ಪ್ರಧಾನಿ ಮೋದಿ ಸರಕಾರದಿಂದ ಬಾಂಬ್, ಗುಂಡಿನ ಸದ್ದು ಅಡಗಿಸಿ ಬುಲೆಟ್ ರೈಲುಗಳ ಯುಗಕ್ಕೆ ನಾಂದಿ: ಪ್ರಲ್ಹಾದ ಜೋಶಿ
ಬೆಂಗಳೂರು, 01 ನವೆಂಬರ್ (ಹಿ.ಸ.): ದೇಶದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದಕರ ಬಾಂಬ್‌ ಮತ್ತು ಗುಂಡಿನ ಸದ್ದಡಗಿಸಿ ಬುಲೆಟ್ ರೈಲುಗಳ ಯುಗಕ್ಕೆ ನಾಂದಿ ಹಾಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ


ಬೆಂಗಳೂರು, 01 ನವೆಂಬರ್ (ಹಿ.ಸ.):

ದೇಶದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದಕರ ಬಾಂಬ್‌ ಮತ್ತು ಗುಂಡಿನ ಸದ್ದಡಗಿಸಿ ಬುಲೆಟ್ ರೈಲುಗಳ ಯುಗಕ್ಕೆ ನಾಂದಿ ಹಾಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಲ್ಲಿ ಭಾನುವಾರ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈಲು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ 'ಕವಚ್‌' ಸ್ವಯಂಚಾಲಿತ ರೈಲು ರಕ್ಷಣಾ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ರೈಲು ಅಪಘಾತಗಳನ್ನು ತಡೆಯುವಲ್ಲಿ ಈ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ ಎಂದರು.

ದೇಶಾದ್ಯಂತ ವಂದೇ ಭಾರತ್ ರೈಲುಗಳ ಸೇವೆ ವಿಸ್ತರಣೆಯಾಗಿದ್ದು, ಈಗಾಗಲೇ 150ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿವೆ. ರೈಲ್ವೆ ಸಾರಿಗೆಯಲ್ಲಿ ವೇಗ, ಸುರಕ್ಷತೆ ಮತ್ತು ಆಧುನಿಕ ಸೌಲಭ್ಯಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಮತ್ತು ಮುಂಬೈ ದೇಶದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದು, ಇವೆರಡರ ನಡುವಿನ ಸಂಪರ್ಕಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಮಹತ್ವದ ಸೇರ್ಪಡೆಯಾಗಲಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸುಮಾರು 1,118 ಕಿ.ಮೀ. ದೂರವನ್ನು ಕೇವಲ 16 ಗಂಟೆಗಳಲ್ಲಿ ಕ್ರಮಿಸಲಿದೆ. ಇದರಿಂದ ಪ್ರಯಾಣದ ಅವಧಿಯಲ್ಲಿ ಸುಮಾರು ಅರ್ಧದಷ್ಟು ಸಮಯ ಉಳಿತಾಯವಾಗಲಿದೆ ಎಂದು ಹೇಳಿದರು.

ಕರ್ನಾಟಕಕ್ಕೆ ಹೈಸ್ಪೀಡ್ ರೈಲು ಕಾರಿಡಾರ್

ಕರ್ನಾಟಕದಲ್ಲಿಯೂ ಅತಿ ವೇಗದ ರೈಲು ಕಾರಿಡಾರ್‌ಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ತುಮಕೂರು, ಹಾವೇರಿ, ರಾಣೆಬೆನ್ನೂರು ಮತ್ತು ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗಳಿವೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. 2008ರಲ್ಲಿ ರಾಜ್ಯಕ್ಕೆ ಸುಮಾರು 700 ಕೋಟಿ ರೂ. ರೈಲ್ವೆ ಅನುದಾನ ನೀಡಲಾಗುತ್ತಿತ್ತು. ಆದರೆ ಈಗ ವಾರ್ಷಿಕವಾಗಿ 7,000ರಿಂದ 8,000 ಕೋಟಿ ರೂ.ವರೆಗೆ ಅನುದಾನ ಒದಗಿಸಲಾಗುತ್ತಿದೆ ಎಂದರು.

2026-27ನೇ ಸಾಲಿನಲ್ಲಿ ಕರ್ನಾಟಕಕ್ಕೆ 7,748 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ರಾಜ್ಯದ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ತಾಂತ್ರಿಕ ಹಿನ್ನೆಲೆ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅವರು ರೈಲ್ವೆ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದರು.

170 ಗಿಗಾವ್ಯಾಟ್‌ ಮೀರಿದ ಸೌರಶಕ್ತಿ ಸಾಮರ್ಥ್ಯ

ದೇಶದ ಸೌರಶಕ್ತಿ ಉತ್ಪಾದನೆಯ ಪ್ರಗತಿಯನ್ನು ಉಲ್ಲೇಖಿಸಿದ ಪ್ರಲ್ಹಾದ ಜೋಶಿ, ಹಿಂದೆ ಕೇವಲ 2.6 ಗಿಗಾವ್ಯಾಟ್‌ ಇದ್ದ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ ಈಗ ಸುಮಾರು 170 ಗಿಗಾವ್ಯಾಟ್‌ ದಾಟಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ. ಮೋಹನ್, ಡಾ. ಸಿ.ಎನ್. ಮಂಜುನಾಥ್, ತೇಜಸ್ವಿ ಸೂರ್ಯ, ಲೆಹರ್ ಸಿಂಗ್ ಸಿರೋಯ, ಜಗ್ಗೇಶ್, ಮಾಜಿ ಸಂಸದ ಉಮೇಶ ಜಾಧವ್ ಸೇರಿದಂತೆ ಹಲವು ಗಣ್ಯರು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande