸ್ತಾಂತರ ಹಾಗೂ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ೧೦,೩೬೧ ಫಲಾನುಭವಿಗಳ ಮಾಸಿಕ ಪಿಂಚಣಿಗೆ ಮರುಚಾಲನೆ ನೀಡಲಾಯಿತು. ಇದರೊಂದಿಗೆ ಬೆಸ್ಕಾಂ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಸಮಾಜ ಕಲ್ಯಾಣ, ಕಾರ್ಮಿಕ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಯುವನಿಧಿ ಯೋಜನೆಯಡಿ ಸಾವಿರಾರು ಫಲಾನುಭವಿಗಳಿಗೆ ಚೆಕ್, ಹೊಲಿಗೆ ಯಂತ್ರ ಹಾಗೂ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಸ್ಎಂ ಮಂಗಳ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವೀಣ ಪಿ ಬಾಗೇವಾಡಿ, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಜಿಲ್ಲಾ ಅರಣ್ಯ ಅಧಿಕಾರಿ ಸರಿನಾ ಸಿಕ್ಕಲಿಗರ್, ಉಪ ವಿಭಾಗಾಧಿಕಾರಿ ಡಾ. ಎಂ.ನಯನಾ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಬಂಗಾರಪೇಟೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಮುನಿರಾಜು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಭಾಗಿಯಾಗಿದ್ದರು.

---

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande