ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಉನ್ನತೀಕರಣ, ಉನ್ನತಿ ಮತ್ತು ಕೌಶಲ ವೃದ್ಧಿ ಅಗತ್ಯ: ಮಧುಸೂದನ್ ದಾದೂ
ನವದೆಹಲಿ, 21 ನವೆಂಬರ್ (ಹಿ.ಸ.): ಉನ್ನತೀಕರಣ, ಉನ್ನತಿ ಹಾಗೂ ಹೊಸ ಕೌಶಲಗಳ ಕಲಿಕೆಯ ಮೂಲಕ ಸಣ್ಣ ಕೈಗಾರಿಕೆಗಳನ್ನು ಬೃಹತ್ ಉದ್ಯಮಗಳಾಗಿ ಬೆಳೆಸುವ ನಿಟ್ಟಿನಲ್ಲಿ ಲಘು ಉದ್ಯೋಗ ಭಾರತಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘಟನೆಯ ಅಖಿಲ ಭಾರತ ಅಧ್ಯಕ್ಷ ಮಧುಸೂದನ್ ದಾದೂ ಹೇಳಿದರು. ದೆಹಲಿಯ ಭಾರತ ಮಂ
लघु उद्योग भारती के अखिल भारतीय अध्यक्ष मधुसूदन दादू के साथ अन्य लोग मौजूद।


ನವದೆಹಲಿ, 21 ನವೆಂಬರ್ (ಹಿ.ಸ.):

ಉನ್ನತೀಕರಣ, ಉನ್ನತಿ ಹಾಗೂ ಹೊಸ ಕೌಶಲಗಳ ಕಲಿಕೆಯ ಮೂಲಕ ಸಣ್ಣ ಕೈಗಾರಿಕೆಗಳನ್ನು ಬೃಹತ್ ಉದ್ಯಮಗಳಾಗಿ ಬೆಳೆಸುವ ನಿಟ್ಟಿನಲ್ಲಿ ಲಘು ಉದ್ಯೋಗ ಭಾರತಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘಟನೆಯ ಅಖಿಲ ಭಾರತ ಅಧ್ಯಕ್ಷ ಮಧುಸೂದನ್ ದಾದೂ ಹೇಳಿದರು.

ದೆಹಲಿಯ ಭಾರತ ಮಂಟಪದಲ್ಲಿ ಶನಿವಾರ ಲಘು ಉದ್ಯೋಗ ಭಾರತಿ ಆಯೋಜಿಸಿದ್ದ ‘ರಾಷ್ಟ್ರೀಯ ಸಮಾವೇಶ: ಭಾರತ ಆಹಾರ ಮತ್ತು ಕೃಷಿ 2047’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ 28 ರಾಜ್ಯಗಳಲ್ಲಿ ಸುಮಾರು 70 ಸಾವಿರ ಕೈಗಾರಿಕಾ ಘಟಕಗಳನ್ನು ಹೊಂದಿರುವ ಸಂಘಟನೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪ್ರಬಲ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸೂಕ್ಷ್ಮ ಉದ್ಯಮಗಳನ್ನು ಸಣ್ಣ ಉದ್ಯಮಗಳಾಗಿ, ಸಣ್ಣ ಉದ್ಯಮಗಳನ್ನು ಮಧ್ಯಮ ಉದ್ಯಮಗಳಾಗಿ ಹಾಗೂ ಮಧ್ಯಮ ಉದ್ಯಮಗಳನ್ನು ಬೃಹತ್ ಕಾರ್ಪೊರೇಟ್ ಸಂಸ್ಥೆಗಳಾಗಿ ಬೆಳೆಸುವುದು ಸಂಘಟನೆಯ ಉದ್ದೇಶವಾಗಿದೆ. ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಬ್ಯಾಂಕ್‌ಗಳ ಆಡಳಿತ ಮಂಡಳಿಗಳಲ್ಲಿ ಸಂಘಟನೆಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲೇ 11ರಿಂದ 12 ಸದಸ್ಯರು ನಿರ್ದೇಶಕರ ಮಂಡಳಿಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.

ಸಂಶೋಧನಾ ಸಂಸ್ಥೆಗಳೊಂದಿಗೆ ಕೈಜೋಡಿಕೆ

ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಗಳ ನಡುವೆ ಸಂಪರ್ಕ ಸೇತುವೆ ನಿರ್ಮಿಸುವುದಕ್ಕೆ ಒತ್ತು ನೀಡಲಾಗುತ್ತಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಹಾಗೂ ವಿವಿಧ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಣ್ಣ ಕೈಗಾರಿಕೆಗಳ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದರು.

ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿವಿಧ ಕ್ಷೇತ್ರಗಳ ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು 28 ಉತ್ಪನ್ನ ಸಮೂಹಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.

ಔಷಧ ಕ್ಷೇತ್ರದ ಸಮಾವೇಶದ ಬಳಿಕ ಇದೀಗ ಆಹಾರ ಮತ್ತು ಕೃಷಿ ಕ್ಷೇತ್ರದ ಸಮಾವೇಶ ಆಯೋಜಿಸಲಾಗಿದೆ. ಇದು ಉದ್ಯಮಿಗಳ ನಡುವೆ ಸ್ಪರ್ಧೆಗಿಂತ ಸಹಕಾರದ ಮನೋಭಾವ ಬೆಳೆಸುವುದರ ಜೊತೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಅರ್ಥಮಾಡಿಕೊಳ್ಳಲು ವೇದಿಕೆ ಒದಗಿಸಿದೆ ಎಂದು ಹೇಳಿದರು.

ಆಮದು ಅವಲಂಬನೆ ಕಡಿಮೆ ಮಾಡಲು ಕರೆ

ಸಂಘಟನೆಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉತ್ಪನ್ನ ಸಮೂಹಗಳ ಸಂಯೋಜಕ ಘನಶ್ಯಾಮ್ ಓಜಾ ಮಾತನಾಡಿ, ಈ ಸಮಾವೇಶ ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಹೊಸ ಆರಂಭವಾಗಿದೆ ಎಂದರು.

2047ರ ಅಭಿವೃದ್ಧಿ ಗುರಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೊಡುಗೆಯನ್ನು ಹೆಚ್ಚಿಸಬೇಕು. ಯಂತ್ರೋಪಕರಣಗಳು ಹಾಗೂ ಕಚ್ಚಾ ವಸ್ತುಗಳಿಗಾಗಿ ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡಿ, ಹೊಸ ದೇಶಗಳಲ್ಲಿ ರಫ್ತು ಅವಕಾಶಗಳನ್ನು ಅನ್ವೇಷಿಸಬೇಕು ಎಂದು ಉದ್ಯಮಿಗಳಿಗೆ ಕರೆ ನೀಡಿದರು.

ಮುಂದಿನ ವರ್ಷ ಎರಕದ ಉದ್ಯಮ, ಗಣಿಗಾರಿಕೆ, ಪ್ಲಾಸ್ಟಿಕ್, ಪ್ಯಾಕೇಜಿಂಗ್ ಮತ್ತು ವಿದ್ಯುನ್ಮಾನ ಸೇರಿದಂತೆ ಇನ್ನೂ ಆರು ಕ್ಷೇತ್ರಗಳಲ್ಲಿ ಸಮಾವೇಶಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. 2028ರಲ್ಲಿ ಬೃಹತ್ ರಾಷ್ಟ್ರೀಯ ಕಾರ್ಯಕ್ರಮ ನಡೆಸುವ ಯೋಜನೆಯೂ ಇದೆ ಎಂದು ತಿಳಿಸಿದರು.

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಆದ್ಯತೆ

ಲಘು ಉದ್ಯೋಗ ಭಾರತಿ ಅಖಿಲ ಭಾರತ ಜಂಟಿ ಪ್ರಧಾನ ಕಾರ್ಯದರ್ಶಿ ಹಾಗೂ ಆಹಾರ ಮತ್ತು ಕೃಷಿ ಉತ್ಪನ್ನ ಸಮೂಹದ ರಾಷ್ಟ್ರೀಯ ಸಹ ಸಂಯೋಜಕ ಆಶಿಷ್ ದೇವಡಾ ಮಾತನಾಡಿ, ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಸಾವಯವ ಕೃಷಿ ಮತ್ತು ನಾವೀನ್ಯತೆಯನ್ನು ಸಣ್ಣ ಉದ್ಯಮಗಳ ಶಕ್ತಿಯನ್ನಾಗಿ ರೂಪಿಸಬೇಕು ಎಂದರು.

ಕೊಯ್ಲಿನ ನಂತರ ಉಂಟಾಗುವ ನಷ್ಟವನ್ನು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ, ಆಧುನಿಕ ವ್ಯಾಪಾರ ಪದ್ಧತಿ ಹಾಗೂ ವೈಜ್ಞಾನಿಕ ಸಂಗ್ರಹಣಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು. ಉದ್ಯಮಗಳ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಸಿದ್ಧಪಡಿಸಲು ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ಪ್ರಮಾಣೀಕರಣ ಅತ್ಯಗತ್ಯ ಎಂದು ಹೇಳಿದರು.

'ಹೊಲದಿಂದ ಕಾರ್ಖಾನೆಗೆ, ಕಾರ್ಖಾನೆಯಿಂದ ಜಗತ್ತಿಗೆ' ಎಂಬ ದೂರದೃಷ್ಟಿಯೊಂದಿಗೆ ಉದ್ಯಮಿಗಳು ಮುನ್ನಡೆಯಬೇಕು ಎಂದು ಕರೆ ನೀಡಿದರು.

ವಿಕಸಿತ ಭಾರತ-2047ರ ಸಂಕಲ್ಪವನ್ನು ಸಾಕಾರಗೊಳಿಸುವುದು ಹಾಗೂ ದೇಶದ ಆಹಾರ ಮತ್ತು ಕೃಷಿ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಗುರುತು ಮೂಡಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande