
ಕೋಲಾರ, 21 ನವೆಂಬರ್ (ಹಿ.ಸ.)
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಅಕ್ಷರ ದಾಸೋಹ ನೌಕರರು ಕನಿಷ್ಟ ೧೦೫೦೦ರೂಗಳ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.೨೬ ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ,ಕೋಲಾರ ಜಿಲ್ಲೆಗಳ ಗಡಿಯಾದ ರಾಷ್ಟಿಯ ಹೆದ್ದಾರಿ ಬಳಿಯ ರಾಮಸಂದ್ರ ಗೇಟ್ ಬಳಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಕ್ಷೇಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಸೇವಾ ಸಮಿತಿ ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಕ್ಷೇಮಾಭಿವೃದ್ಧಿ ಸಮಿತಿ ಈ ಹೋರಾಟವನ್ನು ಹಮ್ಮಿಕೊಂಡಿದ್ದು, ಸಮಿತಿಯ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ರಾಜ್ಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಶಿವಣ್ಣ, ರಾಜ್ಯ ಯುವ ಅಧ್ಯಕ್ಷ ರಾಮು ಶಿವಣ್ಣ, ಜಿಲ್ಲಾ ಪ್ರಧಾನಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ನೇತೃತ್ವ ವಹಿಸಿ ಹೋರಾಟಕ್ಕೆ ಕರೆ ನೀಡಿದ್ದು, ಅಂದು ಶಾಲೆಗಳಲ್ಲಿ ಬಿಸಿಯೂಟ ಬಂದ್ ಆಗಲಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ದುಡಿಯುತ್ತಿರುವ ಬಿಸಿಯೂಟ ನೌಕರರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು, ಅತ್ಯಂತ ಸಂಕಷ್ಟ ಎದುರಿಸುತ್ತಿರುವ ಈ ಮಹಿಳಾ ನೌಕರರಿಗೆ ಕನಿಷ್ಟ ೧೦,೫೦೦ ಗೌರವಧನ ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ, ಮಾಸಿಕ ಗೌರವಧನ ಹೆಚ್ಚಳ, ನಿವೃತ್ತಿ ಸೌಲಭ್ಯ, ಆರೋಗ್ಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಅಡುಗೆ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ನೌಕರರಿಗೆ ಸೇವಾ ಭದ್ರತೆ ಒದಗಿಸುವುದರ ಜತೆಗೆ ಕೆಲಸದ ಅವಧಿ ಮತ್ತು ಕೆಲಸದ ಹೊಣೆಗೆ ಅನುಗುಣವಾಗಿ ವೇತನ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.
ನಿವೃತ್ತಿಯ ಸಂದರ್ಭದಲ್ಲಿ ಸೂಕ್ತ ಆರ್ಥಿಕ ನೆರವು ಕಲ್ಪಿಸುವುದು, ಇಎಸ್ಐ ಮತ್ತು ಪಿಎಫ್ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಒಟ್ಟು ೧೨ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಸಮಿತಿ ಒತ್ತಾಯಿಸಿ ಈ ಹೋರಾಟಕ್ಕೆ ಕರೆ ನೀಡಿದೆ.
ನವೆಂಬರ್ ೨೬ರಂದು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅಕ್ಷರ ದಾಸೋಹ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದು, ಈಗಾಗಲೇ ನ.೨೬ರಂದು ಶಾಲೆಗಳಲ್ಲಿ ಬಿಸಿಯೂಟ ಬಂದ್ ಮಾಡಲು ಕರೆ ನೀಡಿದ್ದು, ಸಂವಿಧಾನ ದಿನಾಚರಣೆ ಇರುವ ಆ ದಿನ ಮಕ್ಕಳ ಬಿಸಿಯೂಟಕ್ಕೆ ಕುತ್ತು ಬರಲಿದೆ ಎಂಬ ಆತಂಕ ಶಾಲೆಗಳ ಮುಖ್ಯ ಶಿಕ್ಷಕರದ್ದಾಗಿದೆ.
ಅತ್ಯಂತ ಹೀನಾಯ ಸ್ಥಿತಿಯಲ್ಲಿ ದುಡಿಯುತ್ತಿರುವ ಈ ನೌಕರರು ಲಕ್ಷಾಂತರ ಮಕ್ಕಳಿಗೆ ಬಿಸಿಯೂಟ ಬಡಿಸುವ ಅನ್ನಪೂರ್ಣೇಶ್ವರಿಯಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ನೀಡುತ್ತಿರುವ ಗೌರವಧನ ಅವರ ಜೀವನೋಪಾಯಕ್ಕೆ ಸಾಲದಾಗಿದೆ. ಆದ್ದರಿಂದ ಅವರ ಬೇಡಿಕೆ ಈಡೇರಿಸಲಿ ಎಂಬುದು ಶಾಲಾಭಿವೃದ್ದಿ ಸಮಿತಿಯ ಸದಸ್ಯರದ್ದು ಹಾಗೂ ಪೋಷಕರ ಆಗ್ರಹವಾಗಿದೆ.
ಸಮವಸ್ತç ನೀಡಬೇಕು, ಯಾವುದೇ ಕಾರಣಕ್ಕೂ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯಬಾರದು, ಅವರನ್ನು ಡಿ ಗ್ರೂಪ್ ನೌಕರರಾಗಿ ಪರಿಗಣಿಸಿದರೆ ಅವರು ಶಾಲೆಯ ಆವರಣವನ್ನು ಸ್ವಚ್ಚಗೊಳಿಸುವ ಜವಾಬ್ದಾರಿಯನ್ನು ನಿರ್ವನಿಸಲು ಸಿದ್ದರಾಗಿರುವುದರಿಂದ ಶಾಲೆಗಳಲ್ಲಿನ ಡಿ.ದರ್ಜೆ ನೌಕರರ ಕೊರತೆ ನೀಗಿಸಿದಂತೆಯೂ ಆಗುತ್ತದೆ ಎಂಬುದು ಶಿಕ್ಷಕರ ಆಶಯವೂ ಆಗಿದೆ.
ಈಗಾಗಲೇ ಶಾಲೆಗಳಲ್ಲಿ ಡಿ ದರ್ಜೆ ನೌಕರರೂ ಇಲ್ಲ, ಮಕ್ಕಳಿಂದ ಯಾವುದೇ ಸ್ವಚ್ಚತ ಕೆಲಸ ಮಾಡಿಸುವಂತೆಯೂ ಇಲ್ಲ ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್