
ಬೆಂಗಳೂರು, 19 ನವೆಂಬರ್ (ಹಿ.ಸ.):
ಜಗಜ್ಯೋತಿ ಬಸವಣ್ಣನವರ ಗೌರವ ಮತ್ತು ಚಿಂತನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಮಂಡಿಸಲಾಗಿದೆ ಎಂಬ ಆರೋಪ ಕೇಳಿಬಂದಿರುವ ಕೃತಿಕಾರ ರವಿ ಹಂಜ್ ಅವರ ವಿವಾದಾತ್ಮಕ ಕೃತಿಯ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಸದ್ಯ ಚರ್ಚೆಯಲ್ಲಿರುವ ಈ ಕೃತಿಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಲಿಂಗಭೇದ, ವರ್ಣಭೇದ ಹಾಗೂ ವರ್ಗಭೇದ ರಹಿತವಾದ ಸಮಾಜ ನಿರ್ಮಾಣದ ಬೋಧನೆ ಮಾಡಿದ ಜಗಜ್ಯೋತಿ ಬಸವಣ್ಣನವರು ವೀರಶೈವ ಲಿಂಗಾಯತ ಸಮುದಾಯದ ಅಸ್ಮಿತೆಯಾಗಿದ್ದಾರೆ.
ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಚಿಂತನೆಗಳು ಮತ್ತು ಅವರ ಬದುಕಿನ ಸಂದೇಶಗಳು ಕಾಲಾತೀತವಾದುದು. ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ಅಥವಾ ಕೃತಿಗಳನ್ನು ವೀರಶೈವ ಲಿಂಗಾಯತ ಸಮುದಾಯ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಸದ್ಯ ಚರ್ಚೆ ಆಗುತ್ತಿರುವ ವಿವಿಧಾತ್ಮಕ ಕೃತಿಯಲ್ಲಿ ಕೃತಿಕಾರ ರವಿ ಹಂಜ್ ಅವರು ಬಸವಣ್ಣನವರ ಗೌರವಕ್ಕೆ ಮತ್ತು ಚಿಂತನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಮಂಡಿಸಿರುವ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ಕೂಡಲೇ ವಿವಾದಾತ್ಮಕ ಕೃತಿ ಕುರಿತಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು.
ಜಗತ್ತಿಗೆ ಧರ್ಮದ ಮೂಲಕ ಶಾಂತಿಯನ್ನು ಸಾರಿದ ಬಸವಣ್ಣನವರ ಸಾರ್ವಕಾಲಿಕ ಚಿಂತನೆಗಳು ಮುಂದಿನ ಜನಾಂಗಕ್ಕೂ ದಾರಿ ದೀಪ ಆಗಿವೆ. ರಾಜ್ಯ ಸರ್ಕಾರ ಬಸವಣ್ಣನವರನ್ನು ಕೇವಲ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು.
ಬಸವಣ್ಣನವರ ಚಿಂತನೆ ಮತ್ತು ಸಿದ್ಧಾಂತಗಳಿಗೆ ಪೂರಕವಾಗಿಯೂ ನಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಈ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಬೇಕು. ವಿವಾದಾತ್ಮಕ ಕೃತಿಯನ್ನು ಮುಟ್ಟುಗೋಲ ಹಾಕಿಕೊಳ್ಳಬೇಕು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R