ಊರ ಜನರ ನಡಿಗೆ - ಮಕ್ಕಳ ಕಲಿಕೆಯ ಕಡೆಗೆ ಸಮುದಾಯ ಸಹಭಾಗಿತ್ವದ ಗಣಿತ ಚಟುವಟಿಕೆ
ಊರ ಜನರ ನಡಿಗೆ - ಮಕ್ಕಳ ಕಲಿಕೆಯ ಕಡೆಗೆ ಸಮುದಾಯ ಸಹಭಾಗಿತ್ವದ ಗಣಿತ ಚಟುವಟಿಕೆ
ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಷನ್ ಆಶ್ರಯದಲ್ಲಿ ಮಕ್ಕಳ ಗಣಿತ ಕಲಿಕೆಯ ಕಾರ್ಯಕ್ರಮ ನಡೆಯಿತು.


ಕೋಲಾರ, 21 ನವೆಂಬರ್ (ಹಿ.ಸ.)

ಅಕ್ಷರ ಫೌಂಡೇಶನ್ ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ ಊರ ಜನರ ನಡಿಗೆ ಮಕ್ಕಳ ಕಲಿಕೆಯ ಕಡೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಕ್ಷೇತ್ರ ಸಂಯೋಜಕ ಪ್ರಸನ್ನಕುಮಾರ್ ಕೆ.ಪಿ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳ ಗಣಿತ ಕಲಿಕೆಯ ಗುಣಮಟ್ಟ ಹಾಗೂ ಶೈಕ್ಷಣಿಕ ಪ್ರಗತಿಯನ್ನು ಸುಧಾರಿಸುವಲ್ಲಿ ಸಮುದಾಯದ ಸಕ್ರಿಯ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗಿದೆ.

ಈ ನಿಟ್ಟಿನಲ್ಲಿ ಗ್ರಾಮದ ತಾಯಂದಿರು, ಪೋಷಕರು, ಯುವಕರು ಹಾಗೂ ಯುವತಿಯರು ಸೇರಿದಂತೆ ಒಟ್ಟು೧೦೦ ಜನ ಸಮುದಾಯದ ಸದಸ್ಯರನ್ನು ಒಗ್ಗೂಡಿಸಿ, ವಿವಿಧ ಗಣಿತ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮುದಾಯದ ಸದಸ್ಯರಿಗೆ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಗುರುತಿಸಿ ಅಭಿನಂದನಾ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿವಿಧ ಗಣಿತ ಚಟುವಟಿಕೆಗಳು ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲಾ ಮಕ್ಕಳ ಗಣಿತ ಕಲಿಕಾ ಮಟ್ಟವನ್ನು ಸುಧಾರಿಸುವುದು, ಪೋಷಕರಲ್ಲಿ ಮಕ್ಕಳ ಶಿಕ್ಷಣದ ಕುರಿತು ಜವಾಬ್ದಾರಿ ಮತ್ತು ಅರಿವು ಮೂಡಿಸುವುದು ಹಾಗೂ ಸಮುದಾಯದ ಸದಸ್ಯರನ್ನು ಮಕ್ಕಳ ಕಲಿಕೆಗೆ ಮಾರ್ಗದರ್ಶಕರಾಗಿ ತೊಡಗಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ. ಅಕ್ಷರ ಫೌಂಡೇಶನ್ನ ಸಂಯೋಜಕರು ಹಾಗೂ ಸಮುದಾಯದ ಮಾರ್ಗದರ್ಶಕರ ಸಮನ್ವಯದೊಂದಿಗೆ ಪೋಷಕರ ಸಹಕಾರವನ್ನು ಪಡೆದು ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾಮಪಂಚಾಯತಿ ಮಾಜಿ ಸದಸ್ಯ ಮುನಿರಾಜು, ಗ್ರಾಮದ ಪೋಷಕರು, ಯುವಕರು ಹಾಗೂ ಯುವತಿಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅರಿವು ಮೂಡಿಸುವ ಈ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು. ಇಂತಹ ಕಾರ್ಯಕ್ರಮಗಳ ಮೂಲಕ ಗ್ರಾಮದ ಪ್ರತಿಯೊಬ್ಬರೂ ಮಕ್ಕಳ ಕಲಿಕೆಯ ಜವಾಬ್ದಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಶು ಸಖಿ ಮಮತಾ, ಗ್ರಾಮದ ಹಿರಿಯರು, ಪೋಷಕರು, ತಾಯಂದಿರು, ಯುವಕರು ಹಾಗೂ ಯುವತಿಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆಯನ್ನು ರೂಪಾ ಅವರು ನಿರ್ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande