
ಕೋಲಾರ, 19 ನವೆಂಬರ್ (ಹಿ.ಸ.)
ಕನ್ನಡ ರಾಜ್ಯೋತ್ಸವ ಎಂದರೆ ಬರಿ ಬಾವುಟಗಳನ್ನು ಕಟ್ಟುವುದಲ್ಲ. ಈಗ ಕನ್ನಡ ಭಾಷೆ ಬರಿ ಭಾಷೆ ಅಲ್ಲ. ಜ್ಞಾನ ವಿಜ್ಞಾನ ತಂತ್ರಜ್ಞಾನ ಎಲ್ಲವೂ ಒಳಗೊಂಡು ಕನ್ನಡ ಬದುಕಿನ ಭಾಗವಾಗಿದೆ ಎಂದು ಕನ್ನಡದ ಪ್ರಸಿದ್ಧ ಸಂಸ್ಕöÈತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದರು.
ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸ0ದ್ರ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಯಿಂದ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಕೇವಲ ಆಚರಣೆ ಆಗಿದೆ. ಆದರೆ ಈಗ ನಾವು ಜ್ಞಾನಕ್ಕಾಗಿ ಬೇರೆ ಬೇರೆ ಭಾಷೆಗಳನ್ನು ಅವಲಂಬಿಸುತ್ತಿದ್ದೇವೆ. ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಅವುಗಳನ್ನು ಕನ್ನಡಕ್ಕೆ ಪೂರಕವಾಗಿ ಬಳಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಇವತ್ತು ಕನ್ನಡವನ್ನು ಬೆಳೆಸುವ ಜವಾಬ್ದಾರಿ ಎಲ್ಲರದು ಆಗಿದೆ. ಕನ್ನಡ ಇವತ್ತು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಕನ್ನಡ ಎಲ್ಲಿ ಉಳಿದುಕೊಂಡಿದೆ ಎಂದರೆ ಜನರ ಬದುಕಿನಲ್ಲಿ. ಕನ್ನಡ ನುಡಿ ಯುವವರ ಬದುಕು ಸರಿಯಾಗಬೇಕು. ಆಗ ಕನ್ನಡ ಉಳಿಯುತ್ತದೆ. ನಮ್ಮಲ್ಲಿ ಹಲವು ಕನ್ನಡಂಗಳ್ ಇವೆ. ಆ ಎಲ್ಲಾ ನಮ್ಮ ಸೋದರ ಸೋದರಿ ಭಾಷೆಗಳನ್ನು ಗೌರವಿಸಬೇಕು.ಸರಕಾರಿ ವಿಶ್ವವಿದ್ಯಾಲಯಗಳು ಬೆಳೆಯಬೇಕು ಎಂದರೆ ಅಲ್ಲಿನ ಅತಿಥಿ ಉಪನ್ಯಾಸಕರಿಗೆ ಉದ್ಯೋಗದ ಭದ್ರತೆ ಕೊಡಬೇಕು. ಆಗ ಅವರು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಸ್ಟೆಲ್ ವ್ಯವಸ್ಥೆ ಸಮರ್ಪಕವಾಗಿ ಸಿಕ್ಕರೆ ಅವರಿಗೆ ಶಿಕ್ಷಣದಲ್ಲಿ ಮುಂದುವರೆಯಲು ಸಹಕಾರಿಯಾಗುತ್ತದೆ ಇದು ಕೂಡ ಮುಖ್ಯವಾಗಿ ಕನ್ನಡ ಕಟ್ಟುವ ಕೆಲಸವೇ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಕೆ .ರವಿ ಮಾತನಾಡಿ, ಕನ್ನಡವನ್ನು ಕೇವಲ ವರ್ಷಕ್ಕೆ ಒಂದು ಸಾರಿ ಆಚರಿಸುವುದಲ್ಲ ಕನ್ನಡ ಉಳಿಸುವುದರಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಬಹಳ ದೊಡ್ಡದಿದೆ ಆ ನಿಟ್ಟಿನಲ್ಲಿ ನಾವು ಕೆಲಸವನ್ನು ನಿರ್ವಹಿಸುತ್ತಿದ್ದೇವೆ.ಇಂಗ್ಲಿಷಿನ ವ್ಯಾಮೋಹದಿಂದ ಎಂಬಿಎ, ಎಂ ಟೆಕ್ ಮಾಡಿಕೊಂಡಿರುವವರು ಬೇರೆ ದೇಶಕ್ಕೆ ಹೋದರೂ ಅಲ್ಲಿ ನಮ್ಮವರು ಪೆಟ್ರೋಲ್ ಬಂಕಗಳಲ್ಲಿ ಸಣ್ಣಪುಟ್ಟ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅದಕ್ಕಿಂತಲೂ ದೊಡ್ಡ ಉದ್ಯೋಗ ನಮ್ಮಲ್ಲಿಯೇ ಸಿಗುತ್ತದೆ. ಇಲ್ಲಿ ಕಲಿತು ಇಲ್ಲಿಗೆ ಅವರು ಸೇವೆಯನ್ನು ಮಾಡಬಹುದು ಎಂದರು.
ನಾವೆಲ್ಲಾ ಕನ್ನಡ ಮಾಧ್ಯಮದಲ್ಲಿಯೇ ಓದಿ ಇಲ್ಲಿಯ ಬದುಕನ್ನು ಕಟ್ಟಿಕೊಂಡೆವು. ಕನ್ನಡ ಕಡಿಮೆ ಎನ್ನುವ ಮನೋಭಾವನೆಯನ್ನು ತೊರೆಯಬೇಕು. ಎಲ್ಲವನ್ನು ಕನ್ನಡವ ಮೂಲಕವೇ ಕಟ್ಟಬೇಕು. ಇಂಗ್ಲಿಷ್ ಮಾತನಾಡಲು ಬಂದರೆ ಅವರನ್ನು ಬುದ್ಧಿವಂತರು ಎಂದು ನೋಡುತ್ತೇವೆ. ಇಂಗ್ಲಿಷ್ ಬರದಿದ್ದರೂ ತಮ್ಮದೇ ವಿಷಯಗಳಲ್ಲಿ ಬುದ್ಧಿವಂತರಾಗಿರುತ್ತಾರೆ. ಬುದ್ಧಿವಂತಿಕೆಯನ್ನು ಭಾಷೆಯ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವ ಸಿ. ಎನ್. ಶ್ರೀಧರ್, ಕುಲಸಚಿವರು ಮೌಲ್ಯಮಾಪನ ಪ್ರೊ. ಎನ್. ಜಿ. ರಾಜು, ಹಣಕಾಸು ಅಧಿಕಾರಿ ಡಾ. ಗಂಗಾಧರ್ ಬಿ. ಎಸ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ. ಡಿ ಕುಮುದ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಲೋಕೇಶ್, ಆಶಾ ಸುಲ್ತಾನ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಜೈದೀಪ್, ಡಾ.ಜಮೀಲ್ ಅಹಮದ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆಯ ಕಾರ್ಯಕ್ರಮದ ನಂತರ ಜಾನಪದ ಕಲಾಪ್ರದರ್ಶನ ಏರ್ಪಡಿಸಲಾಗಿತ್ತು. ವೆಂಕಟರಮಣಪ್ಪ ಮತ್ತು ತಂಡದವರು ಅರೆ ವಾದ್ಯ,ಜೈ ಭೀಮ್ ತಮಟೆ ಕಲಾತಂಡದವರು ತಮಟೆಯನ್ನು, ಹರೀಶ್ ಮತ್ತು ತಂಡದವರು ವೀರಗಾಸೆಯನ್ನು, ಸಂತೋಷ್ ಮತ್ತು ತಂಡದವರು ಡೊಳ್ಳು ಕುಣಿತವನ್ನು ಪ್ರದರ್ಶಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್