ವಿಶೇಷ ಪರಿಷ್ಕರಣೆಯ ನಂತರ ಕೋಲಾರ ಜಿಲ್ಲೆಯಲ್ಲಿ ೩೭ ಹೊಸ ಮತಗಟ್ಟೆಗಳ ಸ್ಥಾಪನೆ
ವಿಶೇಷ ಪರಿಷ್ಕರಣೆಯ ನಂತರ ಕೋಲಾರ ಜಿಲ್ಲೆಯಲ್ಲಿ ೩೭ ಹೊಸ ಮತಗಟ್ಟೆಗಳ ಸ್ಥಾಪನೆ
ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸಮಗ್ರ ಮತದಾರರ ಪರಿಷ್ಕರಣೆಯ ಬಗ್ಗೆ ಮಾಹಿತಿ ನೀಡಿದರು.


ಕೋಲಾರ,19 ನವೆಂಬರ್ (ಹಿ.ಸ.)

ಜಿಲ್ಲೆಯ ಆರು ತಾಲೂಕುಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ೧,೨೦೦ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಿ ಹೊಸದಾಗಿ ೩೭ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲ್ಲಿ ಗುರುವಾರ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಎಸ್ಐಆರ್ ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿ ಒಟ್ಟು ೧೨,೯೫,೨೬೫ ಮತದಾರರಿದ್ದು, ಗೈರುಹಾಜರಿ, ಸ್ಥಳಾಂತರ ಹಾಗೂ ದ್ವಿ-ನೋಂದಣಿ ಪಟ್ಟಿಯಲ್ಲಿ ೧,೭೧,೦೩೪ ಮತದಾರರು ಹೊರಗುಳಿದಿದ್ದಾರೆ. ಸುಮಾರು ೧,೪೨,೦೦೦ ಜನರಿಗೆ ನೋಟಿಸ್ ನೀಡಿ ದಾಖಲೆ ಪರಿಶೀಲಿಸಿದ ಬಳಿಕ ೬,೨೩೪ ಮತದಾರರನ್ನು ಕೈಬಿಡಲಾಗಿದ್ದು, ಅಕ್ಟೋಬರ್ ೨೭, ೨೦೨೬ರಂದು ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ ಒಟ್ಟು ೧೧,೩೯,೩೯೩ ಮತದಾರರಿದ್ದಾರೆ ಎಂದು ವಿವರಿಸಿದರು.

ಮತಗಟ್ಟೆಗಳ ವಿವರ ನೀಡಿದ ಅವರು, ಎಸ್ಐಆರ್ಗೂ ಮುನ್ನ ಜಿಲ್ಲೆಯಲ್ಲಿ ೧,೫೩೮ ಮತಗಟ್ಟೆಗಳಿದ್ದು, ಪರಿಷ್ಕರಣೆ ವೇಳೆ ೪೦ ಹೆಚ್ಚುವರಿ ಮತಗಟ್ಟೆ ಸೇರ್ಪಡೆಯಾಗಿ ೧,೫೭೮ಕ್ಕೆ ಏರಿಕೆಯಾಗಿತ್ತು. ಇದೀಗ ಪುನಃ ೩೭ ಹೊಸ ಮತಗಟ್ಟೆಗಳು ಸೇರ್ಪಡೆಯಾಗುತ್ತಿದ್ದು, ಇದರಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ೩, ಮುಳಬಾಗಿಲಿನಲ್ಲಿ ೬, ಕೆಜಿಎಫ್ನಲ್ಲಿ ೪, ಬಂಗಾರಪೇಟೆಯಲ್ಲಿ ೭, ಕೋಲಾರದಲ್ಲಿ ೭ ಹಾಗೂ ಮಾಲೂರಿನಲ್ಲಿ ೧೦ ಹೊಸ ಮತಗಟ್ಟೆಗಳು ಸ್ಥಾಪನೆಯಾಗಲಿವೆ ಎಂದರು.

ಪ್ರಸ್ತುತ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಇದುವರೆಗೆ ೧,೯೪೨ ಅರ್ಜಿಗಳು ಸಲ್ಲಿಕೆಯಾಗಿವೆ. ಡಿಸೆಂಬರ್ ೧, ೨೦೨೬ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆಕ್ಷೇಪಣೆ ಹಾಗೂ ಸೇರ್ಪಡೆಗೆ ಜನವರಿ ೧, ೨೦೨೭ರವರೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಪರಿಶೀಲನೆ ಬಳಿಕ ಜನವರಿ ೨೦, ೨೦೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಜನವರಿ ೨೫ರ ರಾಷ್ಟ್ರೀಯ ಮತದಾರರ ದಿನದಂದು ಹೊಸ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.

ಅಪೂರ್ಣ ದಾಖಲೆಗಳಿಂದ ಎಸ್ಐಆರ್ನಲ್ಲಿ ಅರ್ಜಿ ತಿರಸ್ಕೃತಗೊಂಡಿದ್ದ ಅರ್ಹ ಮತದಾರರು ಸೂಕ್ತ ದಾಖಲೆಗಳೊಂದಿಗೆ ಫಾರಂ ೬ರ ಮೂಲಕ ಮರು ಅರ್ಜಿ ಸಲ್ಲಿಸಬಹುದು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಾಮೂಹಿಕವಾಗಿ (ಬಲ್ಕ್) ಹೆಸರು ಕೈಬಿಡಲು ಅರ್ಜಿ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎಸ್ಎಸ್ಆರ್ ಪ್ರಕ್ರಿಯೆಗೂ ರಾಜಕೀಯ ಪಕ್ಷಗಳು ಹಾಗೂ ಬಿಎಲ್ಎಗಳು ಸಹಕಾರ ನೀಡುವಂತೆ ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande