ಸಮರ್ಥ, ಸಮೃದ್ಧ ಮತ್ತು ಸ್ವಾವಲಂಬಿ ಬಿಹಾರ ನಿರ್ಮಾಣಕ್ಕೆ ಎನ್.ಡಿ.ಎ ಬದ್ಧ: ಪ್ರಧಾನಿ ಮೋದಿ
ವೈಶಾಲಿ (ಬಿಹಾರ), 21 ನವೆಂಬರ್ (ಹಿ.ಸ.): ಸಮರ್ಥ, ಸಮೃದ್ಧ ಮತ್ತು ಸ್ವಾವಲಂಬಿ ಬಿಹಾರ ನಿರ್ಮಾಣಕ್ಕಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಎಲ್ಲ ಪಾಲುದಾರ ಪಕ್ಷಗಳು ಒಗ್ಗೂಡಿ ನಿರಂತರವಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಿಹಾರ ಪ್ರವಾಸದಲ್ಲಿದ್ದ ಅವರು
प्रधानमंत्री भाषण देते हुए


ವೈಶಾಲಿ (ಬಿಹಾರ), 21 ನವೆಂಬರ್ (ಹಿ.ಸ.):

ಸಮರ್ಥ, ಸಮೃದ್ಧ ಮತ್ತು ಸ್ವಾವಲಂಬಿ ಬಿಹಾರ ನಿರ್ಮಾಣಕ್ಕಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಎಲ್ಲ ಪಾಲುದಾರ ಪಕ್ಷಗಳು ಒಗ್ಗೂಡಿ ನಿರಂತರವಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಿಹಾರ ಪ್ರವಾಸದಲ್ಲಿದ್ದ ಅವರು ಶನಿವಾರ ವೈಶಾಲಿ ಜಿಲ್ಲೆಯಲ್ಲಿ ನಿತೀಶ್ ಸೇತುವೆಗೆ ಭೇಟಿ ನೀಡಿದ ಬಳಿಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 34,470 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಎನ್‌ಡಿಎ ಸರ್ಕಾರದ ಪ್ರಸಕ್ತ ಆಡಳಿತಾವಧಿಯ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಐತಿಹಾಸಿಕ ನೆಲವಾದ ವೈಶಾಲಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕಾಗಿ ವೈಶಾಲಿ ಹಾಗೂ ಬಿಹಾರದ ಮಣ್ಣಿಗೆ ನಮಿಸುತ್ತೇನೆ. ಎನ್‌ಡಿಎ ಪಾಲುದಾರ ಪಕ್ಷಗಳು, ಕಾರ್ಯಕರ್ತರು ಮತ್ತು ಬಿಹಾರದ ಜನತೆಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.

'ಎಲ್ಲರ ಸಹಕಾರ, ಎಲ್ಲರ ಅಭಿವೃದ್ಧಿ' ಎಂಬ ಮಂತ್ರದೊಂದಿಗೆ ಬಿಹಾರದ ಅಭಿವೃದ್ಧಿ ಪಯಣ ಮುಂದುವರಿದಿದೆ. ಪ್ರಜಾಪ್ರಭುತ್ವದ ಶಕ್ತಿಯನ್ನು ಜನಕಲ್ಯಾಣದ ಸಾಧನವನ್ನಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.

ಸುಮಾರು ಮೂರು ದಶಕಗಳ ಹಿಂದೆ ಬಿಹಾರ ಹೊಸ ಭರವಸೆ ಮತ್ತು ವಿಶ್ವಾಸದ ಹಾದಿಯನ್ನು ಆಯ್ಕೆ ಮಾಡಿಕೊಂಡಿತ್ತು. ಮೂರು ದಶಕಗಳ ಕಾಲ ರಾಜ್ಯವು ಹಿನ್ನಡೆ ಅನುಭವಿಸಿದ ಬಳಿಕ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಉತ್ತಮ ಆಡಳಿತದ ಹೊಸ ವಿಶ್ವಾಸ ಮೂಡಿತು. ಇದೀಗ ಅವರ ಆಶೀರ್ವಾದದೊಂದಿಗೆ ಸಮ್ರಾಟ್ ಚೌಧರಿ ಮತ್ತು ಅವರ ತಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತಿದೆ ಎಂದು ಹೇಳಿದರು.

ಇಂದು ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ದಿವಂಗತ ರಾಮವಿಲಾಸ್ ಪಾಸ್ವಾನ್ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಅವರು ಎಲ್ಲಿದ್ದರೂ ಈ ಸಾಧನೆಗಳನ್ನು ಕಂಡು ಸಂತೋಷಪಡುತ್ತಿರುತ್ತಾರೆ ಎಂದು ಮೋದಿ ಹೇಳಿದರು.

ನಿತೀಶ್ ಸೇತುವೆ ಲೋಕಾರ್ಪಣೆ

ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದರ್ಗಾ–ಬಿದೂಪುರ ಆರು ಪಥಗಳ ಕೇಬಲ್ ಸೇತುವೆಯನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗೌರವಾರ್ಥ ಈ ಸೇತುವೆಗೆ 'ನಿತೀಶ್ ಸೇತು' ಎಂದು ಹೆಸರಿಡಲಾಗಿದೆ.

ಇದು ಅವರ ಸೇವೆ ಮತ್ತು ಸಮರ್ಪಣೆಗೆ ಬಿಹಾರದ ಜನರು ಸಲ್ಲಿಸುತ್ತಿರುವ ಗೌರವದ ಸಂಕೇತವಾಗಿದೆ. ಈ ಸೇತುವೆಯಿಂದ ಪಾಟ್ನಾ ಮತ್ತು ವೈಶಾಲಿ ನಡುವಿನ ಪ್ರಯಾಣದ ಅಂತರ ಹಾಗೂ ಸಂಚಾರದ ತೊಂದರೆಗಳು ಕಡಿಮೆಯಾಗಲಿವೆ. ಕೃಷಿ ಉತ್ಪನ್ನಗಳು, ಹಣ್ಣು, ತರಕಾರಿ, ಹಾಲು ಮತ್ತು ಮೊಸರುಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಸಾಗಿಸುವುದು ಸುಲಭವಾಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಹಾಗೂ ವೃದ್ಧರಿಗೆ ವೈದ್ಯಕೀಯ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

19.7 ಕಿಲೋಮೀಟರ್ ಉದ್ದದ ಈ ಸೇತುವೆ ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ. ಮಹಾತ್ಮ ಗಾಂಧಿ ಸೇತುವೆ ಮತ್ತು ಜೆ.ಪಿ. ಸೇತುವೆಗಳ ಮೇಲಿನ ಸಂಚಾರದ ಒತ್ತಡವನ್ನೂ ಕಡಿಮೆ ಮಾಡಲಿದೆ.

ಬಿಹಾರದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು

ಬಿಹಾರದಲ್ಲಿ ರಸ್ತೆ ಸಂಪರ್ಕದ ಜೊತೆಗೆ ಇಂಧನ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳಲ್ಲಿಯೂ ವೇಗವಾಗಿ ಬದಲಾವಣೆಗಳಾಗುತ್ತಿವೆ. ಬಕ್ಸರ್ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಹಾಗೂ ಫುಲ್ವರಿಯಾ ಅಣೆಕಟ್ಟಿನ ಮೇಲೆ ಸೌರ ವಿದ್ಯುತ್ ಘಟಕ ಸ್ಥಾಪನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಸಾಕಾರಗೊಳ್ಳುತ್ತಿವೆ ಎಂದು ಪ್ರಧಾನಿ ತಿಳಿಸಿದರು.

ಒಂದು ಕಾಲದಲ್ಲಿ ಬಿಹಾರದ ಸಾವಿರಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಆದರೆ ಇಂದು ಅದೇ ರಾಜ್ಯ ವಿದ್ಯುತ್ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ 100 ಆಧುನಿಕ ವಿದ್ಯುತ್ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಾವಿರಾರು ಬಡ ಕುಟುಂಬಗಳಿಗೆ ಪಕ್ಕಾ ಮನೆಗಳ ಕೀಲಿಗಳನ್ನು ಹಸ್ತಾಂತರಿಸಲಾಗಿದೆ. ಔರಂಗಾಬಾದ್–ಚೋರ್ಡಹಾ ಆರು ಪಥಗಳ ಹೆದ್ದಾರಿಯನ್ನೂ ಲೋಕಾರ್ಪಣೆ ಮಾಡಲಾಗಿದೆ ಎಂದು ವಿವರಿಸಿದರು.

ವಿವಿಧ ಕ್ಷೇತ್ರಗಳ ಯೋಜನೆಗಳಿಗೆ ಚಾಲನೆ

ಬಿಹಾರದಲ್ಲಿ 15,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದ್ದಾರೆ. ರಸ್ತೆ, ಇಂಧನ, ನಗರ ಮೂಲಸೌಕರ್ಯ, ಜಲಸಂಪನ್ಮೂಲ, ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳ ಯೋಜನೆಗಳು ಇದರಲ್ಲಿ ಸೇರಿವೆ.

ಬಕ್ಸರ್ ಉಷ್ಣ ವಿದ್ಯುತ್ ಯೋಜನೆಯ 660 ಮೆಗಾವಾಟ್ ಸಾಮರ್ಥ್ಯದ ಎರಡನೇ ಘಟಕ ಸೇರಿದಂತೆ ಹಲವು ಯೋಜನೆಗಳನ್ನೂ ಉದ್ಘಾಟಿಸಲಾಗಿದೆ. ಈ ಯೋಜನೆಗಳು ಬಿಹಾರದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ನೆರವಾಗಲಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande