ಆರ್ಎಸ್ಎಸ್ ಕಾರ್ಯಕಾರಿ ಮಂಡಳಿ ಸಭೆ ಆರಂಭ: ಸಂಘಟನಾತ್ಮಕ ಬದಲಾವಣೆ, ಡಿಜಿಟಲ್ ಸವಾಲುಗಳ ಬಗ್ಗೆ ಮಹತ್ವದ ಚರ್ಚೆ
ಇಂದೋರ್, 02 ನವೆಂಬರ್ (ಹಿ.ಸ.): ಶತಮಾನೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಸಂಪರ್ಕ ವಿಸ್ತರಣೆ, ಸಂಘಟನೆಯ ಬಲವರ್ಧನೆ ಮತ್ತು ಸಾಮಾಜಿಕ ಸಹಭಾಗಿತ್ವಕ್ಕೆ ಒತ್ತು ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌), ಮುಂದಿನ ವರ್ಷಗಳ ಕಾರ್ಯಯೋಜನೆ ರೂಪಿಸುವ ನಿಟ್ಟಿನಲ್ಲಿ ಮೂರು ದಿನಗಳ ಮಹತ್ವದ ಚಿಂ
मध्य प्रदेश, इंदौर के डेली कॉलेज में शुरू हुई अखिल भारतीय कार्यकारी मंडल की बैठक


मध्य प्रदेश, इंदौर के डेली कॉलेज में शुरू हुई अखिल भारतीय कार्यकारी मंडल की बैठक


ಇಂದೋರ್, 02 ನವೆಂಬರ್ (ಹಿ.ಸ.):

ಶತಮಾನೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಸಂಪರ್ಕ ವಿಸ್ತರಣೆ, ಸಂಘಟನೆಯ ಬಲವರ್ಧನೆ ಮತ್ತು ಸಾಮಾಜಿಕ ಸಹಭಾಗಿತ್ವಕ್ಕೆ ಒತ್ತು ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌), ಮುಂದಿನ ವರ್ಷಗಳ ಕಾರ್ಯಯೋಜನೆ ರೂಪಿಸುವ ನಿಟ್ಟಿನಲ್ಲಿ ಮೂರು ದಿನಗಳ ಮಹತ್ವದ ಚಿಂತನ ಮಂಥನ ಆರಂಭಿಸಿದೆ.

ಮಧ್ಯಪ್ರದೇಶದ ಇಂದೋರ್‌ನ ಡೈಲಿ ಕಾಲೇಜಿನಲ್ಲಿ ಸೋಮವಾರ ಆರಂಭವಾದ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಆರು ಮಂದಿ ಸಹ ಸರಕಾರ್ಯವಾಹರು ಸೇರಿದಂತೆ ದೇಶದ ವಿವಿಧ ಭಾಗಗಳ ಸುಮಾರು 408 ಹಿರಿಯ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ನವೆಂಬರ್ 4ರವರೆಗೆ ನಡೆಯಲಿರುವ ಸಭೆಯಲ್ಲಿ ಶತಮಾನೋತ್ಸವದ ಅಂಗವಾಗಿ ಕೈಗೊಂಡ ಕಾರ್ಯಕ್ರಮಗಳ ಪರಾಮರ್ಶೆ, ಸಂಘಟನೆಯ ಭವಿಷ್ಯದ ಸ್ವರೂಪ, ಸಾಮಾಜಿಕ ಸವಾಲುಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಯಲಿದೆ.

ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್, ಶತಮಾನೋತ್ಸವದ ಕಾರ್ಯಕ್ರಮಗಳ ಉದ್ದೇಶ ಸಂಘಟನೆಯ ವ್ಯಾಪ್ತಿಯನ್ನು ವಿಸ್ತರಿಸುವುದರ ಜತೆಗೆ ಸಮಾಜದ ವಿವಿಧ ವರ್ಗಗಳನ್ನು ಸಂಪರ್ಕಿಸುವುದಾಗಿದೆ ಎಂದು ತಿಳಿಸಿದ್ದರು. ಈ ಕಾರ್ಯಕ್ರಮಗಳಿಂದ ದೊರೆತ ಅನುಭವಗಳ ಆಧಾರದಲ್ಲಿ ಮುಂದಿನ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದರು.

ದೇಶದ 11 ಕ್ಷೇತ್ರಗಳು ಮತ್ತು 46 ಪ್ರಾಂತಗಳ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘಟನೆಯ ಚಟುವಟಿಕೆಗಳು, ಸಾಮಾಜಿಕ ಸಹಭಾಗಿತ್ವ ಮತ್ತು ಕಾರ್ಯವ್ಯಾಪ್ತಿಯಲ್ಲಿ ಆಗಿರುವ ವಿಸ್ತರಣೆಯನ್ನು ಸಭೆಯಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದೆ.

13 ಸಾವಿರಕ್ಕೂ ಅಧಿಕ ಹೊಸ ದೈನಂದಿನ ಶಾಖೆಗಳು

ಸಂಘದ ವಿಸ್ತರಣೆಯಲ್ಲಿ ದೈನಂದಿನ ಶಾಖೆಗಳ ಹೆಚ್ಚಳ ಪ್ರಮುಖ ಬೆಳವಣಿಗೆಯಾಗಿದೆ. ಸುನಿಲ್ ಅಂಬೇಕರ್ ನೀಡಿರುವ ಮಾಹಿತಿಯಂತೆ, ದೇಶಾದ್ಯಂತ ದೈನಂದಿನ ಶಾಖೆಗಳ ಸಂಖ್ಯೆ 1,01,151ಕ್ಕೆ ಏರಿಕೆಯಾಗಿದೆ. ವಾರದ ಮತ್ತು ಮಾಸಿಕ ಸಭೆಗಳು ಸೇರಿದಂತೆ ಸಂಘದ ಚಟುವಟಿಕೆಗಳು ಒಟ್ಟು 1,10,849 ಸ್ಥಳಗಳಿಗೆ ತಲುಪಿವೆ. 2025ರ ಅಕ್ಟೋಬರ್‌ಗೆ ಹೋಲಿಸಿದರೆ 13 ಸಾವಿರಕ್ಕೂ ಅಧಿಕ ಹೊಸ ದೈನಂದಿನ ಶಾಖೆಗಳು ಆರಂಭವಾಗಿವೆ.

ಶತಮಾನೋತ್ಸವಕ್ಕೂ ಮುನ್ನ ಮೂರು ವರ್ಷಗಳ ಕಾಲ ಸಂಘಟನೆಯ ಕಾರ್ಯವ್ಯಾಪ್ತಿ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಹೊಸ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸುವುದು, ಸ್ವಯಂಸೇವಕರ ಸಂಖ್ಯೆ ಮತ್ತು ಸಕ್ರಿಯತೆಯನ್ನು ಹೆಚ್ಚಿಸುವುದು ಹಾಗೂ ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಬೆಳೆಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಈ ಪ್ರಯತ್ನಗಳ ಫಲಿತಾಂಶ, ಮುಂದಿನ ದಿನಗಳಲ್ಲಿ ವಿಸ್ತರಣೆಗೆ ಆದ್ಯತೆ ನೀಡಬೇಕಾದ ಕ್ಷೇತ್ರಗಳು ಮತ್ತು ಶಾಖೆಗಳ ಕಾರ್ಯಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತಿದೆ.

65,660 ಹಿಂದೂ ಸಮ್ಮೇಳನಗಳ ಆಯೋಜನೆ

ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ 65,660 ಹಿಂದೂ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಈ ಮೂಲಕ ಸಮಾಜದ ವಿವಿಧ ವರ್ಗಗಳೊಂದಿಗೆ ಸಂವಾದ ನಡೆಸುವ ಪ್ರಯತ್ನ ಮಾಡಲಾಗಿದೆ. ಮನೆಮನೆ ಸಂಪರ್ಕ ಅಭಿಯಾನ ಮತ್ತು ಸೇವಾ ಚಟುವಟಿಕೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದ ಬಗ್ಗೆಯೂ ಸಭೆಯಲ್ಲಿ ಪರಾಮರ್ಶೆ ನಡೆಯಲಿದೆ.

ಮಹಿಳೆಯರು, ಯುವಕರು ಮತ್ತು ಯುವತಿಯರು ಮನೆಮನೆ ಸಂಪರ್ಕ ಅಭಿಯಾನ, ಜನಗೋಷ್ಠಿಗಳು ಹಾಗೂ ಹಿಂದೂ ಸಮ್ಮೇಳನಗಳಲ್ಲಿ ಗಮನಾರ್ಹವಾಗಿ ಪಾಲ್ಗೊಂಡಿದ್ದಾರೆ. ವಿಶ್ವವಿದ್ಯಾಲಯ ಆವರಣಗಳು, ಗ್ರಾಮೀಣ ಪ್ರದೇಶಗಳು ಮತ್ತು ನಗರಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳ ಅನುಭವದ ಆಧಾರದಲ್ಲಿ ಮಹಿಳೆಯರು ಮತ್ತು ಯುವಜನರಿಗಾಗಿ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.

ಸಂಘಟನಾತ್ಮಕ ಪುನರ್‌ರಚನೆಗೆ ಒತ್ತು

ಇಂದೋರ್ ಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಸಂಘಟನೆಯ ಆಡಳಿತಾತ್ಮಕ ಮತ್ತು ಕಾರ್ಯನಿರ್ವಹಣಾ ರಚನೆಯಲ್ಲಿ ಉದ್ದೇಶಿತ ಬದಲಾವಣೆಗಳೂ ಸೇರಿವೆ. ಈ ಕುರಿತು ಈಗಾಗಲೇ ಚರ್ಚೆಗಳು ನಡೆದಿದ್ದು, ಪ್ರಸ್ತಾವಿತ ಬದಲಾವಣೆಗಳ ಸ್ವರೂಪ ಮತ್ತು ಅನುಷ್ಠಾನದ ದಿಕ್ಕಿನ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.

ಮುಂದಿನ ಮಾರ್ಚ್‌ನಲ್ಲಿ ನಾಗಪುರದಲ್ಲಿ ನಡೆಯಲಿರುವ ಅಖಿಲ ಭಾರತ ಪ್ರತಿನಿಧಿ ಸಭೆಗೂ ಮುನ್ನ ಜಿಲ್ಲಾ, ವಿಭಾಗ, ಪ್ರಾಂತ ಮತ್ತು ಕ್ಷೇತ್ರ ಮಟ್ಟದಲ್ಲಿ ಸಂಘಟನಾತ್ಮಕ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಇದೇ ಪ್ರಕ್ರಿಯೆಯಲ್ಲಿ ಸರಕಾರ್ಯವಾಹರ ಆಯ್ಕೆಯೂ ಪ್ರಸ್ತಾಪದಲ್ಲಿದೆ. ಹೀಗಾಗಿ ಇಂದೋರ್‌ನ ಮೂರು ದಿನಗಳ ಸಭೆ ಸಂಘದ ಮುಂದಿನ ಸಂಘಟನಾತ್ಮಕ ಕಾರ್ಯವೈಖರಿಯ ದೃಷ್ಟಿಯಿಂದ ಮಹತ್ವ ಪಡೆದಿದೆ.

ಸಾಮಾಜಿಕ ಸವಾಲುಗಳು, ಜಾಗತಿಕ ಸಂವಾದಕ್ಕೂ ಆದ್ಯತೆ

ಸಾಮಾಜಿಕ ಸಾಮರಸ್ಯ, ಪರಿಸರಸ್ನೇಹಿ ಜೀವನಶೈಲಿ, ಕುಟುಂಬ ಪ್ರಬೋಧನ, ಸ್ವಪ್ರಜ್ಞೆ ಮತ್ತು ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆಯ ಐದು ವಿಷಯಗಳನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವ ಪ್ರಯತ್ನಗಳ ಬಗ್ಗೆಯೂ ಚರ್ಚೆಯಾಗಲಿದೆ. ಮನೆಮನೆ ಸಂಪರ್ಕ, ಸಮ್ಮೇಳನಗಳು ಮತ್ತು ಸಾಮಾಜಿಕ ಸಂಘಟನೆಗಳ ಸಹಕಾರದೊಂದಿಗೆ ಹೊಸ ಅಭಿಯಾನಗಳನ್ನು ರೂಪಿಸುವ ಉದ್ದೇಶವಿದೆ. ಸಂತ ರವಿದಾಸರ 650ನೇ ಜಯಂತಿ ಕಾರ್ಯಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.

ಇದರ ಜತೆಗೆ ರಾಷ್ಟ್ರೀಯ ಭದ್ರತೆ, ಮಾದಕ ವಸ್ತುಗಳ ಹಾವಳಿ, ಡಿಜಿಟಲ್ ಮಾಧ್ಯಮಗಳಲ್ಲಿ ಹರಡುತ್ತಿರುವ ವಿಷಯಗಳು ಮತ್ತು ಜಾಗತಿಕ ಪರಿಸ್ಥಿತಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕ, ಕೆನಡಾ ಮತ್ತು ಬ್ರಿಟನ್ ಪ್ರವಾಸದ ಸಂದರ್ಭದಲ್ಲಿ ನಡೆಸಿದ ಸಂವಾದಗಳ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಿದ್ದಾರೆ. ಹಿಂದೂತ್ವದ ಪರಿಕಲ್ಪನೆ, ಭಾರತದ ಚಿಂತನೆ ಮತ್ತು ಜಾಗತಿಕ ಕಲ್ಯಾಣದಲ್ಲಿ ಭಾರತದ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಲ್ಲಿನ ಪ್ರಮುಖರೊಂದಿಗೆ ನಡೆದ ಸಂವಾದವನ್ನು ಮುಂದುವರಿಸುವ ಹಾಗೂ ಅಂತಾರಾಷ್ಟ್ರೀಯ ಸಂಪರ್ಕ ವಿಸ್ತರಿಸುವ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯಲಿದೆ.

ಶತಮಾನೋತ್ಸವದ ಸಂದರ್ಭದಲ್ಲಿ ಹಿಂದೂತ್ವ ಎಂದರೇನು, ಭಾರತವೆಂದರೇನು, ಭವಿಷ್ಯದ ಭಾರತದ ದಿಕ್ಕು ಯಾವುದು ಮತ್ತು ಸಮಾಜದಲ್ಲಿ ಗೊಂದಲ ಮೂಡಿಸುವ ಅಂಶಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ಪ್ರಶ್ನೆಗಳು ಸಂಘದ ಚಿಂತನೆಯ ಕೇಂದ್ರಬಿಂದುವಾಗಿವೆ ಎಂದು ಸುನಿಲ್ ಅಂಬೇಕರ್ ಈ ಹಿಂದೆ ತಿಳಿಸಿದ್ದರು.

ಸಭೆಯ ಕೊನೆಯ ದಿನವಾದ ನವೆಂಬರ್ 4ರಂದು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸುದ್ದಿಗೋಷ್ಠಿ ನಡೆಸಿ, ಸಭೆಯ ಚರ್ಚೆಗಳು, ಶತಮಾನೋತ್ಸವದ ಕಾರ್ಯಕ್ರಮಗಳ ಪರಾಮರ್ಶೆ ಮತ್ತು ಮುಂದಿನ ಕಾರ್ಯಯೋಜನೆ ಕುರಿತು ವಿವರ ನೀಡುವ ನಿರೀಕ್ಷೆಯಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande