ರಾಷ್ಟಿಯ ಮತದಾರರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಸ್ಪರ್ಧೆಗಳು
ರಾಷ್ಟಿಯ ಮತದಾರರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಸ್ಪರ್ಧೆಗಳು
ಕೋಲಾರದ ಸುಭಾಷ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ರಾಷ್ಟಿಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಸಮೀವುಲ್ಲಾ ಬಹುಮಾನ ವಿತರಿಸಿದರು.


ಕೋಲಾರ, 21 ನವೆಂಬರ್ (ಹಿ.ಸ.)

ಹಣ,ಆಮಿಷಗಳಿಗೆ ಒಳಗಾಗದೇ ನೈತಿಕ ಮತದಾನ ಮಾಡುವ ಮೂಲಕ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟವಾದ ಭಾರತದ ಆಡಳಿತ ನಡೆಸುವ ಉತ್ತಮ ನಾಯಕರ ಆಯ್ಕೆ ಮಾಡುವ ಶಕ್ತಿ ಮತದಾರರಿಗಿದ್ದು, ಮಕ್ಕಳು ಈ ಕುರಿತು ತಮ್ಮ ಪೋಷಕರ ಮನವೊಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಹಾಗೂ ಜಿಲ್ಲಾ ಚುನಾವಣಾ ಸಾಕ್ಷರತಾ ಸಂಘದ ಪ್ರೌಢಶಾಲಾ ವಿಭಾಗದ ನೋಡಲ್ ಅಧಿಕಾರಿ ಸಮೀವುಲ್ಲಾ ಕರೆ ನೀಡಿದರು.

ನಗರದ ಸುಭಾಷ್ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ರಾಷ್ಟಿಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.

೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರಾಗಿ ನೋಂದಾಯಿಸಲು ತಿಳಿಸಿ, ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸುವ ಮೂಲಕ ಬಲಿಷ್ಟ ಸರ್ಕಾರ ರಚನೆಗೆ ವಿದ್ಯಾರ್ಥಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.

ಜನರಿAದ ಆಯ್ಕೆಯಾದ ಸರ್ಕಾರದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲು ನೈತಿಕ ಮತದಾನದ ಅಗತ್ಯವಿದೆ, ವಿದ್ಯಾರ್ಥಿಗಳು ಮತದಾನದ ಮಹತ್ವ ಅರಿಯಬೇಕು ತಮ್ಮ ಕುಟುಂಬಗಳಲ್ಲಿ ಯಾರಾದರೂ ಮತದಾನದಿಂದ ದೂರ ಉಳಿದರೆ ಅವರ ಮನವೊಲಿಸಿ ಮತದಾನದಲ್ಲಿ ಭಾಗವಹಿಸುವಂತೆ ಮಾಡಬೇಕು. ನಮ್ಮ ಭಾರತ ಸಂವಿಧಾನವು ದೇಶದ ಜನರನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿಷ್ಟ ಪಡಿಸುತ್ತದೆ ನಮ್ಮ ಸಂವಿಧಾನ ವೈವಿಧ್ಯಗಳ ಸಂಗಮವಾಗಿದ್ದು ಅದು ಕಾರ್ಯಾಂಗ ಶಾಸಕಾಂಗ ಮತ್ತು ನ್ಯಾಯಾಂಗಗಳ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವತಂತ್ರ ಒದಗಿಸಿದ್ದು, ಅಂತಹ ಸರ್ಕಾರವನ್ನು ಅಧಿಕಾರಕ್ಕೆ ತರುವ ಅವಕಾಶ ಮತದಾರರಿಗಿದೆ ಎಂದು ತಿಳಿಸಿದರು.

ಸುಭಾಷ್ ಶಾಲೆ ಮುಖ್ಯ ಶಿಕ್ಷಕ ವೇಣುಗೋಪಾಲ್ ಮಾತನಾಡಿ, ಮತದಾನದ ಕುರಿತು ಜನತೆಯಲ್ಲಿ ಇರುವ ನಿರುತ್ಸಾಹ ದೂರ ಮಾಡುವ ಶಕ್ತಿ ಮಕ್ಕಳಿಗೆ ಇದೆ, ಈ ನಿಟ್ಟಿನಲ್ಲಿ ರಾಷ್ಟಿಯ ಮತದಾರರ ದಿನಾಚರಣೆ, ಸಂವಿಧಾನದ ಹಕ್ಕುಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯೋಜನ ಸಮಾಜಕ್ಕೆ ಸಿಗಬೇಕು, ವಿದ್ಯಾರ್ಥಿಗಳು ಮತದಾನದ ಕುರಿತು ಗ್ರಾಮಗಳಲ್ಲಿ, ತಮ್ಮ ಮನೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ, ಸ್ಪರ್ಧೆಗಳ ತೀರ್ಪುಗಾರರು ಪ್ರಾಮಾಣಿಕತೆಯಿಂದ ತೀರ್ಪು ನೀಡಿ, ರಾಜ್ಯಕ್ಕೆ ಸಾಧಕರನ್ನು ಕಳುಹಿಸಿಕೊಡಿ ಜಿಲ್ಲೆಯ ಕೀರ್ತಿ ಪತಾಕೆ ಅಲ್ಲೂ ಹಾರಿಸಲಿ ಎಂದು ಕಿವಿಮಾತು ಹೇಳಿದರು.

ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರತಿಯೊಬ್ಬ ಪ್ರಜೆಯೂ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು, ಮತದಾನದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದಲೇ ನಡೆಸುತ್ತಿರುವ ರಸಪ್ರಶ್ನೆ, ಪ್ರಬಂಧ, ಭಿತ್ತಪತ್ರ ರಚನಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದೀರಿ ಎಂದರು.

ಸ್ಪರ್ಧೆಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ೧೨೦ ವಿದ್ಯಾರ್ಥಿಗಳು ೩೦ ಶಿಕ್ಷಕರು,ಪೋಷಕರು ಪಾಲ್ಗೊಂಡಿದ್ದು, ತೀರ್ಪುಗಾರರಾಗಿ ಶಿಕ್ಷಕ ಗಂಗಾಧರ ಮೂರ್ತಿ, ನಾರಾಯಣಸ್ವಾಮಿ,ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ಬಬಿತಾ, ವೇಣುಗೋಪಾಲ್ ಮತ್ತಿತರರು ಕಾರ್ಯನಿರ್ವಹಿಸಿದರು. ಉತ್ತಮವಾಗಿ ೧೦ ಮಂದಿ ಪ್ರಬಂಧ, ೧೦ ಮಂದಿ ರಸಪ್ರಶ್ನೆ ವಿಭಾಗದಿಂದ ಜಿಲ್ಲಾಮಟ್ಟದಿಂದ ಆಯ್ಕೆಯಾದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande