
ಕೋಲಾರ, 21 ನವೆಂಬರ್ (ಹಿ.ಸ.):
ನಗರದ ಹೊರವಲಯದ ಅರಹಳ್ಳಿ ಬಳಿಯ ಸರ್ಕಾರಿ ಕಾನೂನು ಕಾಲೇಜನ್ನು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವ ಉದ್ದೇಶದಿಂದ ಹಂತ ಹಂತವಾಗಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.
ಸರ್ಕಾರಿ ಕಾನೂನು ಕಾಲೇಜು ಆವರಣದಲ್ಲಿ ೬.೮ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡವನ್ನು ಶನಿವಾರ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಕಾಲೇಜಿಗೆ ಹಸ್ತಾಂತರಿಸಿ ಮಾತನಾಡಿದರು.
ಕಾಲೇಜಿನ ಕಟ್ಟಡದ ಗುಣಮಟ್ಟ, ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ, ಮೂಲಸೌಕರ್ಯ ಹಾಗೂ ಆವರಣದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ ಈ ಹೊಸ ಕಟ್ಟಡ ಜೊತೆಗೆ ಹೆಚ್ಚುವರಿಯಾಗಿ ೨.೫೦ ಕೋಟಿ ವೆಚ್ಚದಲ್ಲಿ ಮತ್ತೊಂದು ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಆರಂಭಿಸುವAತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಳೆಯ ಕಟ್ಟಡಕ್ಕೆ ಸುಮಾರು ?೫ ಲಕ್ಷ ವೆಚ್ಚದಲ್ಲಿ ದುರಸ್ತಿ ಹಾಗೂ ಸುಣ್ಣಬಣ್ಣ ಮಾಡಿಸಿ ನವೀಕರಿಸುವುದರ ಜೊತೆಗೆ ಕಾಲೇಜಿನ ಸುತ್ತಮುತ್ತ ಸ್ವಚ್ಛತೆ, ಕಾಂಕ್ರೀಟ್ ರಸ್ತೆ, ಆಟದ ಮೈದಾನ ನಿರ್ಮಾಣಕ್ಕೂ ಕ್ರಮ ಕೈಗೊಂಡು ಕಾನೂನು ಕಾಲೇಜಿನಲ್ಲಿ ಮೂರು ವರ್ಷದ ಎಲ್ಎಲ್ಬಿ ಹಾಗೂ ಎರಡು ವರ್ಷದ ಎಲ್ಎಲ್ಎಂ ಕೋರ್ಸ್ಗಳನ್ನು ಆರಂಭಿಸಲು ಕ್ರಮ ವಹಿಸಲಾಗುತ್ತಿದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಾನೂನು ಶಿಕ್ಷಣ ದೊರೆಯುವಂತೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾಲೇಜು ಕಾಲೇಜು ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಿಸುವಂತೆ ಸೂಚಿಸಿದರು.
ಹಿಂದಿನ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಕೋಲಾರ ಕ್ಷೇತ್ರದ ಕಾಲೇಜುಗಳ ಅಭಿವೃದ್ಧಿಗೆ ೧೦೦ ಕೋಟಿ ಅನುದಾನ ನೀಡಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವಷ್ಟು ಅನುದಾನ ಒದಗಿಸಲು ಸಿದ್ಧರಿದ್ದರಿಂದ ಅಷ್ಟು ಅನುದಾನ ಕೊಡಲು ಸಾಧ್ಯವಾಗಿತ್ತು, ಈಗಾಗಲೇ ೧೫೦ ಕೋಟಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದರೆ ಆರು ತಿಂಗಳೊಳಗೆ ಉದ್ದೇಶಿತ ಕಾಮಗಾರಿಗಳನ್ನು ಗುರುತಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಶಾಲೆಗಳ ದುರಸ್ತಿ, ಕಾಂಪೌAಡ್ ನಿರ್ಮಾಣ ಹಾಗೂ ಸುಣ್ಣಬಣ್ಣದಂತಹ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ೧೦ ಕೋಟಿ ಅನುದಾನ ಒದಗಿಸುವ ಮೂಲಕ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಕಾನೂನು ಕಾಲೇಜು ಪ್ರಾಂಶುಪಾಲ ಅಂಬೇಡ್ಕರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾರ್ಯಪಾಲಕ ಅಭಿಯಂತರರಾದ ಗೋವಿಂದಪ್ಪ , ಗುತ್ತಿಗೆದಾರ ಚಂದೃ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್