ಮಹಿಳಾ ಸಮಾಜ ಶಾಲೆಗೆ ಕೋಟ್ಯಾಂತರ ರೂ ಮೌಲ್ಯದ ನಿವೇಶನ ಹಸ್ತಾಂತರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸರ್ಕಾರ
ಮಹಿಳಾ ಸಮಾಜ ಶಾಲೆಗೆ ಕೋಟ್ಯಾಂತರ ರೂ ಮೌಲ್ಯದ ನಿವೇಶನ ಹಸ್ತಾಂತರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸರ್ಕಾರ
ಪೌರಾಡಳಿತ ನಿರ್ದೇಶಕರು ಕೋಲಾರ ಮಹಿಳಾ ಸಮಾಜ ಆಡಳಿತ ಮಂಡಳಿಗೆ ನಿವೇಶನ ನೀಡಲು ಜಿಲ್ಲಾಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಆದೇಶ.


ಕೋಲಾರ, 21 ನವೆಂಬರ್ (ಹಿ.ಸ.)

ನಗರದ ಹೃದಯಭಾಗವಾದ ಹೊಸ ಬಡಾವಣೆಯಲ್ಲಿರುವ ಕೋಲಾರ ನಗರಸಭೆಗೆ ಸೇರಿದ ಸುಮಾರು ೧೩,೦೯೦ ಚದರ ಅಡಿ ವಿಸ್ತೀರ್ಣದ ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಮಾರುಕಟ್ಟೆ ದರದ ಶೇಕಡ ೫೦ರ ರಿಯಾಯಿತಿಯಲ್ಲಿ ಖಾಸಗಿ ಸಂಸ್ಥೆಯಾದ ‘ಮಹಿಳಾ ಸಮಾಜ’ಕ್ಕೆ ಮಂಜೂರು ಮಾಡಲು ಕೋಲಾರ ಜಿಲ್ಲಾಡಳಿತ ಮತ್ತು ನಗರಸಭೆ ಅಧಿಕಾರಿಗಳು ಸಲ್ಲಿಸಿದ್ದ ಕಾನೂನುಬಾಹಿರ ಪ್ರಸ್ತಾವನೆಯನ್ನು ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಸಾರಾಸಗಟಾಗಿ ತಿರಸ್ಕರಿಸಿದೆ.

ಈ ಕುರಿತು ಕೋಲಾರ ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಎಸ್.ಆರ್. ಮುರಳಿಗೌಡ ಮತ್ತು ಎನ್.ಎಸ್. ಪ್ರವೀಣ್ ಅವರು ಸಲ್ಲಿಸಿದ್ದ ನಿರಂತರ ಕಾನೂನು ಹೋರಾಟ ಮತ್ತು ದೂರುಗಳಿಗೆ ದೊಡ್ಡ ಜಯ ಲಭಿಸಿದ್ದು, ಅಕ್ರಮಕ್ಕೆ ಬೆಂಬಲವಾಗಿ ನಿಂತಿದ್ದ ಜಿಲ್ಲಾಡಳಿತಕ್ಕೆ ತೀವ್ರ ಮುಖಭಂಗವಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಾಜಿ ಉಪಾಧ್ಯಕ್ಷರಾದ ಎಸ್.ಆರ್. ಮುರಳಿಗೌಡ ಮತ್ತು ಎನ್.ಎಸ್. ಪ್ರವೀಣ್ ಅವರು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕಾದ ಅಧಿಕಾರಿಗಳು ಮಹಿಳಾ ಸಮಾಜ ಆಡಳಿತ ಮಂಡಳಿಯ ಜೊತೆ ಶಾಮೀಲಾಗಿ ಸರ್ಕಾರದ ಸ್ಥಾಯಿ ನಿಯಮಗಳನ್ನು ಉಲ್ಲಂಘಿಸಿ ಅರ್ಧ ಬೆಲೆಗೆ ಮಾರಾಟ ಮಾಡಲು ಪೌರಾಡಳಿತ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಜಿಲ್ಲಾಡಳಿತವು ಸೆಪ್ಟೆಂಬರ್ ೫ರಂದು ಮಹಿಳಾ ಸಮಾಜಕ್ಕೆ ಶೇ. ೫೦ರ ರಿಯಾಯಿತಿ ದರದಲ್ಲಿ ಜಾಗ ಮಂಜೂರು ಮಾಡಲು ಶಿಫಾರಸು ಮಾಡಿತ್ತು. ಆದರೆ, ಪೌರಾಡಳಿತ ನಿರ್ದೇಶನಾಲಯವು ಈ ಆದೇಶವು ಕೇವಲ ಎಸ್ಸಿ/ಎಸ್ಟಿ ಧರ್ಮಸಂಸ್ಥೆಗಳು, ಅನಾಥಾಲಯಗಳು ಹಾಗೂ ನಿರಾಶ್ರಿತರ ಕೇಂದ್ರಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಖಾಸಗಿ ಸಂಸ್ಥೆಗಳಿಗಲ್ಲ ಎಂದು ಸ್ಪಷ್ಟಪಡಿಸಿ ಜಿಲ್ಲಾಡಳಿತದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.

ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡುವ ಏಕೈಕ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ನಗರಸಭೆ ಅಧಿಕಾರಿಗಳು ನಿರ್ದೇಶನಾಲಯದ ಚೆಕ್ಲಿಸ್ಟ್ ಪ್ರಕಾರ ಅಗತ್ಯ ದಾಖಲೆಗಳನ್ನೂ ಪರಿಶೀಲಿಸದೆ ತರಾತುರಿಯಲ್ಲಿ ಪ್ರಸ್ತಾವನೆ ಕಳುಹಿಸಿರುವುದು ಇವರ ಕರ್ತವ್ಯಲೋಪ ಮತ್ತು ಶಾಮೀಲಾತಿಗೆ ಹಿಡಿದ ಕೈಗನ್ನಡಿಯಾಗಿದೆ.

ಜಿಲ್ಲಾ ನಗರಾಭಿವೃದ್ಧಿ ಕೋಶದ ತನಿಖಾ ತಂಡವೇ ಮಹಿಳಾ ಸಮಾಜವು ನಗರಸಭೆಯ ಜಾಗವನ್ನು ಒತ್ತುವರಿ ಮಾಡಿಕೊಂಡು, ಯಾವುದೇ ಪರವಾನಗಿ ಇಲ್ಲದೆ ಮೂರು ಅಂತಸ್ತಿನ ಬೃಹತ್ ಕಟ್ಟಡ ನಿರ್ಮಿಸಿದೆ. ಮೂಲ ಕಡತವನ್ನು ನಾಶಪಡಿಸಲಾಗಿದೆ ಹಾಗೂ ನಕಲಿ ಕ್ರಯಪತ್ರ ಸೃಷ್ಟಿಸಿ ವಂಚಿಸಿದೆ ಎಂದು ವರದಿ ನೀಡಿದೆ. ಹೀಗಿದ್ದರೂ, ಜಿಲ್ಲಾಡಳಿತ ಮತ್ತು ನಗರಸಭೆಯ ಆಡಳಿತಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅವರಿಗೆ ಬಹುಮಾನ ನೀಡುವಂತೆ ಶೇ. ೫೦ರ ರಿಯಾಯಿತಿಯಲ್ಲಿ ಜಮೀನು ಪರಭಾರೆ ಮಾಡಲು ಹೊರಟಿದ್ದು ಆಡಳಿತ ಯಂತ್ರದ ದುರುಪಯೋಗವಾಗಿದೆ.

ನಾವು ದಾಖಲಿಸಿರುವ ದೂರಿನನ್ವಯ ಪ್ರಕರಣವು ಈಗಾಗಲೇ ಕರ್ನಾಟಕ ಲೋಕಾಯುಕ್ತದಲ್ಲಿ ವಿಚಾರಣೆಯಲ್ಲಿದ್ದು, ನಕಲಿ ದಾಖಲೆ ಸೃಷ್ಟಿ ಸಂಬAಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. ೧೮೦/೨೦೨೨ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಇಂತಹ ಗಂಭೀರ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಸಂಸ್ಥೆಗೆ ಜಾಗ ನೀಡಲು ಶಿಫಾರಸು ಮಾಡುವ ಮೂಲಕ ಅಧಿಕಾರಿಗಳು ಸಾರ್ವಜನಿಕ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ.

ಮುಬಾರಕ್ ನಗರಸಭೆಯ ಅಧ್ಯಕ್ಷರಾಗಿದ್ದಾಗ ಸಾಮಾನ್ಯ ಸಭೆಯಲ್ಲಿ ತಿಂಗಳಿಗೆ ನೆಲ ಬಾಡಿಗೆ ನಲವತ್ತು ಸಾವಿರ ರೂಪಾಯಿ ಹನ್ನೊಂದು ವರ್ಷಗಳ ಕಾಲ ಗುತ್ತಿಗೆ ನೀಡಲು ಠರಾವು ಮಾಡಲಾಗಿತ್ತು. ಈ ಠರಾವು ಕಾನೂನು ಬಾಹಿರವಾಗಿದ್ದರೂ ಸಹ ಅಂದಿನ ಪೌರಾಯುಕ್ತ ಲಕ್ಷಿö್ಮನಾರಾಯಣ್ ಸಂಸ್ಥೆಗೆ ಸಬ್ ರಿಜಿಸ್ಟರ್ ಕಛೇರಿಯಲ್ಲಿ ದಾಖಲೆಯನ್ನು ನೋಂದಣಿ ಮಾಡದೆ ಗುತ್ತಿಗೆ ನೀಡಿದ್ದರು. ನಗರಸಭೆಯ ಈ ಕ್ರಮವನ್ನು ಅಂದಿನ ಜಿಲ್ಲಾಧಿಕಾರಿ ಮಂಜುನಾಥ್ ರದ್ದುಪಡಿಸಿದ್ದರು. ಮಹಿಳಾ ಸಮಾಜ ಆಡಳಿತ ಮಂಡಳಿ ಹೈ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿತ್ತು. ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದ ಹೈ ಕೋರ್ಟ್ ಶಿಕ್ಷಣ ಸಂಸ್ಥೆಯಾದ ಕಾರಣ ಒಂದು ವೇಳೆ ಸಂಸ್ಥೆ ಅರ್ಜಿ ನೀಡಿದರೆ ನಿವೇಶವನ್ನು ಗುತ್ತಿಗೆ ನೀಡಲು ಪರಿಗಣಿಸಬೇಕು. ಅಲ್ಲದೆ ಸಂಸ್ಥೆ ದಾಖಲೆಗಳನ್ನು ತಿದ್ದಿದ್ದು, ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ತಿಳಿತ್ತು.

ನಿಕಟ ಪೂರ್ವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಹಿಳಾ ಸಮಾಜ ಆಡಳಿತ ಮಂಡಳಿ ಹಾಗೂ ನಗರಸಭೆಯ ಅಧಿಕಾರಿಗಳ ಹಾಗೂ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೌರಾಡಳಿತ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅವರು ವರ್ಗಾವಣೆಯಾಗದ ನಂತರ ಹಾಲಿ ಜಿಲ್ಲಾಧಿಕಾರಿ ರವಿಕುಮಾರ್ ಹಿಂದಿನ ಪ್ರಸ್ತಾವನೆಯನ್ನು ಬದಿಗೊತ್ತಿ ಮಾರುಕಟ್ಟೆ ಮೌಲ್ಯದ ಅರ್ಧ ಬೆಲೆಗೆ ನಿವೇಶನವನ್ನು ನೀಡಲು ಪೌರಾಡಳಿತ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆ ಕಾನೂನು ಬಾಹಿರವಾಗಿದ್ದು, ಪೌರಾಡಳಿತ ನಿರ್ದೇಶಕರು ತಿರಸ್ಕರಿಸಿದ್ದಾರೆ.

ಪೌರಾಡಳಿತ ನಿರ್ದೇಶನಾಲಯವು ಈ ಅಕ್ರಮ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ನ್ಯಾಯಕ್ಕೆ ಸಂದ ಜಯವಾಗಿದೆ. ಇನ್ನಾದರೂ ಜಿಲ್ಲಾಡಳಿತವು ಎಚ್ಚೆತ್ತುಕೊಂಡು ಈ ಕೂಡಲೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್.ಆರ್. ಮುರಳಿಗೌಡ ಮತ್ತು ಎನ್.ಎಸ್. ಪ್ರವೀಣ್ ಅವರು ಆಗ್ರಹಿಸಿದ್ದಾರೆ.

೫೦ ವರ್ಷಗಳ ಲೀಸ್ ಅವಧಿ ಮುಗಿದಿರುವ ಹಾಗೂ ಅನಧಿಕೃತವಾಗಿ ನಿರ್ಮಿಸಲಾಗಿರುವ ೧೩,೦೯೦ ಚ.ಅಡಿ ವ್ಯಾಪ್ತಿಯ ಜಾಗ ಮತ್ತು ಕಟ್ಟಡಗಳನ್ನು ಕರ್ನಾಟಕ ಪುರಸಭೆಗಳ ಕಾಯ್ದೆ ಕಲಂ ೭೨, ೩೧೩, ೩೧೪ ಮತ್ತು ಸಾರ್ವಜನಿಕ ಆವರಣಗಳ ತೆರವು ಕಾಯ್ದೆಯಡಿ ತಕ್ಷಣವೇ ಸರ್ಕಾರ/ನಗರಸಭೆಯ ಸುಪರ್ದಿಗೆ ಜಪ್ತಿ ಮಾಡಿಕೊಳ್ಳಬೇಕು.

ನಿಯಮಬಾಹಿರವಾಗಿ ೨೦೧೬ರಲ್ಲಿ ಲೀಸ್ ನೀಡಿದ, ಮೂಲ ಕಡತ ನಾಶಪಡಿಸಿದ ಹಾಗೂ ಈಗ ಕಾನೂನುಬಾಹಿರವಾಗಿ ಶೇ. ೫೦ರ ದರದಲ್ಲಿ ಜಮೀನು ಮಂಜೂರು ಮಾಡಲು ಶಿಫಾರಸು ಮಾಡಿದ ಎಲ್ಲಾ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

ಹೈಕೋರ್ಟ್ ನಿರ್ದೇಶನದಂತೆ ನಕಲಿ ಕ್ರಯಪತ್ರ ಸೃಷ್ಟಿಸಿದ ಮಹಿಳಾ ಸಮಾಜದ ಪದಾಧಿಕಾರಿಗಳ ವಿರುದ್ಧ ನಗರಸಭೆ ವತಿಯಿಂದ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande