
ಹರಿದ್ವಾರ, 21 ನವೆಂಬರ್ (ಹಿ.ಸ.):
ಸನಾತನ ಧರ್ಮದ ಕುರಿತು ಯಾವುದೇ ರೀತಿಯ ಅನುಮಾನ ಅಥವಾ ಆತಂಕಪಡುವ ಅಗತ್ಯವಿಲ್ಲ. ಪ್ರಸ್ತುತ ಜಗತ್ತು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ವಿಶ್ವದ ದೃಷ್ಟಿ ಭಾರತದತ್ತ ನೆಟ್ಟಿದೆ. ಏಕೆಂದರೆ ಭಾರತೀಯ ಸಂಸ್ಕೃತಿ ಮತ್ತು ಸನಾತನ ಚಿಂತನೆಯಲ್ಲಿ ಮಾತ್ರ ಮಾನವತೆಗೆ ಸೂಕ್ತ ದಿಕ್ಕು ತೋರಿಸುವ ಸಾಮರ್ಥ್ಯ ಅಡಕವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಹರಿದ್ವಾರದಲ್ಲಿ ಅಖಿಲ ವಿಶ್ವ ಗಾಯತ್ರಿ ಪರಿವಾರ ಆಯೋಜಿಸಿದ್ದ ಮಾತಾ ಭಗವತಿದೇವಿ ಶರ್ಮಾ ಹಾಗೂ ಅಖಂಡ ದೀಪ ಶತಮಾನೋತ್ಸವ ಸಮಾರಂಭದ ಅಧಿವೇಶನವೊಂದರಲ್ಲಿ ಅವರು ಮಾತನಾಡಿದರು.
ಯಾವುದೇ ಸಂಘಟನೆ ನೂರು ವರ್ಷಗಳನ್ನು ಪೂರ್ಣಗೊಳಿಸುವುದು ಸುಲಭದ ಸಂಗತಿಯಲ್ಲ. ಶಿಸ್ತುಬದ್ಧವಾಗಿ ಸಂಘಟನೆಯನ್ನು ಮುನ್ನಡೆಸುವುದು ಅದಕ್ಕಿಂತಲೂ ದೊಡ್ಡ ಸವಾಲಾಗಿದೆ. ದೈವಿಕ ಕಾರ್ಯಗಳ ನಿರ್ವಹಣೆಗಾಗಿ ಭಗವಂತನೇ ನೇರವಾಗಿ ಮುಂದೆ ಬರುವುದಿಲ್ಲ. ಬದಲಾಗಿ ಅರ್ಹ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಆ ಕಾರ್ಯಗಳ ಜವಾಬ್ದಾರಿ ಹಾಗೂ ಶ್ರೇಯಸ್ಸನ್ನು ವಹಿಸುತ್ತಾನೆ ಎಂದು ಹೇಳಿದರು.
ಮಾತಾ ಭಗವತಿದೇವಿ ಶರ್ಮಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ತಪಸ್ಸು, ತ್ಯಾಗ, ಸೇವೆ ಮತ್ತು ಮಾತೃವಾತ್ಸಲ್ಯದಿಂದ ಕೂಡಿದ ಜೀವನದ ಸ್ಮರಣಾರ್ಥ ವಿಶೇಷ ಸ್ಮರಣಾರ್ಥ ಅಂಚೆ ಚೀಟಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಯಾವುದೇ ಸಂಘಟನೆಯ ನೂರು ವರ್ಷಗಳ ಪಯಣದಲ್ಲಿ ನಿರ್ಲಕ್ಷ್ಯ ಮತ್ತು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಿರಂತರ ಸೇವೆ ಮತ್ತು ಸಮರ್ಪಣೆಯ ಮೂಲಕ ಸಮಾಜದ ಬೆಂಬಲ, ವಿಶ್ವಾಸ ಹಾಗೂ ಮನ್ನಣೆ ದೊರೆಯುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಗಾಯತ್ರಿ ಪರಿವಾರದ ಕಾರ್ಯಗಳು ದೈವಿಕ ಉದ್ದೇಶಕ್ಕೆ ಸಂಬಂಧಿಸಿವೆ. ಇಂತಹ ಕಾರ್ಯಗಳು ನಿರಂತರವಾಗಿ ವಿಸ್ತರಣೆಯಾಗುವುದು ಮತ್ತು ಯಶಸ್ವಿಯಾಗುವುದು ಸಹಜ ಎಂದು ಅಭಿಪ್ರಾಯಪಟ್ಟರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹನುಮಂತನು ವಿಶ್ವದ ಎಲ್ಲ ಸೇವಾ ಮನೋಭಾವದ ಕಾರ್ಯಕರ್ತರಿಗೆ ಆದರ್ಶವಾಗಿದ್ದಾನೆ. ಶ್ರೀರಾಮನ ಕಾರ್ಯಕ್ಕೆ ಹನುಮಂತ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಂತೆ ಪ್ರತಿಯೊಬ್ಬ ಕಾರ್ಯಕರ್ತರೂ ಸನಾತನ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಮಾಜ ನಿರ್ಮಾಣದ ಕಾರ್ಯಕ್ಕೆ ಸಮರ್ಪಣಾ ಮನೋಭಾವದಿಂದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಇದಕ್ಕೂ ಮೊದಲು ಜನ್ಮಶತಮಾನೋತ್ಸವ ಸಮಾರಂಭವು ವೈದಿಕ ಮಂತ್ರಗಳ ಪಠಣ, ವಾದ್ಯವೃಂದ ಹಾಗೂ ಶಂಖನಾದದೊಂದಿಗೆ ಮೂರು ಕಲಶಗಳ ಪ್ರವೇಶದ ಮೂಲಕ ವಿಧ್ಯುಕ್ತವಾಗಿ ಆರಂಭವಾಯಿತು. ಗಾಯತ್ರಿ ಪರಿವಾರದ ಸಂಸ್ಥಾಪಕ ಪಂಡಿತ್ ಶ್ರೀರಾಮ್ ಶರ್ಮಾ ಅವರ ಜನ್ಮಸ್ಥಳ ಆಗ್ರಾದ ಆವಲಖೇಡ, ತಪೋಭೂಮಿ ಮಥುರಾ ಮತ್ತು ಕರ್ಮಭೂಮಿ ಹರಿದ್ವಾರದ ವಿವಿಧ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿದ ಬಳಿಕ ಕಲಶಗಳನ್ನು ಸಮಾರಂಭದ ಸ್ಥಳಕ್ಕೆ ತರಲಾಯಿತು. ಹಿರಿಯ ಕಾರ್ಯಕರ್ತರು ಮಂಗಳಾರತಿಯೊಂದಿಗೆ ಕಲಶಗಳನ್ನು ಸ್ವಾಗತಿಸಿದರು.
ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ವಿಶ್ವ ಗಾಯತ್ರಿ ಪರಿವಾರದ ಮುಖ್ಯಸ್ಥೆ ಶೈಲದೀದಿ ವಹಿಸಿದ್ದರು.
ಜನ್ಮಶತಮಾನೋತ್ಸವ ಸಮಾರಂಭದ ತಂಡದ ನಾಯಕ ಡಾ. ಚಿನ್ಮಯ್ ಪಾಂಡ್ಯ ಮಾತನಾಡಿ, ಈ ಕಾರ್ಯಕ್ರಮವು ಸೌಭಾಗ್ಯದ ಉದಯಕ್ಕೆ ಸಾಕ್ಷಿಯಾಗುವ ಐತಿಹಾಸಿಕ ಸಂದರ್ಭವಾಗಿದೆ. ಮಹರ್ಷಿ ಅರವಿಂದರ ಮಾತುಗಳನ್ನು ಸ್ಮರಿಸಿದ ಅವರು, 2026ನೇ ವರ್ಷವು ದಿವ್ಯ ಜ್ಯೋತಿಯ ಅವತರಣೆಯ ವರ್ಷವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದರು.
ಪರಮ ವಂದನೀಯ ಮಾತಾ ಭಗವತಿದೇವಿ ಶರ್ಮಾ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸ್ಮರಿಸಿದ ಅವರು, ಮಾತಾಜಿ ಅವರ ಸಂಪೂರ್ಣ ಜೀವನ ತಪಸ್ಸು, ತ್ಯಾಗ, ಸಾಧನೆ ಮತ್ತು ಸಮಾಜ ನಿರ್ಮಾಣಕ್ಕೆ ಸಮರ್ಪಿತವಾಗಿತ್ತು. ಅವರು ವಿಶಾಲ ಸಂಕಲ್ಪ ಹಾಗೂ ಸಂಘಟನಾ ಶಕ್ತಿಯೊಂದಿಗೆ ಅಶ್ವಮೇಧ ಮಹಾಯಜ್ಞಗಳನ್ನು ನಡೆಸಿದ ರೀತಿ ಅಪೂರ್ವ ಮಾದರಿಯಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸ್ವಾಮಿ ರಾಜರಾಜೇಶ್ವರಾಶ್ರಮ ಮಾತನಾಡಿ, ಯಾವುದೇ ಸಂಸ್ಥೆಯ ನೈಜ ಶಕ್ತಿ ಅದರ ಕಟ್ಟಡಗಳು, ಸಂಪನ್ಮೂಲಗಳು ಅಥವಾ ವಿಸ್ತರಣೆಯಲ್ಲಿರುವುದಿಲ್ಲ. ಬದಲಾಗಿ ಅಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಚಾರಿತ್ರ್ಯ, ಸಾಧನೆ, ಸಮರ್ಪಣೆ ಮತ್ತು ಜೀವನ ಮೌಲ್ಯಗಳಲ್ಲಿ ಅಡಕವಾಗಿರುತ್ತದೆ ಎಂದರು.
ಶ್ರೀಹರಿ ಸೇವಾಧಾಮದ ಮುಖ್ಯಸ್ಥ ಸ್ವಾಮಿ ಹರಿಚೇತನಾನಂದ, ಆರ್ಷ ವಿದ್ಯಾ ಮಂದಿರದ ಅಧ್ಯಕ್ಷ ಸ್ವಾಮಿ ಪರಮಾತ್ಮಾನಂದ, ಸುರತಗಿರಿ ಬಂಗಲೆಯ ಪರಮಾಧ್ಯಕ್ಷ ಸ್ವಾಮಿ ವಿಶ್ವೇಶ್ವರಾನಂದ ಗಿರಿ ಮಹಾರಾಜ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ವಿಶ್ವ ಗಾಯತ್ರಿ ಪರಿವಾರದ ತಂಡದ ನಾಯಕ ಡಾ. ಚಿನ್ಮಯ್ ಪಾಂಡ್ಯ ಅವರು ಅತಿಥಿಗಳಿಗೆ ಗಾಯತ್ರಿ ಮಹಾಮಂತ್ರ ಬರೆದ ಶಾಲು, ರುದ್ರಾಕ್ಷಿ ಮಾಲೆ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಭಾರತ ಸೇರಿದಂತೆ 40 ದೇಶಗಳಿಂದ ಆಗಮಿಸಿದ್ದ ಗಾಯತ್ರಿ ಪರಿವಾರದ ಸದಸ್ಯರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.