ಒಂಬತ್ತು ತಿಂಗಳೊಳಗೆ ದೇಶದಲ್ಲಿ ಒಂದು ಕೋಟಿಗೂ ಅಧಿಕ ಎಚ್.ಪಿ.ವಿ ಲಸಿಕೆ ಡೋಸ್ ವಿತರಣೆ
ಗುರಿಯ ಶೇ.87ರಷ್ಟು ಸಾಧನೆ; ಕರ್ನಾಟಕದಲ್ಲಿ ಶೇ.93.16ರಷ್ಟು ಲಸಿಕೆ ವಿತರಣೆ ನವದೆಹಲಿ, 21 ನವೆಂಬರ್ (ಹಿ.ಸ.): ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನದಡಿ ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ಲ
नौ महीने से कम समय में देश में एचपीवी टीके की एक करोड़ से अधिक खुराक दी गईं


ಗುರಿಯ ಶೇ.87ರಷ್ಟು ಸಾಧನೆ; ಕರ್ನಾಟಕದಲ್ಲಿ ಶೇ.93.16ರಷ್ಟು ಲಸಿಕೆ ವಿತರಣೆ

ನವದೆಹಲಿ, 21 ನವೆಂಬರ್ (ಹಿ.ಸ.):

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನದಡಿ ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ. ಅಭಿಯಾನದ ಒಟ್ಟು ಗುರಿಯಲ್ಲಿ ಶೇ.87ರಷ್ಟು ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿಯಲ್ಲಿ ದೇಶವ್ಯಾಪಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದರಡಿ 14 ವರ್ಷದ ಬಾಲಕಿಯರಿಗೆ ಪೋಷಕರ ಒಪ್ಪಿಗೆಯೊಂದಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮತ್ತು ಸ್ವಯಂಪ್ರೇರಿತವಾಗಿ ಎಚ್‌ಪಿವಿ ಲಸಿಕೆಯ ಒಂದು ಡೋಸ್ ನೀಡಲಾಗುತ್ತಿದೆ. 2021ರ ಜನಸಂಖ್ಯಾ ಅಂಕಿಅಂಶಗಳ ಆಧಾರದಲ್ಲಿ ವಾರ್ಷಿಕವಾಗಿ ಸುಮಾರು 1.2 ಕೋಟಿ ಬಾಲಕಿಯರಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ.

ಗುಜರಾತ್, ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಿಜೋರಾಂ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳು ತಮ್ಮ ನಿಗದಿತ ಗುರಿಯ ಶೇ.100ರಷ್ಟು ಲಸಿಕೆ ವಿತರಣೆ ಪೂರ್ಣಗೊಳಿಸಿವೆ. ಅಸ್ಸಾಂ ಶೇ.95.63, ತೆಲಂಗಾಣ ಶೇ.95.28, ಕರ್ನಾಟಕ ಶೇ.93.16 ಮತ್ತು ಉತ್ತರಾಖಂಡ ಶೇ.90.17ರಷ್ಟು ಸಾಧನೆ ಮಾಡಿವೆ.

ಛತ್ತೀಸ್‌ಗಢದಲ್ಲಿ ಶೇ.86.21, ರಾಜಸ್ಥಾನದಲ್ಲಿ ಶೇ.85.23, ಕೇರಳದಲ್ಲಿ ಶೇ.77.02, ತಮಿಳುನಾಡಿನಲ್ಲಿ ಶೇ.76.12, ಒಡಿಶಾದಲ್ಲಿ ಶೇ.74.90 ಹಾಗೂ ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುನಲ್ಲಿ ಶೇ.72.99ರಷ್ಟು ಲಸಿಕೆ ವಿತರಣೆ ನಡೆದಿದೆ.

ಒಟ್ಟು ಲಸಿಕೆ ವಿತರಣೆಯ ಸಂಖ್ಯೆಯಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಅಲ್ಲಿ 29.33 ಲಕ್ಷಕ್ಕೂ ಅಧಿಕ ಬಾಲಕಿಯರಿಗೆ ಲಸಿಕೆ ನೀಡಲಾಗಿದೆ. ಬಿಹಾರದಲ್ಲಿ 13.70 ಲಕ್ಷಕ್ಕೂ ಅಧಿಕ ಹಾಗೂ ಗುಜರಾತ್‌ನಲ್ಲಿ 7.75 ಲಕ್ಷಕ್ಕೂ ಅಧಿಕ ಬಾಲಕಿಯರಿಗೆ ಲಸಿಕೆ ಹಾಕಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ, ಜಿಲ್ಲಾಡಳಿತಗಳು, ಆರೋಗ್ಯ ಸಂಸ್ಥೆಗಳು ಹಾಗೂ ಸ್ಥಳೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರ ಶ್ರಮದಿಂದ ಅಭಿಯಾನ ಪ್ರಗತಿ ಸಾಧಿಸಿದೆ. ಗ್ರಾಮೀಣ, ನಗರ ಮತ್ತು ದೂರದ ಪ್ರದೇಶಗಳಿಗೂ ಲಸಿಕೆ ತಲುಪಿಸಲು ರಾಜ್ಯಗಳು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕ್ರಮ ಕೈಗೊಂಡಿವೆ. ಬಿಹಾರ, ತಮಿಳುನಾಡು ಮತ್ತು ಸಿಕ್ಕಿಂ ರಾಜ್ಯಗಳ ವಿಶೇಷ ಉಪಕ್ರಮಗಳನ್ನೂ ರಾಷ್ಟ್ರೀಯ ಅಭಿಯಾನದೊಂದಿಗೆ ಸಂಯೋಜಿಸಲಾಗಿದೆ.

ಡಿಜಿಟಲ್ ವೇದಿಕೆಯಿಂದ ಮೇಲ್ವಿಚಾರಣೆ

ಲಸಿಕಾ ಅಭಿಯಾನದ ಅನುಷ್ಠಾನದಲ್ಲಿ ಯು-ವಿನ್ ಡಿಜಿಟಲ್ ವೇದಿಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಮೂಲಕ ಲಸಿಕೆ ವಿತರಣೆಯ ಪ್ರಗತಿಯನ್ನು ತಕ್ಷಣದ ಆಧಾರದಲ್ಲಿ ಪರಿಶೀಲಿಸುವುದು, ಫಲಾನುಭವಿಗಳ ದಾಖಲೆ ನಿರ್ವಹಣೆ ಮತ್ತು ಲಸಿಕಾ ಪ್ರಮಾಣಪತ್ರ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಪೋಷಕರು ತಮ್ಮ ಪುತ್ರಿಯರಿಗೆ ಲಸಿಕೆ ಹಾಕಿಸಲು ಈ ವೇದಿಕೆಯ ಮೂಲಕ ಸಮಯವನ್ನೂ ಕಾಯ್ದಿರಿಸಬಹುದು.

ಜಿಲ್ಲಾಮಟ್ಟದಲ್ಲಿ ಲಸಿಕೆ ವಿತರಣೆ ಕಡಿಮೆಯಾಗಿರುವ ಪ್ರದೇಶಗಳು ಹಾಗೂ ಲಸಿಕೆ ಪಡೆಯದೆ ಉಳಿದಿರುವ ಅರ್ಹ ಬಾಲಕಿಯರನ್ನು ಗುರುತಿಸಲು ಈ ವ್ಯವಸ್ಥೆ ನೆರವಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಮಾನವ ಪ್ಯಾಪಿಲೋಮಾ ವೈರಸ್‌ನ (ಎಚ್‌ಪಿವಿ) ಕೆಲವು ಅಪಾಯಕಾರಿ ಪ್ರಭೇದಗಳ ನಿರಂತರ ಸೋಂಕು ಗರ್ಭಕಂಠದ ಕ್ಯಾನ್ಸರ್‌ನ ಬಹುತೇಕ ಪ್ರಕರಣಗಳಿಗೆ ಕಾರಣವಾಗುತ್ತದೆ. ಈ ಸೋಂಕು ಮತ್ತು ಅದರಿಂದ ಉಂಟಾಗುವ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಎಚ್‌ಪಿವಿ ಲಸಿಕೆ ಪರಿಣಾಮಕಾರಿ ತಡೆಗಟ್ಟುವ ಕ್ರಮಗಳಲ್ಲಿ ಒಂದಾಗಿದೆ. ಜಾಗತಿಕವಾಗಿ ಈವರೆಗೆ 80 ಕೋಟಿಗೂ ಅಧಿಕ ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ನಿಗದಿತ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಲಸಿಕಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಅಪರೂಪದ ಅಡ್ಡಪರಿಣಾಮಗಳು ಕಾಣಿಸಿಕೊಂಡಲ್ಲಿ ತಕ್ಷಣ ಚಿಕಿತ್ಸೆ ಒದಗಿಸಲು ಲಸಿಕಾ ಕೇಂದ್ರಗಳನ್ನು 24 ಗಂಟೆಗಳ ಆರೋಗ್ಯ ಸೇವೆ ಲಭ್ಯವಿರುವ ಆಸ್ಪತ್ರೆಗಳೊಂದಿಗೆ ಸಂಪರ್ಕಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande