ಅಭಿವೃದ್ಧಿ ನಿಗಮದ ಯೋಜನೆಗಳ ಸದ್ಬಳಕೆಗೆ ಎಂ. ರಾಮಪ್ಪ ಕರೆ
ಗದಗ, 21 ನವೆಂಬರ್ (ಹಿ.ಸ.) ಬೋವಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು. ಸಮಾಜದ ಬಡವರು, ನಿರುದ್ಯೋಗಿಗಳು ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಕಾರ್ಯನಿರ್ವಹಿಸುತ್ತಿದೆ ಎಂದು ನಿಗಮದ ಅಧ್ಯಕ್ಷ ಎಂ. ರಾಮಪ್ಪ ಹ
ಫೋಟೋ


ಗದಗ, 21 ನವೆಂಬರ್ (ಹಿ.ಸ.)

ಬೋವಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು. ಸಮಾಜದ ಬಡವರು, ನಿರುದ್ಯೋಗಿಗಳು ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಕಾರ್ಯನಿರ್ವಹಿಸುತ್ತಿದೆ ಎಂದು ನಿಗಮದ ಅಧ್ಯಕ್ಷ ಎಂ. ರಾಮಪ್ಪ ಹೇಳಿದರು.

ಗದಗ ನಗರದ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಸಮಗ್ರ ಅಭಿವೃದ್ಧಿಗಾಗಿ ನಿಗಮದ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅರ್ಹ ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

11.20 ಲಕ್ಷ ಬೋವಿ ಜನಸಂಖ್ಯೆ

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಬೋವಿ ಸಮುದಾಯದ ಜನಸಂಖ್ಯೆ ಸುಮಾರು 11.20 ಲಕ್ಷ ಇದೆ. ಸಮಾಜದ ಐತಿಹಾಸಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು 2016ರಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ನಿಗಮದ ಪ್ರತ್ಯೇಕ ಜಿಲ್ಲಾ ವ್ಯವಸ್ಥಾಪಕರ ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಆರು ಜಿಲ್ಲೆಗಳಲ್ಲಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ಜಿಲ್ಲೆಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಸ್ವಯಂ ಉದ್ಯೋಗಕ್ಕೆ ಸಾಲ, ಸಹಾಯಧನ

ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಹಣ್ಣು, ತರಕಾರಿ, ಮೀನು, ಮಾಂಸ ಮಾರಾಟ ಹಾಗೂ ಕುರಿ, ಮೇಕೆ, ಹಸು ಮತ್ತು ಇತರೆ ಜಾನುವಾರು ಸಾಕಾಣಿಕೆ ಸೇರಿದಂತೆ ವಿವಿಧ ಕಿರು ಉದ್ಯಮಗಳಿಗೆ 1 ಲಕ್ಷ ಘಟಕ ವೆಚ್ಚದಲ್ಲಿ ನೆರವು ನೀಡಲಾಗುತ್ತಿದೆ. ಇದರಲ್ಲಿ 50 ಸಾವಿರ ಸಹಾಯಧನ ಹಾಗೂ 50 ಸಾವಿರ ಸಾಲವಿದ್ದು, ಸಾಲಕ್ಕೆ ಶೇ.4 ಬಡ್ಡಿ ವಿಧಿಸಲಾಗುತ್ತದೆ. ಸಾಲವನ್ನು 36 ಸಮ ಕಂತುಗಳಲ್ಲಿ ಮರುಪಾವತಿಸಬೇಕು.

ಕುರಿ ಮತ್ತು ಮೇಕೆ ಸಾಕಾಣಿಕೆ ಯೋಜನೆಯಡಿ 10 ಹೆಣ್ಣು ಕುರಿ ಅಥವಾ ಮೇಕೆ ಹಾಗೂ ಒಂದು ಟಗರಿನೊಂದಿಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ. ಬ್ಯಾಂಕ್ ಸಹಯೋಗದ ಉದ್ಯಮಶೀಲತಾ ಯೋಜನೆಯಡಿ ಸರಕು ಸಾಗಣೆ ವಾಹನ, ಟ್ಯಾಕ್ಸಿ, ಫಾಸ್ಟ್ಫುಡ್ ಟ್ರಕ್, ಮೊಬೈಲ್ ಕಿಚನ್ ಹಾಗೂ ಹೈನುಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಸಹಾಯಧನ ನೀಡಲಾಗುತ್ತಿದೆ.

ಮಹಿಳೆಯರಿಗೆ ವಿಶೇಷ ಆದ್ಯತೆ

ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಕನಿಷ್ಠ 10 ಮಹಿಳಾ ಸದಸ್ಯರಿರುವ ಸ್ವಸಹಾಯ ಸಂಘಗಳಿಗೆ 5 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ. ಇದರಲ್ಲಿ 2.50 ಲಕ್ಷ ಸಹಾಯಧನ ಹಾಗೂ 2.50 ಲಕ್ಷ ಸಾಲ ಸೌಲಭ್ಯವಿದೆ. ಪ್ರತಿ ಸದಸ್ಯರಿಗೆ 25 ಸಾವಿರ ಸಹಾಯಧನ ಮತ್ತು 25 ಸಾವಿರ ಸಾಲ ನೀಡಲಾಗುತ್ತದೆ.

ಭೂ ಒಡೆತನ ಯೋಜನೆಯಡಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಿ ನೀಡುವ ಮೂಲಕ ಅವರನ್ನು ಭೂಮಾಲೀಕರನ್ನಾಗಿ ಮಾಡಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆಬಾವಿ, ಪಂಪ್ಸೆಟ್ ಹಾಗೂ ವಿದ್ಯುದ್ದೀಕರಣದ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಹಿಳೆಯರು ಮತ್ತು ಯುವತಿಯರಿಗೆ ಉದ್ಯೋಗಾಧಾರಿತ ಟೈಲರಿಂಗ್ ತರಬೇತಿಯನ್ನೂ ನೀಡಲಾಗುತ್ತಿದೆ.

54 ಫಲಾನುಭವಿಗಳಿಗೆ 54 ಲಕ್ಷ ನೆರವು

ಗದಗ ಜಿಲ್ಲೆಯಲ್ಲಿ 2022-23ರಿಂದ 2025-26ನೇ ಸಾಲಿನವರೆಗೆ ವಿವಿಧ ಸ್ವಯಂ ಉದ್ಯೋಗ, ಉದ್ಯಮಶೀಲತೆ ಹಾಗೂ ಆರ್ಥಿಕ ನೆರವಿನ ಯೋಜನೆಗಳಡಿ ಒಟ್ಟು 54 ಫಲಾನುಭವಿಗಳಿಗೆ 54 ಲಕ್ಷ ನೆರವು ನೀಡಲಾಗಿದೆ ಎಂದು ರಾಮಪ್ಪ ಮಾಹಿತಿ ನೀಡಿದರು.

ಸಮಾಜದ ಜನರು ಕೇವಲ ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳನ್ನೇ ಅವಲಂಬಿಸದೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿರುವ ಸೌಲಭ್ಯಗಳನ್ನೂ ಬಳಸಿಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬಡ ವಿದ್ಯಾರ್ಥಿಗಳಿಗೆ ವಸತಿ, ಉನ್ನತ ಶಿಕ್ಷಣ ಹಾಗೂ ವಿದೇಶಿ ಶಿಕ್ಷಣದ ಅವಕಾಶಗಳ ಕುರಿತು ಜಾಗೃತಿ ಮೂಡಿಸಬೇಕು. ಬ್ಯಾಂಕ್ ಸಾಲ ಪಡೆಯುವಲ್ಲಿ ದಾಖಲೆಗಳ ಕೊರತೆಯಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಂ.ಎನ್., ನಿಗಮದ ಪ್ರಧಾನ ವ್ಯವಸ್ಥಾಪಕ ಶಿವಸ್ವಾಮಿ, ರವಿ ಗುಂಜಿಕರ್ ಸೇರಿದಂತೆ ಬೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande